ಪಾದ್ರಿಗಳು ಬೈಬಲ್ ಬಾಂಬ್ ಸಿಡಿಸುತ್ತಾರೆ : ಚಿಮೂ

ಬೆಂಗಳೂರಿನಲ್ಲಿ ಶುಕ್ರವಾರ ವಿವಿಧ ಹಿಂದೂ ಸಂಘಟನೆಗಳು ಕ್ರಿಶ್ಚಿಯನ್ ಪಾದ್ರಿ ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸುವುದನ್ನು ವಿರೋಧಿಸಿ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ, ಸಂಶೋಧಕ ಚಿದಾನಂದಮೂರ್ತಿ, ಮತಾಂತರ ಹಿಂದೂ ಸಂಸ್ಕೃತಿಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. [ಬೆಂಗಳೂರಿಗೆ ಮತ್ತೆ ಬೆನ್ನಿಹಿನ್]
ಯಾಸೀನ್ ಭಟ್ಕಳ್ ರಂತಹ ಮುಸ್ಲಿಮರು ಬಾಂಬ್ ಸ್ಫೋಟಿಸುವ ಮೂಲಕ ಹಿಂದೂಗಳಿಗೆ ಕಂಟಕವಾಗಿದ್ದರೆ, ಕ್ರಿಶ್ಚಿಯನ್ ಪಾದ್ರಿಗಳು ಬೈಬಲ್ ಎಂಬ ಬಾಂಬ್ ಸ್ಫೋಟಿಸಿ ಹಿಂದೂಗಳನ್ನು ನಾಶಮಾಡುತ್ತಿದ್ದಾರೆ. ಮತಾಂತರ ಮಾಡಲು ಆಗಮಿಸುತ್ತಿರುವ ಪಾದ್ರಿ ಬೆನ್ನಿಹಿನ್ ಬೆಂಗಳೂರಿಗೆ ಬರದಂತೆ ತಡೆಯಬೇಕು ಎಂದು ಅವರು ಒತ್ತಾಯಿಸಿದರು.
ಸ್ವಾಮಿ ವಿವೇಕಾನಂದರು ಕ್ರಿಶ್ಚಿಯನ್ ಪಾದ್ರಿಗಳು ಮತಾಂತರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಸನಾತನ ಧರ್ಮವನ್ನು ಉಳಿಸಿದ್ದರು. ಬೆಂಗಳೂರಿಗೆ ಮತಾಂತರಗೊಳಿಸಲು ಆಗಮಿಸುತ್ತಿರುವ ಪಾದ್ರಿ ಬೆನ್ನಿಹಿನ್ ಅನ್ನು ನಾವು ಹೋರಾಟ ನಡೆಸಿ ವಾಪಸ್ ಕಳುಹಿಸಬೇಕು ಎಂದು ಚಿದಾನಂದ ಕರೆ ನೀಡಿದರು.
ಮಹಾತ್ಮಾ ಗಾಂಧಿ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ, ತಮ್ಮ ಬಳಿ ಅಧಿಕಾರವಿದ್ದಿದ್ದರೆ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದಾಗಿ ಹೇಳಿದ್ದರು. ಸ್ವಾಮಿ ವಿವೇಕಾನಂದರು ಸಹ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಿಂದೂ ಧರ್ಮದ ಉಳಿವಿಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಬೇಕು ಎಂದು ಅವರು ಒತ್ತಾಯಿಸಿದರು.
ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಬಾರದು. ಬೆನ್ನಿಹಿನ್ ಬರದಂತೆ ತಡೆಯುವಂತೆ ಹಿಂದುಗಳೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಚಿದಾನಂದಮೂರ್ತಿ ಹೇಳಿದರು. ವಿವಿಧ ಹಿಂದೂ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ವಿಧಾನ ಪರಿಷತ್ ಸದಸ್ಯೆ ತಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಜನವರಿ 15ರಿಂದ ಜ.19ರವರೆಗೆ ಇಸ್ರೇಲ್ ಮೂಲದ ಬೈಬಲ್ ಶಿಕ್ಷಕ ಬೆನ್ನಿ ಹಿನ್ ಬೆಂಗಳೂರಿನ ಯಲಹಂಕದಲ್ಲಿರುವ ಸೂಪರ್ ನೋವಾ ಅರೀನಾ ಪ್ರದೇಶದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಸಮ್ಮೇಳವನ್ನು ಹಮ್ಮಿಕೊಂಡಿದ್ದಾನೆ. ಪ್ರತಿದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ.












Click it and Unblock the Notifications