ಕಾವೇರಿ 5ನೇ ಹಂತ; ಬೆಂಗಳೂರಿನ 110 ಗ್ರಾಮಗಳಿಗೆ ನೀರು
ಬೆಂಗಳೂರು, ಮಾರ್ಚ್ 07; ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಕಾವೇರಿ 5ನೇ ಹಂತದ ಯೋಜನೆ ಕಾಮಗಾರಿ ಇದೇ ವರ್ಷದ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಿಗದಿತ ಗುರಿಯ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಬೆಂಗಳೂರು ನಗರದ 110 ಗ್ರಾಮಗಳಿಗೆ ನೀರು ದೊರೆಯಲಿದೆ.
170 ಕಿ. ಮೀ. ಉದ್ದದ ಕಾವೇರಿ 5ನೇ ಹಂತದ ಯೋಜನೆಯ ವೆಚ್ಚ ಸುಮಾರು 5,500 ಕೋಟಿಯಾಗಿದೆ. ಯೋಜನೆಯ ಶೇ 40ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಈ ವರ್ಷದ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸುವ ಗುರಿ ಇದೆ.
ಆದರೆ ಕಾಮಗಾರಿಯ ವೇಗ ನೋಡಿದರೆ ಅವಧಿಗೆ ಮೊದಲೇ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಬೆಂಗಳೂರು ಜಲಮಂಡಳಿ ಯೋಜನೆಯ ಕಾಮಗಾರಿ ಅವಧಿಗೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸದಲ್ಲಿದ್ದು ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಅವಧಿಗೂ ಮೊದಲೇ ಕಾವೇರಿ ನೀರು ಲಭ್ಯವಾಗಲಿದೆ.

ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್ ಈ ಕುರಿತು ಮಾತನಾಡಿದ್ದು, "ಮಳೆಯ ಕಾರಣ ಕೆಲವು ದಿನ ಕಾಮಗಾರಿ ವಿಳಂಬವಾಗಿತ್ತು. ಈಗ ಪುನಃ ಕಾಮಗಾರಿಗೆ ವೇಗ ಸಿಕ್ಕಿದೆ. ಕಾಮಗಾರಿ ಬೇಗನೇ ಪೂರ್ಣಗೊಳ್ಳುವ ವಿಶ್ವಾಸವಿದೆ" ಎಂದರು.
ಈ ವರ್ಷದ ನವೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮಾರ್ಗ ನೀರು ಹರಿಸಲು ಸಿದ್ಧವಾಗಿದೆ ಎಂಬುದು ಖಚಿತವಾದರೆ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
3 ಪಂಪ್ ಹೌಸ್ ನಿರ್ಮಾಣ; ಕಾವೇರಿ 5ನೇ ಹಂತದ ಯೋಜನೆಯಡಿ ಟಿ. ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಪಂಪ್ ಹೌಸ್ ನಿರ್ಮಾಣ ಮಾಡಲಾಗಿದೆ. ಯೋಜನೆ ಯಡಿ 3 ಪಂಪ್ ಹೌಸ್, 7 ಭೂ ಮಟ್ಟದ ಸಂಗ್ರಹಾಗಾರ ನಿರ್ಮಾಣವಾಗುತ್ತಿದೆ.
ಈ ಯೋಜನೆಗೆ ಚಾಲನೆ ಸಿಕ್ಕಿದರೆ ಜಲಮಂಡಳಿಗೆ ನಗರಕ್ಕೆ 775 ಎಂಎಲ್‌ಡಿ ಹೆಚ್ಚುವರಿ ನೀರು ತರಲು ಸಹಾಯಕವಾಗಲಿದೆ. ನಗರದ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಸಿಗಲಿದೆ. ಪಂಪ್ ಹೌಸ್ ನಿರ್ಮಾಣ, ಪೈಪ್ ಲೈನ್ ನಿರ್ಮಾಣ ಮುಂತಾದ ಕಾಮಗಾರಿಯನ್ನು ಜಲಮಂಡಳಿ ಒಟ್ಟಿಗೆ ಕೈಗೆತ್ತಿಕೊಂಡಿದೆ.
ಕಾವೇರಿ ನದಿಯಿಂದ ಬೆಂಗಳೂರು ನಗರಕ್ಕೆ 775 ಎಂಎಲ್‌ಡಿ ನೀರು ತರುವ ಯೋಜನೆ ಇದಾಗಿದ್ದು, 2023ರ ಆಗಸ್ಟ್ ವೇಳೆಗೆ ಯೋಜನೆ ಪೂರ್ಣಗೊಳಿಸುವ ಗುರಿ ನೀಡಿತ್ತು. ಆದರೆ ಜಲಮಂಡಳಿ 2022ರ ಅಂತ್ಯಕ್ಕೆ ಯೋಜನೆಗೆ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದೆ.
ತೊರೆ ಕಾಡನಹಳ್ಳಿ (ಟಿ. ಕೆ. ಹಳ್ಳಿ), ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್‌ಗಳ ಮೂಲಕ ನೀರು ಪಂಪ್ ಮಾಡಲಾಗುತ್ತದೆ. ಟಿ. ಕೆ. ಹಳ್ಳಿಯಿಂದ 80 ಕಿ. ಮೀ. ದೂರವಿರುವ ವಾಜರಹಳ್ಳಿ ತನಕ 3000 ಎಂಎ ವ್ಯಾಸದ ಕೊಳವೆ ಮಾರ್ಗ ಅಳವಡಿಸಲಾಗುತ್ತದೆ.
ಈ ಯೋಜನೆಗೆ ಅಗತ್ಯವಾದ ಮೋಟಾರ್‌ಗಳು ಜಪಾನ್, ಸ್ವೀಡನ್, ಆಸ್ಟ್ರಿಯಾ, ಅಮೆರಿಕದಿಂದ ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ ಯೋಜನೆಯ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಜಲಮಂಡಳಿ ಹೇಳಿದೆ.
2049ರ ಜನಸಂಖ್ಯೆ ಆಧಾರ; ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ 110 ಹಳ್ಳಿಗಳಲ್ಲಿ 2049ರಲ್ಲಿ ಇರಬಹುದಾದದ ಜನಸಂಖ್ಯೆಯ ಆಧಾರದ ಮೇಲೆ ಕಾವೇರಿ 5ನೇ ಹಂತದ ಯೋಜನೆ ಸಿದ್ದವಾಗಿದೆ. 7 ನೆಲ ಮಟ್ಟದ ಜಲ ಸಂಗ್ರಹಾಗಾರ, 14 ತ್ಯಾಜ್ಯ ಸಂಸ್ಕಾರಣಾ ಘಟಕ ಯೋಜನೆ ಯಡಿ ನಿರ್ಮಾಣವಾಗುತ್ತಿದೆ.
ಕಾವೇರಿ 1, 2, 3 ಮತ್ತು 4ನೇ ಘಟ್ಟದ 1 ಮತ್ತು 2ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ ನಿತ್ಯ 1450 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಆದರೂ ಸಹ ನಗರಕ್ಕೆ 775 ಎಂಎಲ್‌ಡಿ ನೀರಿನ ಕೊರತೆ ಇದೆ.












Click it and Unblock the Notifications