ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್‌ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು
ಬೆಂಗಳೂರು, ಜನವರಿ 17: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ, ಉದ್ಯಮಿ ಉದಯ್ ಗರುಡಾಚಾರ್‌ಗೆ ಹೃದಯಘಾತವಾಗಿದೆ. ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ಸಂಜೆ ಶಾಸಕ ಉದಯ್ ಗರುಡಾಚಾರ್‌ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಜ್ಞ ವೈದ್ಯರ ತಂಡ ಶಾಸಕರ ಆರೋಗ್ಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದೆ. ಶಾಸಕರ ಆರೋಗ್ಯ ಬಗ್ಗೆ ಆಸ್ಪತ್ರೆ ಯಾವುದೇ ಹೆಲ್ತ್ ಬುಲೆಟಿನ್ ಇಲ್ಲಿಯ ತನಕ ಬಿಡುಗಡೆ ಮಾಡಿಲ್ಲ.

ಸಂಜೆ ಮನೆಯಲ್ಲಿ ವ್ಯಾಯಾಮ ಮಾಡುವಾಗ ಶಾಸಕ ಉದಯ್ ಗರುಡಾಚಾರ್‌ಗೆ ಲಘು ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿ, ಚಿಕಿತ್ಸೆ ನೀಡಿದ್ದಾರೆ.
ಬುಧವಾರ ಬೆಳಗ್ಗೆ ಶಾಸಕ ಉದಯ್ ಗರುಡಾಚಾರ್ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ನಡೆಯುತ್ತಿರುವ ದೇವಾಲಯಗಳ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ದೇವಾಲಯ ಸ್ವಚ್ಛತಾ ಅಭಿಯಾನದ ಭಾಗವಾಗಿ ಸುಂಕೇನಹಳ್ಳಿ ವಾರ್ಡ್‌ನ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣವನ್ನು ಬಿಜೆಪಿ ಕಾರ್ಯಕರ್ತರ ಜೊತೆ ಸ್ವಚ್ಛಗೊಳಿಸಿದ್ದ ಶಾಸಕರು ನಂತರ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.
ಮಂಗಳವಾರ ಶಾಸಕರು ವಿ. ವಿ. ಪುರಂ ವಾರ್ಡ್‌ನ ಸಜ್ಜನ್ ರಾವ್ ವೃತ್ತದ ಬಳಿಯಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದರು ಮತ್ತು ಭಕ್ತರಿಗೆ 2024ರ ಕ್ಯಾಲೆಂಡರ್ ಅನ್ನು ವಿತರಿಸಿದ್ದರು.
ಉದಯ್ ಗರುಡಾಚಾರ್ 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 57,299 ಮತಗಳನ್ನು ಪಡೆದು 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎದುರಾಳಿಯಾದ ಕಾಂಗ್ರೆಸ್‌ನ ಆರ್. ವಿ. ದೇವರಾಜ್ (45,186 ಮತಗಳು) ಸೋಲಿಸಿದ್ದಾರೆ.
2018ರ ಚುನಾವಣೆಯಲ್ಲಿ ಸಹ 57,312 ಮತಗಳನ್ನು ಪಡೆದು ಉದಯ್ ಗರುಡಾಚಾರ್ ಚಿಕ್ಕಪೇಟೆಯಲ್ಲಿ ಗೆಲುವು ಸಾಧಿಸಿದ್ದರು. ಆಗಲೂ ಎದುರಾಳಿಯಾಗಿದ್ದ ಆರ್. ವಿ. ದೇವರಾಜ್ (49,378 ಮತಗಳು) ಸೋಲಿಸಿದ್ದರು.












Click it and Unblock the Notifications