School Colleges: ಶಾಲೆ-ಕಾಲೇಜುಗಳಿಗೆ ಹುಸಿಬಾಂಬ್ ಬೆದರಿಕೆ ಒಡ್ಡಿದ್ದಾಕೆ ಪೊಲೀಸ್ ವಶಕ್ಕೆ
ಬೆಂಗಳೂರು, ನವೆಂಬರ್ 06: ಬೆಂಗಳೂರು ನಗರದಾದ್ಯಂತ ಶಾಲಾ-ಕಾಲೇಜುಗಳಿಗೆ ಬಾಂಬ್ ಬೆದರಿಕೆ ಒಡ್ಡಿದ ಇಮೇಲ್‌ಗಳನ್ನು ಕಳುಹಿಸಿದ ಆರೋಪದ ಮೇರೆಗೆ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬಳನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿತೆ ಚೆನ್ನೈ ಮೂಲದವಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖಾಸಗಿ ಸಾಫ್ಟ್‌ವೇರ್ ಸಂಸ್ಥೆಯ ಉದ್ಯೋಗಿಯಾದ ಆರೋಪಿ ರೆನೆ ಜೋಶಿಲ್ಡಾ (30). ಶಾಲಾ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡಿದ್ದ ಆರೋಪದ ಮೇರೆಗೆ ನಗರದ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವರ್ಷದ ಜೂನ್ 14 ರಂದು ಕಲಾಸಿಪಾಳ್ಯದ ಸಾರ್ವಜನಿಕ ಶಾಲೆ ಸೇರಿದಂತೆ ಹಲವಾರು ಸಂಸ್ಥೆಗಳಿಗೆ ತಾನು ವಂಚನೆ ಇಮೇಲ್‌ಗಳನ್ನು ಕಳುಹಿಸಿದ್ದಾಗಿ ಆಕೆ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.

ಇದೇ ವರ್ಷ ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಜನರು ಸಾವನ್ನಪ್ಪಿದ ಘಟನೆಗೆ ತಾನು ಕಾರಣ ಎಂದು ಸೂಚಿಸುವ ಇಮೇಲ್ ಕಳುಹಿಸಿದ್ದಳು ಎಂಬ ಆರೋಪಿ ಈಕೆಯ ಮೇಲಿದೆ. ಇದಕ್ಕಾಗಿಯೇ ಜೋಶಿಲ್ಡಾ ಳನ್ನು ಗುಜರಾತ್ ಸೈಬರ್ ಪೊಲೀಸರು ಈ ಹಿಂದೆ ಬಂಧಿಸಿದ್ದರು. ಬಳಿಕ ವಿಚಾರಣೆಗೆಂದು ಕರೆತಂದಿದ್ದ ಪೊಲೀಸರು ಮತ್ತೆ ಮರಳಿ ಅಕ್ಟೋಬರ್ 28 ರಂದು ಗುಜರಾತ್ ಪೊಲೀಸರಿಗೆ ಹಸ್ತಾಂತರಿಸಿದ್ದರು. ಇದೀಗ ಬೆಂಗಳೂರು ಪೊಲೀಸರು ಶಾಲಾ ಕಾಲೇಜು ಬಾಂಬ್ ಪ್ರಕರಣ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂಬ ಸಂಗತಿ ಬಯಲಾಗಿದೆ.
ಈ ಬಂಧಿತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿದ್ದು ಗೊತ್ತಾಗಿದೆ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಗುಜರಾತ್‌ನ ಅಹಮದಾಬಾದ್ ಕೇಂದ್ರ ಕಾರಾಗೃಹದಲ್ಲಿ ದಾಖಲಾಗಿದ್ದ ಜೋಶಿಲ್ಡಾ, ತನ್ನ ಗುರುತನ್ನು ಮರೆಮಾಚಲು ವಿಪಿಎನ್ ಸೇವೆಗಳು ಮತ್ತು GetCood ಅಪ್ಲಿಕೇಶನ್ ಮೂಲಕ ಪಡೆದ ವರ್ಚುವಲ್ ಮೊಬೈಲ್ ಸಂಖ್ಯೆ ಬಳಸಿದ್ದ ಪೊಲೀಸರಿಗೆ ಗೊತ್ತಾಗಿದೆ. ತನ್ನ ಕೃತ್ಯಗಳಿಗಾಗಿ ಆಕೆ ಏಳು ವಾಟ್ಸಾಪ್ ಖಾತೆ ರಚಿಸಿಕೊಂಡಿದ್ದಳು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಬೆಂಗಳೂರಿನ ಪೊಲೀಸರು ಬಾಡಿ ವಾರಂಟ್ ಅಡಿಯಲ್ಲಿ ಆರೋಪಿತಳನ್ನು ನಗರಕ್ಕೆ ಕರೆತಂದಿದ್ದಾರೆ. ಈಕೆಯು ಗುಜರಾತ್, ಮೈಸೂರು ಮತ್ತು ಚೆನ್ನೈನ ಹಲವು ಸಂಸ್ಥೆಗಳಿಗೆ ಬೆದರಿಕೆಗಳನ್ನು ಒಡ್ಡಿದ್ದಾಳೆ ಎಂಬುದು ವಿಚಾರಣೆ ಬಹಿರಂಗವಾಗಿದೆ. ಇದರಲ್ಲಿ ಒಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಕಳುಹಿಸಿದ್ದ ಬೆದರಿಕೆ ಘಟನೆಯು ಸೇರಿದೆ
ಹಿರಿಯ ಪೊಲೀಸ್ ಅಧಿಕಾರಿ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈಕೆ ಹೀಗೆಲ್ಲ ಮಾಡಿದ್ದಾಳೆ ಎಂಬುದು ಗೊತ್ತಾಗಿದೆ. ಈಕೆ ಕೆಟ್ಟ ಉದ್ದೇಶದಿಂದಲೇ ಸುಳ್ಳು ಆರೋಪ ಸಹ ಮಾಡಿದ್ದಳು. ಅವರ ಮೇಲ್ ಐಡಿಯಿಂದಲೇ ಶಾಲಾ ಕಾಲೇಜುಗಳಿಗೆ ಬೆದರಿಕೆಯ ಇಮೇಲ್ ಕಳುಹಿಸಿದ್ದಳು ಎಂಬುದನ್ನು ಪೊಲೀಸರು ವಿಚಾರಣೆ ಬಳಿಕ ತಿಳಿಸಿದ್ದಾರೆ.












Click it and Unblock the Notifications