ಕಮೀಷನರ್ ಕಮಲಪಂತ್ ಸುಳ್ಳುಗಾರ ಎಂಬುದು ಸಿಎಂಗೆ ಮಾಡಿದ ಅವಮಾನ: ಭಾಸ್ಕರರಾವ್
ಬೆಂಗಳೂರು, ಏ. 11: ಜೆ. ಜೆ. ನಗರ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಬಗ್ಗೆ ಕೊಟ್ಟ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಮೀಷನರ್ ಕಮಲಪಂತ್ ಅವರನ್ನು ಸುಳ್ಳುಗಾರ ಎಂದಿರುವ ರಾಜಕಾರಣಿ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿರುವ ಮಾಜಿ ಪೊಲೀಸ್ ಅಧಿಕಾರಿ, ಎಎಪಿ ನಾಯಕ ಭಾಸ್ಕರ ರಾವ್, ಕಮೀಷನರ್ ಅವರನ್ನು ಸುಳ್ಳುಗಾರ ಎಂದಿರುವುದು ಮುಖ್ಯಮಂತ್ರಿಗಳಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಎಪಿ ನಾಯಕ ಭಾಸ್ಕರರಾವ್, ಬೆಂಗಳೂರು ಪೊಲೀಸ್ ಕಮೀಷನರ್ ಒಂದು ಸಂಸ್ಥೆ. ಬೆಂಗಳೂರಿನ ಒಂದೂವರೆ ಕೋಟಿ ಜನರನ್ನು ರಕ್ಷಣೆ ಮಾಡುತ್ತಿರುವ ಸಂಸ್ಥೆ. ಒಬ್ಬ ರಾಜಕಾರಣಿ ಕಮೀನಷರ್ ಅವರನ್ನು ಸುಳ್ಳುಗಾರ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಮಾಡಿದ ಅಪಮಾನ ಎಂದು ವ್ಯಾಖ್ಯಾನಿಸಿದ್ದಾರೆ.
ಜೆ.ಜೆ. ನಗರದಲ್ಲಿ ನಡೆದಿದ್ದ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಅನ್ಯಧರ್ಮೀಯ ಯುವಕರು ಹತ್ಯೆ ಮಾಡಿದ್ದಾರೆ ಎಂದು ಗೃಹ ಸಚಿವ ಹೇಳಿಕೆ ನೀಡಿದ್ದರು. ಇದು ರಾಜ್ಯದಲ್ಲಿ ಭಾರೀ ವಿವಾದಕ್ಕೆ ನಾಂದಿ ಹಾಡಿತ್ತು. ಗೃಹ ಸಚಿವರ ಹೇಳಿಕೆಗೂ ಮೊದಲೇ ಇದು ಬೈಕ್ ತಗುಲಿದ ವಿಚಾರಕ್ಕೆ ನಡೆದಿರುವ ಅಪರಾಧ ಪ್ರಕರಣ. ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಡೆದಿರುವ ಕೊಲೆಯಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ನನ್ನ ಹೇಳಿಕೆ ತಪ್ಪಾಗಿದೆ ಕ್ಷಮಿಸಿ ಎಂದು ಕ್ಷಮೆ ಕೋರಿದ್ದರು.

ಗೃಹ ಸಚಿವರ ಹೇಳಿಕೆಯನ್ನು ಸಮರ್ಥನೆ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಗೃಹ ಸಚಿವರು ಹೇಳಿದ ಮಾತು ಸತ್ಯ. ಮುಂದಿನ ತನಿಖೆಯಲ್ಲಿ ಆ ಸತ್ಯ ಬಯಲಾಗಿದೆ. ಬೆಂಗಳೂರು ಪೊಲೀಸ್ ಕಮೀಷನರ್ ಸುಳ್ಳು ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಎರಡನೆ ಸುತ್ತಿನ ವಿವಾದಕ್ಕೆ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಜೆಜೆನಗರ ನಿವಾಸಿ ಚಂದ್ರು ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.

ಸಿಐಡಿ ತನಿಖೆಗೆ ಈ ಪ್ರಕರಣ ವಹಿಸಿದ ಬಳಿಕ ಗೃಹ ಸಚಿವರು ಮತ್ತೊಮ್ಮೆ ಹೇಳಿಕೆ ನೀಡಿದ್ದು, ನಾನು ಹೇಳಿರುವ ಮಾತು ಸತ್ಯ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿಕೆ ನೀಡಿದ್ದರು.

ರವಿಕುಮಾರ್ ಮಾತು ಕೇಳಿ ಗೃಹ ಸಚಿವರ ಎಡವಟ್ಟು:
Recommended Video
ಜೆ.ಜೆ. ನಗರದಲ್ಲಿ ಚಂದ್ರು ಕೊಲೆ ನಡೆದಿರುವ ವಿಚಾರ ಗೃಹ ಸಚಿವರ ಕಿವಿಗೆ ಹಾಕಿದ್ದೇ ಒಬ್ಬ ರಾಜಕಾರಣಿ. ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರೇ ದಾರಿ ತಪ್ಪಿಸುವಂತೆ ವಿಷಯ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಅದನ್ನೇ ನಂಬಿ ಗೃಹ ಸಚಿವರು ಉರ್ದು ಮಾತನಾಡದಿದ್ದಕ್ಕೆ ಚಂದ್ರು ಕೊಲೆಯಾಗಿದೆ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ವಿವಾದದಿಂದ ಗೃಹ ಸಚಿವರನ್ನು ವಿರೋಧ ಪಕ್ಷ ಕಾಲೆಳೆದು ರಾಜೀನಾಮೆಗೆ ಆಗ್ರಹಿಸಿತು. ಈ ವಿವಾದದ ನಡುವೆ ಗೃಹ ಸಚಿವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಿದ್ದನ್ನು ಸ್ಮರಿಸಬಹುದು.












Click it and Unblock the Notifications