ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ಖಿನ್ನತೆಯಿಂದ ಬಳಲುತ್ತಿದ್ದ ಉದ್ಯಮಿ, ಐಟಿ ಅಧಿಕಾರಿಗಳಿಗೆ ನಗರ ಬಿಡದಂತೆ ಎಸ್‌ಐಟಿ ಸೂಚನೆ
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಸಂಚಲನ ಮೂಡಿಸಿದ್ದ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹತ್ವದ ಮಾಹಿತಿಯನ್ನು ಕಲೆಹಾಕಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ರಾಯ್ ಅವರು ಕಳೆದ ಕೆಲವು ಸಮಯದಿಂದ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ (Depression) ಬಳಲುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ ರಾಯ್ ಅವರ ಆರೋಗ್ಯದ ಕುರಿತು ಮಹತ್ವದ ಸುಳಿವು ಲಭ್ಯವಾಗಿದೆ. ರಾಯ್ ಅವರು ಮಾನಸಿಕ ನೆಮ್ಮದಿಗಾಗಿ ಮನೋವೈದ್ಯರಿಂದ ಕೌನ್ಸೆಲಿಂಗ್ ಪಡೆಯುತ್ತಿದ್ದರು ಎನ್ನಲಾಗಿದೆ. ದುರಂತ ಸಂಭವಿಸುವುದಕ್ಕೂ ಮುನ್ನ ಅವರು ಜಯನಗರದಲ್ಲಿರುವ ಮನೋವೈದ್ಯರೊಬ್ಬರನ್ನು ಭೇಟಿಯಾಗಿ ಸಲಹೆ ಪಡೆದಿದ್ದರು ಎಂಬ ಮಾಹಿತಿಯೂ ತನಿಖಾ ತಂಡಕ್ಕೆ ಲಭ್ಯವಾಗಿದೆ.

ಎಸ್‌ಐಟಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ರಾಯ್ ಅವರ ಕಚೇರಿಯ ಕೊಠಡಿಯು ಸಂಪೂರ್ಣವಾಗಿ 'ಸೌಂಡ್ ಪ್ರೂಫ್' (ಧ್ವನಿ ನಿರೋಧಕ) ಆಗಿತ್ತು ಎಂಬುದು ದೃಢಪಟ್ಟಿದೆ. ಶುಕ್ರವಾರ ಮಧ್ಯಾಹ್ನ ಸುಮಾರು 3.15ರ ವೇಳೆಗೆ ರಾಯ್ ಅವರು ತಮ್ಮ ಲೈಸೆನ್ಸ್ಡ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಆದರೆ, ಕೊಠಡಿ ಧ್ವನಿ ನಿರೋಧಕವಾಗಿದ್ದರಿಂದ ಹೊರಗಡೆ ಕಚೇರಿಯಲ್ಲಿದ್ದ ಸಿಬ್ಬಂದಿಗೆ ಗುಂಡಿನ ಸದ್ದು ಕೇಳಿಸಿಲ್ಲ.
ಐಟಿ ಅಧಿಕಾರಿಗಳಿಗೆ ನಿರ್ಬಂಧ
ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆದಾಯ ತೆರಿಗೆ (IT) ಇಲಾಖೆಯ ಅಧಿಕಾರಿಗಳನ್ನು ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವರೆಗೂ ತನಿಖಾಧಿಕಾರಿಗಳ ಅನುಮತಿ ಪಡೆಯದೆ ಬೆಂಗಳೂರು ನಗರವನ್ನು ಬಿಟ್ಟು ಹೋಗದಂತೆ ಐಟಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಪ್ರಕರಣದ ದೂರುದಾರರಾಗಿರುವ ಕಾನ್ಫಿಡೆಂಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಹಾಗೂ ಸಂಸ್ಥೆಯ ಇತರ ಸಿಬ್ಬಂದಿಗಳ ಹೇಳಿಕೆಗಳನ್ನು ಎಸ್‌ಐಟಿ ದಾಖಲಿಸಿಕೊಳ್ಳುತ್ತಿದೆ. ರಾಯ್ ಅವರಿಗೆ ಯಾರಿಂದಲಾದರೂ ಬೆದರಿಕೆ ಇತ್ತೇ? ಅಥವಾ ಬೇರೆ ಯಾವುದಾದರೂ ಒತ್ತಡವಿತ್ತೇ ಎಂಬುದನ್ನು ತಿಳಿಯಲು ಕುಟುಂಬಸ್ಥರನ್ನು ವಿಚಾರಣೆ ನಡೆಸಲಾಗುತ್ತಿದೆ.
ಅನಗತ್ಯ ಊಹಾಪೋಹ ಬೇಡ: ಡಾ. ಜಿ. ಪರಮೇಶ್ವರ್
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, "ಐಟಿ ಅಧಿಕಾರಿಗಳ ಕಿರುಕುಳದಿಂದಲೇ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಸತ್ಯಾಸತ್ಯತೆ ತಿಳಿಯಲು ಸರ್ಕಾರ ಎಸ್‌ಐಟಿ ರಚಿಸಿದೆ. ತನಿಖಾ ವರದಿ ಬರುವ ಮುನ್ನ ಅನಗತ್ಯ ಊಹಾಪೋಹಗಳನ್ನು ಹಬ್ಬಿಸಬಾರದು. ಒಂದು ವೇಳೆ ಆತ್ಮಹತ್ಯೆಗೆ ಯಾರೇ ಪ್ರೇರಣೆ ನೀಡಿದ್ದರೂ ವರದಿಯಲ್ಲಿ ಅದು ಹೊರಬರಲಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ರಾಜ್ಯ ಸರ್ಕಾರವು ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಪಶ್ಚಿಮ) ಸಿ. ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ತನಿಖೆ ಚುರುಕುಗೊಂಡಿದೆ.












Click it and Unblock the Notifications