ಬಾಳೆಕಾಯಿ ಮಂಡಿ ಮಾಲೀಕ, ಸಿಎಂ ಸ್ಪೆಷಲ್ ಆಫೀಸರ್ ಆಗಿ ಜೈಲು ಸೇರಿದ!
ಬೆಂಗಳೂರು, ಡಿ. 15: ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಸೋಗಿನಲ್ಲಿ ವರ್ಗಾವಣೆ ಡೀಲಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ದೂರು ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ನಾನು ಆರ್‌ಎಸ್‌ಎಸ್ ಲೀಡರ್ ಎಂದು ಹೇಳಿಕೊಂಡು ನಿವೃತ್ತ ನ್ಯಾಯಾಧೀಶರಿಗೆ, ಪೊಲೀಸರಿಗೆ ಹಾಗೂ ರಾಜಕಾರಣಿಗಳಿಗೆ ನಾಮ ಹಾಕಿದ್ದ ಯುವರಾಜ್ ಸ್ವಾಮಿ ಎಂಬಾತ ಕೆಲ ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ. ಇದೀಗ ಅಂತಹದ್ದೇ ಮತ್ತೊಬ್ಬ ವಂಚಕ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
ಚಿಕ್ಕಬಳ್ಳಾಪುರ ಮೂಲದ ಉದಯ ಪ್ರಭು, ಬಂಧನಕ್ಕೆ ಒಳಗಾದವ. ಬೆಂಗಳೂರಿನ ಮೈಲಸಂದ್ರದಲ್ಲಿ ವಾಸವಾಗಿರುವ ಉದಯಪ್ರಭು ಮೂಲತಃ ಚಿಕ್ಕಬಳ್ಳಾಪುರದವ. ಬಿನ್ನಿಮಿಲ್ ಸಮೀಪ ಬಾಳಿಕಾಯಿ ಮಂಡಿ ನಡೆಸುತ್ತಿದ್ದ ಎನ್ನಲಾಗಿದೆ.
ನಾನು ಹಾಲಿ ಮುಖ್ಯಮಂತ್ರಿಗಳ ಕಚೇರಿಯ ಸ್ಪೆಷಲ್ ಆಫೀಸರ್ ಎಂದು ಹೇಳಿಕೊಂಡಿದ್ದ ಉದಯ ಪ್ರಭು ನನಗೆ ಮಾಜಿ ಸಿಎಂ ತಂಗಿ ಮಗನ ಸ್ನೇಹಿತ ಎಂದು ಉದಯ ಪ್ರಭು ಹೇಳಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ ಒಂದು ಲಕ್ಷ ರೂ. ನಗದು ಹಣ, ಮೂರು ಐಪೋನ್, ಒಂದು ಮ್ಯಾಕ್ ಬುಕ್ ವಶಪಡಿಸಿಕೊಳ್ಳಲಾಗಿದೆ. ಉದಯ ಪ್ರಭು ಬಳಸುತ್ತಿದ್ದ ಜಾಗ್ವಾರ್ ಕಾರ್, ಇನ್ನೋವಾ ಕ್ರಿಸ್ಟಾ ಕೂಡ ವಶಕ್ಕೆ ಪಡೆಯಲಾಗಿದ್ದು, ಕಾರಿನಲ್ಲಿ ಹಲವು ದಾಖಲೆಗಳು ಸಿಕ್ಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾನು ಐಎಎಸ್, ಐಪಿಎಸ್ ಹಾಗೂ ಡಿವೈಎಸ್ಪಿ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ವರ್ಗಾವಣೆ ಮಾಡಿಕೊಡುವುದಾಗಿ ಹಲವರನ್ನು ನಂಬಿಸಿದ್ದ. ಮಾತ್ರವಲ್ಲ ಕೆಲವರನ್ನು ವರ್ಗಾವಣೆ ಕೂಡ ಮಾಡಿಸಿದ್ದ ಎನ್ನಲಾಗಿದೆ. ಹೀಗಾಗಿ ಈತ ವರ್ಗಾವಣೆ ಮಾಡಿಸಿರುವುದನ್ನು ನಂಬಿಯೇ ಅನೇಕರು ಹಣ ನೀಡಿದ್ದರು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಸಿಎಂ ಬದಲಾವಣೆಯಾದ ಬಳಿಕವೂ ಉದಯ ಪ್ರಭು ತನ್ನ ಕೈಚಳಕ ತೋರಿಸಿದ್ದ. ಅನೇಕರಿಂದ ವರ್ಗಾವಣೆ ಮಾಡಿಕೊಡುವುದಾಗಿ ಹಣ ಪಡೆದಿದ್ದ. ಈ ಕುರಿತು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಮೌಖಿಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಉದಯ ಪ್ರಭು ಹಿನ್ನೆಲೆ ಕಲೆ ಹಾಕಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಕೆಲವು ಸ್ಫೋಟಕ ಸಂಗತಿಗಳು ಹೊರ ಬಿದ್ದಿದ್ದು, ಮೋಸಕ್ಕೆ ಒಳಗಾದವರು, ಉದಯ ಪ್ರಭು ಬಳಿ ವ್ಯವಹಾರ ಮಾಡಿರುವರ ಪಟ್ಟಿ ಸಿಸಿಬಿ ತನಿಖೆಯಲ್ಲಿ ಬಯಲಾಗಬೇಕಿದೆ. ಇನ್ನು ಉದಯ ಪ್ರಭು ಮೊಬೈಲ್ ಸಂಪರ್ಕದಲ್ಲಿರುವರ ಕರೆಗಳ ವಿವರಗಳನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿ ಅನ್ವೇಷಣೆ ಮಾಡುತ್ತಿದ್ದಾರೆ.

ಕರ್ನಾಟಕ ಸರ್ಕಾರ ಎಂದು ಸರ್ಕಾರಿ ಬೋರ್ಡ್‌ಗಳನ್ನು ತನ್ನ ಕಾರುಗಳ ಮೇಲೆ ಹಾಕಿಕೊಂಡು ವಿಧಾನಸೌಧ ಮಾತ್ರವಲ್ಲದೇ ಅನೇಕ ಕಡೆ ನಾನು ಸಿಎಂ ಸ್ಪೆಷಲ್ ಆಫೀಸರ್ ಎಂದು ಹೇಳಿಕೊಳ್ಳುತ್ತಿದ್ದ. ಅರೋಪಿಯ ಬಳಿ ನಕಲಿ ಐಡಿ ಕಾರ್ಡ್ ಕೂಡ ಸಿಕ್ಕಿದ್ದು ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಆಯುಕ್ತರ ಸ್ಪಷ್ಟನೆ: ಸಿಎಂ ಕಚೇರಿ ವಿಶೇಷ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈತ ತನ್ನ ಕಾರುಗಳ ಮೇಲೆ ಸರ್ಕಾರದ ಲಾಂಛನ ಹಾಕಿಕೊಂಡಿದ್ದಾನೆ. ಬಂಧಿತ ಆರೋಪಿ ಬಳಿ ನಕಲಿ ಐಡಿ ಕಾರ್ಡ್ ಸಿಕ್ಕಿದ್ದು, ಈತನಿಂದ ಮೋಸ ಹೋಗಿರುವವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾರಾದರೂ ವಂಚನೆಗೆ ಒಳಗಾಗಿದ್ದರೆ ಸಿಸಿಬಿ ಪೊಲೀಸರಿಗೆ ದೂರು ಕೊಡಬಹುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸ್ಪಷ್ಟನೆ ನೀಡಿದ್ದಾರೆ.

ದೂರು ಕೊಡಲು ಹಿಂದೇಟು: ಸಾಮಾನ್ಯವಾಗಿ ಇಂತಹ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದೂರು ಕೊಡಲು ಯಾವ ಅಧಿಕಾರಿಯೂ ಮುಂದಾಗುವುದಿಲ್ಲ. ಒಂದು ವರ್ಗಾವಣೆ ವಿಚಾರವಾಗಿ ಕೊಡುವುದೇ ಕಪ್ಪು ಹಣ. ಹೀಗಾಗಿ ದೂರು ಕೊಟ್ಟರೆ ಅವರ ಹೆಸರು ಬಹಿರಂಗವಾಗಿ ಸಮಾಜದಲ್ಲಿ ಅವಮಾನಕ್ಕೆ ಒಳಗಾಗುತ್ತಾರೆ. ಇನ್ನು ದೂರು ಕೊಟ್ಟ ಬಳಿಕ ಕೊಟ್ಟ ಹಣಕ್ಕೆ ಲೆಕ್ಕ ತೋರಿಸಬೇಕು. ಇದರ ಜತೆಗೆ ಎಸಿಬಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೇರೆ ಬೆನ್ನು ಬೀಳುತ್ತಾರೆ. ಹೀಗಾಗಿ ಕೊಟ್ಟವರ ಪರಿಸ್ಥಿತಿ ಇಂಗು ತಿಂದ ಮಂಗನಂತಾಗುತ್ತದೆ. ಬಹುತೇಕ ಅಧಿಕಾರಿಗಳು ಯಾರೂ ದೂರು ಕೊಡಲು ಮುಂದಾಗುವುದು ಅಪರೂಪ. ಉದಯ ಪ್ರಭು ಪ್ರಕರಣದಲ್ಲಿ ಇದು ಮರುಕಳಿಸಿದರೂ ಅಚ್ಚರಿ ಪಡಬೇಕಿಲ್ಲ. ಈ ಹಿಂದೆ ರಾಜಕಾರಣಿಗಳಿಗೆ, ನಿವೃತ್ತ ಜಡ್ಜ್‌ಗಳಿಗೆ ವಂಚನೆ ಮಾಡಿದ್ದ ಯುವರಾಜ್ ಸ್ವಾಮಿ ವಂಚನೆ ಜಾಲ ಹೊರ ಬಿದ್ದರೂ ಕೋಟ್ಯಂತರ ರೂಪಾಯಿ ಹಣ ಕೊಟ್ಟಿದ್ದವರು ಯಾರೂ ದೂರು ನೀಡಲು ಮುಂದಾಗಲಿಲ್ಲ.
ಹೀಗಾಗಿ ಕೊಟ್ಟವ ಕೊಂಡಗಿ, ಇಸ್ಕೊಂಡವನು ವೀರಭದ್ರ ಎಂಬಂತಾಗಿದೆ. ಅಂತೂ ಈ ಪ್ರಕರಣದಲ್ಲಿ ಯಾರ್ಯಾರ ಹೆಸರು ಹೊರ ಬರುತ್ತವೆ ಕಾದು ನೋಡಬೇಕು. ಒಬ್ಬ ಬಾಳೆ ಕಾಯಿ ಮಂಡಿ ನಡೆಸುವ ಜಾಗ್ವಾರ್ ಕಾರು ಇಟ್ಟುಕೊಂಡಿದ್ದಾನೆ ಎಂದಾದರೆ ಬಿನ್ನಿ ಮಿಲ್‌ನಲ್ಲಿ ಬಾಳೆಕಾಯಿ ವ್ಯಾಪಾರ ಮಾಡುವರೆಲ್ಲರೂ ಅಲ್ಲಿ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ಇರುತ್ತಿರಲಿಲ್ಲ. ಬದಲಿಗೆ ಜಾಗ್ವಾರ್ ಕಾರು ಇಟ್ಟುಕೊಳ್ಳುತ್ತಿದ್ದರು. ಈ ಪ್ರಕರಣದಲ್ಲಿ ಉದಯ ಪ್ರಭು ವರ್ಗಾವಣೆ ದಂಧೆಯ ಕಿಂಗ್ ಪಿನ್ ಆಗಿ ಕಾರ್ಯ ನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸಿಸಿಬಿ ತನಿಖೆಯಲ್ಲಿ ಏನೆಲ್ಲಾ ಹೊರ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕು.












Click it and Unblock the Notifications