Cauvery water price revision: ವಿದ್ಯುತ್ ಆಯ್ತು, ಇದೀಗ ಕುಡಿಯುವ ನೀರಿನ ದರ ಪರಿಷ್ಕರಣೆ
ಬೆಂಗಳೂರು, ಡಿಸೆಂಬರ್ 26: ರಾಜ್ಯದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ದರದಲ್ಲಿ ಏರಿಕೆ ಆಗಿದ್ದು, ಜನರಿಗೆ ಅದರ ಬಿಸಿ ತಟ್ಟಿದೆ. ವಿದ್ಯುತ್ ದರ ಏರಿಕೆ ಬೆನ್ನಲ್ಲೆ ಬೆಂಗಳೂರಿನಲ್ಲಿ ಇದೀಗ ಕಾವೇರಿ ನೀರಿನ ದರ ಏರಿಕೆಯ ಮುನ್ಸೂಚನೆಯನ್ನು ರಾಜ್ಯ ಸರ್ಕಾರ ನೀಡಿದೆ. ಈ ಮೂಲಕ ರಾಜಧಾನಿ ಪಾಲಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ.
ಸಿಲಿಕಾನ್ ಸಿಟಿಯಲ್ಲಿ ಕಳೆದ ಒಂದು ದಶಕದಿಂದಲೂ ಕಾವೇರಿ ನೀರಿನ ದರದಲ್ಲಿ ಪರಿಷ್ಕರಣೆ ಆಗಿರಲಿಲ್ಲ. ಆದರೆ ಈಗ ವಿದ್ಯುತ್ ಸೇರಿದಂತೆ ಎಲ್ಲ ವಸ್ತುಗಳ ದರದಲ್ಲಿ ಏರಿಕೆ ಕಂಡಿವೆ. ಹೀಗಾಗಿ ಅನಿವಾರ್ಯವಾಗಿ ನಗರಕ್ಕೆ ನಿತ್ಯ 1400 MLD ಸರಬರಾಜು ಆಗುವ ಕಾವೇರಿ ನೀರಿನ ದರ ಹೆಚ್ಚಳ ಮಾಡಬೇಕಾಗಿದೆ.

ಈ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿದ್ದು, ಕಳೆದ 10-12 ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಆದ್ದರಿಂದ ಇದೀಗ ಕಾವೇರಿ ನೀರಿನ ದರ ಪರಿಷ್ಕರಣೆ ಮಾಡಲಿದ್ದೇವೆ. ಇದರಿಂದ ನಾಗರಿಕರಿಗೆ ಸ್ವಲ್ಪ ಮಟ್ಟಿನ ಹೊರೆಯಾಗಲಿದೆ ಎಂದು ಸಚಿವರೇ ಸೋಮವಾರ ಮಾಹಿತಿ ನೀಡಿದ್ದಾರೆ.
ಅಲ್ಪ ಪ್ರಮಾಣದಲ್ಲಿ ನೀರಿನ ದರ ಹೆಚ್ಚಳ
ನೀರಿನ ದರ ಹೆಚ್ಚಾಗಿರಲಿಲ್ಲ. ಆದರೆ ಈ ಮಧ್ಯೆ ಸಾಕಷ್ಟು ಬಾರಿ ವಿದ್ಯುತ್ ದರ ಹೆಚ್ಚಾಗಿದೆ. ಇದರಿಂದ ನೀರಿನ ಪೂರೈಕೆ, ನಿರ್ವಹಣೆ ವೆಚ್ಚ ಅಧಿಕವಾಗಿದೆ. ಇದೆಲ್ಲ ಕಾರಣಗಳಿಂದ ಅಲ್ಪ ಪ್ರಮಾಣದಲ್ಲಿ ನೀರಿನ ದರವನ್ನು ಏರಿಕೆ ಮಾಡಲಾಗುವುದು ಎಂದು ಅವರು ಸರ್ಕಾರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.
ಪ್ರತಿಯೊಂದರ ಬೆಲೆಗಳು ಕಾಲ ಕಾಲಕ್ಕೆ ದರ ಏರಿಕೆ/ ಪರಿಷ್ಕರಣೆ ಆಗುವುದು ಸಹಜ ಸಂಗತಿಯಾಗಿದೆ. ಆದರೆ ಒಂದು ದಶಕದಿಂದ ಈವರೆಗೆ ಈ ಪ್ರಕ್ರಿಯೆ ಕಾವೇರಿ ನೀರಿಗೆ ಅನ್ವಯವಾಗಿರಲಿಲ್ಲ. ಇದೀಗ ಚರ್ಚೆ ಮಾಡಿಯೇ ಇಂತದ್ದೊಂದು ನೀರ್ಣಯ ಸರ್ಕಾರ ಕೈಗೊಳ್ಳುತ್ತಿದೆ. ಹಾಗೆ ನೋಡಿದರೆ ಹೊರ ರಾಜ್ಯಕ್ಕಿಂತ ನಮ್ಮ ರಾಜ್ಯದಲ್ಲಿಯೇ ನೀರಿನ ದರ ಕಡಿಮೆ ಇದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಸರಣಿ ಸಭೆ ನಡೆಸಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀರಿನ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಿದ್ಧಪಡಿಸುವಂತೆ 'ಬೆಂಗಳೂರು ನೀರು ಸರಬರಾಜು ಮತ್ತು ಮತ್ತು ಒಳಚರಂಡಿ ಮಂಡಳಿ (BWSSB)' ಅಧಿಕಾರಿಗಳಿಗೆ ಅವರು ಸೂಚಿಸಿದ್ದರು.
ನಷ್ಟದಲ್ಲಿದೆಯೇ BWSSB?
ಇನ್ನೂ ಮೂಲಗಳ ಪ್ರಕಾರ, ಬೆಂಗಳೂರು ಜಲಮಂಡಳಿಗೆ ಬರಬೇಕಾದ ಕೋಟ್ಯಂತರ ರೂಪಾಯಿ ಹಣ ಇನ್ನೂ ಬಂದಿಲ್ಲ. ಇಂದಿನ ದಿನಗಳಲ್ಲಿ ಹೆಚ್ಚಾಗಿರುವ ಬೆಲೆ ಏರಿಕೆಯಿಂದಾಗಿ ನೀರಿನ ನಿರ್ವಹಣೆ, ಸರಬರಾಜಿಗೆ ಅಧಿಕ ವೆಚ್ಚ ಮಾಡಿ ಜಲಮಂಡಳಿ ನಷ್ಟ ಅನುಭವಿಸುತ್ತಿದೆ ಎಂಬ ಮಾತುಗಳ ಕೇಳಿ ಬಂದಿವೆ. ಇದೆಲ್ಲ ಕಾರಣದಿಂದಲೇ ಕಾವೇರಿ ನೀರು ದರ ಏರಿಕೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಅನುಮೋದನೇ ನೀಡಿದಲ್ಲಿ ಹೊಸ ದರ ಆದಷ್ಟು ಶೀಘ್ರವೇ ಜಾರಿಗೆ ಬರುವ ನಿರೀಕ್ಷೆ ಇದೆ.












Click it and Unblock the Notifications