ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಯಥಾಸ್ಥಿತಿಗೆ ಹೈಕೋರ್ಟ್ ಆದೇಶ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಆ.25: ತೀವ್ರ ವಿವಾದಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಇಂದು (ಆ.25) ಆದೇಶಿಸಿದೆ.

ಬಿಬಿಎಂಪಿ ಆದೇಶ ಪ್ರಶ್ನಿಸಿ ವಕ್ಫ್ ಮಂಡಳಿ ಸಲ್ಲಿಸಿರುವ ಅರ್ಜಿ ಕುರಿತು ಗುರುವಾರ ಕೆಲಸ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ.

ವಕ್ಫ್‌ ಬೋರ್ಡ್ ಪರ ವಾದಿಸಿದ ಹಿರಿಯ ವಕೀಲರು, ವಕ್ಫ್‌ ಬೋರ್ಡ್‌ ಈಗಾಗಲೇ ಚಾಮರಾಜಪೇಟೆಯ ಈದ್ಗಾ ಮೈದಾನ ತನಗೆ ಸೇರಿದ್ದು ಎಂದು ಅಧಿಸೂಚನೆ ಹೊರಡಿಸಿದೆ. ಕಂದಾಯ ಇಲಾಖೆಗೆ ಸೇರಿದ್ದೆಂಬ ಬಿಬಿಎಂಪಿ ಆದೇಶ ಸರಿಯಲ್ಲವೆಂದರು.

ವಕ್ಫ್‌ ಬೋರ್ಡ್ ವಾದಕ್ಕೆ ಎಜಿ ಪ್ರಭುಲಿಂಗ್ ನಾವದಗಿ ಆಕ್ಷೇಪ ವ್ಯಕ್ತಪಡಿಸಿದರು. 1965 ರಲ್ಲೂ ಸರ್ಕಾರ ಸರ್ವೆ ನಡೆಸಿತ್ತು ಯಾರೂ ಆಕ್ಷೇಪಿಸಿರಲಿಲ್ಲ, 57 ವರ್ಷಗಳಿಂದಲೂ ಆಸ್ತಿ ಸರ್ಕಾರದ ಹೆಸರಿನಲ್ಲಿದೆ ಎಂದು ಸಮರ್ಥಿಸಿಕೊಂಡರು.

Chamarajpet Edga ground dispute: HC ordered status quo

ಸಾಕಷ್ಟು ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ ನೀಡಿತು. ಅಲ್ಲದೆ, ಆಟದ ಮೈದಾನವಾಗಿ ಮಾತ್ರ ಬಳಸಬಹುದಾಗಿದೆ, ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ ಬಳಸಬಹುದು ಎಂದು ಆದೇಶ ನೀಡಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.

ರಾಜ್ಯ ವಕ್ಫ್ ಮಂಡಳಿ ‌ಚಾಮರಾಜಪೇಟೆಯ ಆಟದ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆ.6ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ‌ ಸಲ್ಲಿಸಿದೆ.

ಪ್ರತಿವಾದಿ ಆದೇಶಕ್ಕೆ ಬೆಲೆ ಇಲ್ಲ: ವಕ್ಫ್ ಮಂಡಳಿ, ಮೈದಾನದ‌ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯದ ಕುರಿತು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ನೇತೃತ್ವದ ಅರೆ ನ್ಯಾಯಿಕ‌‌ ಮಂಡಳಿಯ ಮುಂದೆ ನಡೆದ ವಿಚಾರಣೆಯಲ್ಲಿ ಬಿಬಿಎಂಪಿ‌ ಸಹ ಪ್ರತಿವಾದಿಯಾಗಿದೆ.

ಪ್ರತಿವಾದಿ ಸ್ಥಾನದಲ್ಲಿರುವ ಸಂಸ್ಥೆಯ ಅಧಿಕಾರಿಯೇ ಪ್ರಕರಣದ‌‌ ಕುರಿತು ಆದೇಶ ಹೊರಡಿಸಲು ಅವಕಾಶವಿಲ್ಲ ಎಂದು ಹೇಳಿದೆ.

ಅಲ್ಲದೆ, ಜಂಟಿ ಆಯುಕ್ತರಿಗೆ ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ವಕ್ಫ್ ಮಂಡಳಿ ಆಕ್ಷೇಪ ಎತ್ತಿದೆ.

ಏನಿದು ವಿವಾದ: ಚಾಮರಾಜಪೇಟೆಯ ಆಟದ ಮೈದಾನ (2.5 ಎಕರೆ) ಆಸ್ತಿಯನ್ನು ಖಾತೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ವಕ್ಫ್ ಮಂಡಳಿ ಕಳೆದ ಜೂ. 21ರಂದು ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು.

Chamarajpet Edga ground dispute: HC ordered status quo

ಬಳಿಕ ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಗಳು ವಕ್ಫ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ಮಾಲೀಕತ್ವದ ದೃಢಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಅಂತಿಮವಾಗಿ ಆ.3 ರಂದು ಪಶ್ವಿಮ ವಲಯ ಜಂಟಿ ಆಯುಕ್ತರ ಅರೆ ನ್ಯಾಯಿಕ ಮಂಡಳಿಯಲ್ಲಿ ವಿಚಾರಣೆ ನಡೆಸಲಾಗಿತ್ತು.‌ ಈ ವೇಳೆ ವಕ್ಫ್ ಮಂಡಳಿಯು ಚಾಮರಾಜಪೇಟೆ ಆಟದ ಮೈದಾನದ ಮಾಲೀಕತ್ವ ಸಾಬೀತು ಪಡಿಸುವ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದ ತಿಳಿಸಿದ್ದ ಜಂಟಿ ಆಯುಕ್ತರು ಅರ್ಜಿ ವಜಾಗೊಳಿಸಿ ಆ.6ರಂದು ಆದೇಶಿಸಿದ್ದರು.

ಇದೇ ವೇಳೆ ವಕ್ಫ್ ಮಂಡಳಿಯು ಚಾಮರಾಜಪೇಟೆ ಆಟದ ಮೈದಾನದ ಮೇಲೆ ಹಕ್ಕು ಸ್ಥಾಪಿಸಬೇಕಾದ್ದಲ್ಲಿ ಮುಕ್ತವಾಗಿ ಕಂದಾಯ ಇಲಾಖೆಯೊಂದಿಗೆ ವ್ಯವಹರಿಸಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.

ಚಾಮರಾಜಪೇಟೆ ಈದ್ಗಾ ಮೈದಾನ
ಚಾಮರಾಜಪೇಟೆ ಮೈದಾನ ದಿನದಿಂದ ದಿನಕ್ಕೆ ಗೊಂದಲ ಹೆಚ್ಚಾಗುತ್ತಿದೆ. ಅತ್ತ ವಕ್ಫ್ ಬೋರ್ಡ್ ನಮಗೆ ಸೇರುತ್ತದೆ ಅಂತಿದ್ದರೇ ಇತ್ತ ಪಾಲಿಕೆ ಆಟದ ಮೈದಾನ ಎನ್ನುತ್ತಿದೆ. ಇದೆಲ್ಲದರ ನಡುವೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಸರಣಿ ಡೆಡ್ ಲೈನ್ ಕೊಟ್ಟಿದ್ದು, ಅನುಮತಿ ಸಿಗದಿದ್ದರೆ ಕೋರ್ಟ್ ಮೊರೆ ಹೋಗುವ ಲೆಕ್ಕಾಚಾರಗಳು ನಡೆಯುತ್ತಿದೆ.

ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಅಂತ ಹಿಂದೂ ಸನಾತನ ಪರಿಷತ್ ಬಿಬಿಎಂಪಿಗೆ ಮನವಿ ನೀಡಿತ್ತು. ಅದೇ ರೀತಿ ಶ್ರೀರಾಮ ಸೇನೆ ಕೂಡಾ ಹಿಂದೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮ ಗಳ ಜೊತೆ ಗಣೇಶೋತ್ಸವಕ್ಕೂ ಅವಕಾಶ ನೀಡಿ ಅದರ ಜೊತೆ ಯೋಗದಿನಾಚರಣೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದೆ.

English summary
Chamarajpet Idgah ground dispute: Karnataka High Court ordered both the parties to maintain status quo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X