ಮೆಡಿಕಲ್ ಶಾಪ್ ಗಳ ಮುಷ್ಕರಕ್ಕೆ ಕರ್ನಾಟಕದ ಬೆಂಬಲ!
ಬೆಂಗಳೂರು, ಅ.13: ಕೇಂದ್ರ ಸರ್ಕಾರದ ಆನ್‌ಲೈನ್ ಫಾರ್ಮಸಿ ಮೂಲಕ ಔಷಧಿ ಮಾರಾಟ ಮಾಡುವ ಕ್ರಮ ಖಂಡಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಅಕ್ಟೋಬರ್ 14ರಂದು ಮುಷ್ಕರ ಹಮ್ಮಿಕೊಂಡಿದೆ. ಪ್ರಥಮ ಬಾರಿಗೆ ದೇಶಾದ್ಯಂತ ಔಷಧ ವ್ಯಾಪಾರ ಮುಷ್ಕರ ನಡೆಯುತ್ತಿದ್ದು, ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಈ ಮುಷ್ಕರಕ್ಕೆ ಕರ್ನಾಟಕ ಔಷಧ ಮಾರಾಟಗಾರರ ಸಂಘ ಕೂಡಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ, ಅಗತ್ಯ ಔಷಧ, ಇಂಜೆಕ್ಷನ್ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. [ರಾಷ್ಟ್ರವ್ಯಾಪ್ತಿ ಮೆಡಿಕಲ್ ಶಾಪ್ ಗಳ ಬಂದ್]
ಕರ್ನಾಟಕದಲ್ಲಿರುವ ಸುಮಾರು 26 ಸಾವಿರಕ್ಕೂ ಅಧಿಕ ಔಷಧ ಮಳಿಗೆಗಳು ಬುಧವಾರ ಬಂದ್ ಆಗಲಿವೆ. ಬೆಂಗಳೂರು ನಗರದಲ್ಲಿ ಸುಮಾರು 1000 ಔಷಧ ಮಳಿಗೆಗಳಿವೆ. ಮುಷ್ಕರದ ಸಂದರ್ಭದಲ್ಲಿ ಯಾವುದೇ ಔಷಧ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಮಂಗಳವಾರ ಮಧ್ಯರಾತ್ರಿಯಿಂದಲೇ ಎಲ್ಲಾ ಔಷಧ ಮಳಿಗೆಗಳು ಬಾಗಿಲು ಮುಚ್ಚಲಿವೆ ಎಂದು ಕರ್ನಾಟಕದ ಕೆಮಿಸ್ಟ್ ಹಾಗೂ ಡ್ರಗಿಸ್ಟ್ ಸಂಘದ ಪದಾಧಿಕಾರಿ ಎಂ.ಸಿ.ಮೇದಪ್ಪ ಹೇಳಿದ್ದಾರೆ.

ಮುಷ್ಕರದ ದಿನ ಔಷಧಿ ಎಲ್ಲಿ ಸಿಗುತ್ತದೆ?
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿಇರುವ ಔಷಧಾಲಯಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ಅದರೆ, ವೈದ್ಯರ ಸಲಹೆ, ಪ್ರಿಸ್ಕಿಪ್ಷನ್ ಇಲ್ಲದೆ ಔಷಧಿ ಸಿಗುವುದಿಲ್ಲ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಔಷಧಿ ದಾಸ್ತಾನು ಇಡುವಂತೆ ಸೂಚನೆ ನೀಡಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮುಷ್ಕರ ಏಕೆ? ಏನು ಸಮಸ್ಯೆ?
ವೈದ್ಯರ ಸಲಹೆ ಇಲ್ಲದೆ ಔಷಧಗಳನ್ನು ಖರೀದಿಸುವಂತಿಲ್ಲ. ಆದರೆ ಆನ್‌ಲೈನ್ ಮಾರಾಟದಲ್ಲಿ ಎಗ್ಗಿಲ್ಲದೆ ಔಷಧಗಳನ್ನು ಖರೀದಿಸಬಹುದಾಗಿದೆ. ಇದು ಮಾರಕವಾಗುತ್ತದೆ ಎಂಬುದು ಔಷಧ ವ್ಯಾಪಾರಿಗಳ ಅಭಿಪ್ರಾಯವಾಗಿದೆ. ಅಲ್ಲದೆ ಆನ್‌ಲೈನ್ ಮಾರಾಟಗಾರರು ಸಾಕಷ್ಟು ರಿಯಾಯಿತಿ ಘೋಷಿಸಿ ಮನಸೋ ಇಚ್ಛೆ ಬಂದಂತೆ ಔಷಧ ಮಾರಾಟ ಮಾಡುವುದರಿಂದ ಔಷಧ ಮಳಿಗೆಗಳು ಬಾಗಿಲು ಹಾಕಬೇಕಾಗುತ್ತದೆ.

ಸಗಟು ಔಷಧ ವ್ಯಾಪಾರ ಸ್ಥಗಿತ
ಆನ್ ಲೈನ್ ಮಾರಾಟದ ಭರಾಟೆಯಿಂದ ಚಿಲ್ಲರೆ, ಸಗಟು ಔಷಧ ವ್ಯಾಪಾರವನ್ನು ನಂಬಿಕೊಂಡು ಬದುಕುತ್ತಿರುವವರು ಬೀದಿಗೆ ಬೀಳಲಿದ್ದಾರೆ. ಈ ಕಾರಣದಿಂದ ಆನ್‌ಲೈನ್ ಔಷಧ ವ್ಯಾಪಾರವನ್ನು ಕೂಡಲೇ ನಿಲ್ಲಿಸಬೇಕು. ಇದಕ್ಕಾಗಿ ಒಂದು ದಿನ ಸಾಂಕೇತಿಕ ಮುಷ್ಕರ ನಡೆಸುತ್ತೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?
ಕೇಂದ್ರ ಸರ್ಕಾರದ ಡ್ರಗ್ಸ್ ಮತ್ತು ಕಾಸ್ಮೊಟಿಕ್ ಆಕ್ಟ್ 1940 ಸೆಕ್ಷನ್ 65(10) (ಎ) ರಂತೆ ಯಾವುದೇ ಔಷಧಿಯನ್ನು ವಿತರಣೆ ಮಾಡುವ ಮುನ್ನ ವೈದ್ಯರ ಸಲಹೆ ಚೀಟಿಯ ಮುಖಾಂತರ ನೋಂದಾಯಿತ ಅರ್ಹ ಔಷಧ ವ್ಯಕ್ತಿಯ ಮೂಲಕ ವಿತರಿಸಬೇಕೆಂದು ನಿಯಮವಿದೆ. ಸೆಕ್ಷನ್ 65 (ಬಿ) ಪ್ರಕಾರ ಗ್ರಾಹಕರ ಹೆಸರು ಹಾಗೂ ವಿಳಾಸ ಸರಿಯಾಗಿರಬೇಕಾಗುತ್ತದೆ. ಅದರೆ, ಆನ್ ಲೈನ್ ಮಾರಾಟದಿಂದ ಯಾವುದೇ ನಿಯಮ ಪಾಲನೆಯಾಗುವುದಿಲ್ಲ ಎಂದಿದ್ದಾರೆ.

ಭಾರತದಲ್ಲಿ ಕಾನೂನು ಬಿಗಿಯಾಗಿಲ್ಲ
ಭಾರತದಲ್ಲಿ ಕಾನೂನು ಬಿಗಿಯಾಗಿಲ್ಲ, ಯುಎಸ್, ಕೆನಡಾ, ಬ್ರಿಟನ್..ಇತ್ಯಾದಿ ದೇಶಗಳಲ್ಲಿ ಡ್ರಗ್ ಕಾನೂನು ಬಲವಾಗಿದೆ. ಇಲ್ಲಿ ಎಲ್ಲರ ಕೈಗೆ ಔಷಧಗಳು ಕೈಗೆಟಕುವುದರಿಂದ ಅನರ್ಥಕ್ಕೆ ಕಾರಣವಾಗಿದೆ. 2003ರಲ್ಲಿ ಮಷೆಲ್ಕರ್ ಸಮಿತಿ ವರದಿ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಮಾರಾಟಗಾರರು ದೂರಿದ್ದಾರೆ.












Click it and Unblock the Notifications