Guru Raghavendra Bank Scam: ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಹಗರಣದ ತನಿಖೆ ಸಿಬಿಐಗೆ- ಯುಬಿ ವೆಂಕಟೇಶ್ ಪ್ರತಿಕ್ರಿಯೆ
ಬೆಂಗಳೂರು ಡಿಸೆಂಬರ್ 2: ಶ್ರೀ ಗುರುರಾಘವೇಂದ್ರ ಬ್ಯಾಂಕ್ ಮತ್ತು ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ಹಾಗು ಗುರು ಸಾರ್ವಭೌಮ ಸೌಹಾರ್ದ ಬ್ಯಾಂಕ್ ಅವ್ಯವಹಾರ ಪ್ರಕರಣಗಳ ತನಿಖೆ ಸಿಬಿಐಗೆ ವಹಿಸಲಾಗಿದೆ. ಇದರಿಂದಾಗಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟಿದ್ದ ಜನರಲ್ಲಿ ಹೊಸ ಭರವಸೆ ಮೂಡಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಎಂಎಲ್‌ಸಿ ಯುಬಿ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, 'ಇದು ಜನರ ಹೋರಾಟಕ್ಕೆ ಸಂದ ಜಯ. ಶ್ರೀ ಗುರುರಾಘವೇಂದ್ರ ಬ್ಯಾಂಕ್ ಮತ್ತು ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಬ್ಯಾಂಕ್ ಹಾಗು ಗುರು ಸಾರ್ವಭೌಮ ಸೌಹಾರ್ದ ಬ್ಯಾಂಕ್ ನಲ್ಲಿ ನಡೆದಿರುವ ಅವ್ಯವಹಾರಗಳನ್ನು ಸಿಬಿಐ ಗೆ ವಹಿಸುವಂತೆ ಹಲವಾರು ವರ್ಷಗಳಿಂದ ವಿಧಾನಸೌಧದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸಿದರು ಕೂಡ ಆವಾಗಿನ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಠೇವಣಿದಾರರನ್ನು ನಿರ್ಲಕ್ಷಿಸಲಾಗಿತ್ತು.

ಆದರೆ ಇಂದು ನಮ್ಮ ಸರ್ಕಾರ ನನ್ನ ಹೋರಾಟದ ಮನವಿಯ ಮೇರೆಗೆ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ಅವ್ಯವಹಾರವನ್ನು ಸಿಬಿಐ ಗೆ ವಹಿಸುವುದರ ಮೂಲಕ ಅನ್ಯಾಯಕ್ಕೊಳಗಾದ ಬಸವನಗುಡಿ ಜನರಿಗೆ ನ್ಯಾಯ ಸಿಗುವಂತಾಗಿದೆ' ಎಂದು ಅವರು ಹೇಳಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕಿನ 38,000 ಗ್ರಾಹಕರನ್ನು ಸಂಕಷ್ಟಕ್ಕೆ ತಳ್ಳಿದೆ. ಬ್ಯಾಂಕಿನಲ್ಲಿ 1,792 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ (ನಿ.) ದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧ್ಯಕ್ಷ ಕೆ. ರಾಮಕೃಷ್ಣರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
892.43 ಕೋಟಿ ರೂ. ಸಾಲ ಯಾರ ಬಳಿ ಇದೆ, ಯಾರಿಗೆ ವರ್ಗಾವಣೆಯಾಗಿದೆ? ಎಂದು ಇಡಿ ತನಿಖೆ ಕೈಗೊಂಡಿತ್ತು. ರಾಮಕೃಷ್ಣ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ 2876 ಮಂದಿಗೆ ಸಾಲ ನೀಡಲಾಗಿತ್ತು. ಈ ಸಾಲದ ಮೊತ್ತ 1544.43 ಕೋಟಿಯಾಗಿದೆ. ಇದರಲ್ಲಿ 892.85 ಕೋಟಿ ರೂ. ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆಯಲಾಗಿದೆ ಎಂಬುದು ಆರೋಪ.
ಮೊದಲು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಗರಣದ ಕುರಿತು ದೂರು ದಾಖಲಾಗಿತ್ತು. ಬಳಿಕ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ರಾಮಕೃಷ್ಣ ಬಂಧಿಸಿತ್ತು. ಜಾಮೀನು ಪಡೆದು ಹೊರ ಬಂದಿದ್ದರು. ಬಳಿಕ ಇಡಿ ಅವರನ್ನು ಬಂಧಿಸಿತ್ತು.












Click it and Unblock the Notifications