Cauvery 5th Stage project: ಅಂತಿಮ ಹಂತಕ್ಕೆ ಕಾವೇರಿ 5ನೇ ಹಂತದ ಯೋಜನೆ, ಶೀಘ್ರದಲ್ಲೇ ಉದ್ಘಾಟನೆ
ಬೆಂಗಳೂರು, ಜೂನ್. 16: ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಕಾವೇರಿ 5ನೇ ಹಂತದ ಯೋಜನೆ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಶೀಘ್ರವೇ ಉದ್ಘಾಟನೆಯಾಗಲಿದೆ. ಈ ಮಹತ್ವದ ಯೋಜನೆಯಿಂದ ಬೆಂಗಳೂರು ನಗರದ ಬರೋಬ್ಬರಿ 110 ಗ್ರಾಮಗಳಿಗೆ ನೀರು ದೊರೆಯಲಿದೆ.
ಈಗಾಗಲೇ ಕಾವೇರಿ 5ನೇ ಹಂತದ ಯೋಜನೆಗೆ ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಯೋಜನಾ ಸ್ಥಳವನ್ನು ಪರಿಶೀಲಿಸಿ, ಉದ್ಘಾಟನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಮಪ್ರಸಾತ್ ಮನೋಹರ್, ''ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಮೇರೆಗೆ ಕಾವೇರಿ 5ನೇ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ಪೂರ್ಣಗೊಳ್ಳುವ ಯೋಜನೆಯ ಕಾಮಗಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲಿಸುವ ನಿರೀಕ್ಷೆಯಿದೆ" ಎಂದು ಮಾಹಿತಿ ನೀಡಿದ್ದಾರೆ.
ಇನ್ನೆರಡು ದಿನಗಳಲ್ಲಿ ನೀರಿನ ಸಮಸ್ಯೆ ಪರಿಹಾರ
ಬೆಂಗಳುರಿನಲ್ಲಿ ಕಾವೇರಿ ಐದನೇ ಹಂತದ ಯೋಜನೆಯ ಕಾರಣದಿಂದಾಗಿ ಹಲವೆಡೆ ನೀರು ವ್ಯತ್ಯಯ ಉಂಟಾಗಿದೆ. ಎರಡು ದಿನಗಳ ಕಾಲ ಕಾವೇರಿ ಕುಡಿಯುವ ನೀರು ಸರಬರಾಜು ಪ್ರದೇಶಗಳಲ್ಲಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಬಗ್ಗೆಯೂ ಮಾಧ್ಯಮದವರ ಪ್ರಶ್ನೆಗೆ ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಉತ್ತರ ನೀಡಿದ್ದಾರೆ.
"ಯೋಜನೆಯ ಸಿದ್ಧತೆ ಪರೀಕ್ಷೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಒಂದು ದಿನ ನೀರು ಪೂರೈಕೆಗೆ ತೊಂದರೆಯಾಯಿತು. ಯೋಜನೆಯ ಅಂತಿಮ ಪರೀಕ್ಷೆಯಿಂದಾಗಿ ನೀರು ಸರಬರಾಜು ನಿಲ್ಲಿಸಲಾಗಿದೆ. ಪೈಪ್‌ಗೆ ಗಾಳಿ ಬೀಸಿದ್ದು, ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನೆರಡು ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ"' ಎಂದು ಮಾಹಿತಿ ನೀಡಿದ್ದಾರೆ.

ಎಚ್‌ಬಿಆರ್ ಲೇಔಟ್‌ನಲ್ಲಿ 60 ಎಂಎಲ್‌ಡಿ ಎಸ್‌ಟಿಪಿ ಸ್ಥಾಪನೆ
ಇನ್ನು, ಎಚ್‌ಬಿಆರ್ ಲೇಔಟ್‌ನಲ್ಲಿ 60 ಎಂಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ (ಎಸ್‌ಟಿಪಿ) ಇಂಧನ ಸಚಿವ ಕೆ.ಜೆ.ಜಾರ್ಜ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರಿಂದ ಹೆಚ್‌ಬಿಆರ್ ಲೇಔಟ್, ಲಿಂಗರಾಜಪುರಂ, ಕೆ.ಜಿ.ಹಳ್ಳಿ ಮತ್ತು ಕಲ್ಯಾಣನಗರದ ತಗ್ಗು ಪ್ರದೇಶಗಳಿಗೆ ಉಪಯೋಗವಾಗಲಿದೆ.
ಭಾರೀ ಮಳೆಯಾದಾಗಲೆಲ್ಲಾ ಈ ಪ್ರದೇಶಗಳು ಜಲಾವೃತಗೊಳ್ಳುತ್ತವೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿನ ಮನೆಗಳಿಗೂ ಮಳೆ ನೀರು ನುಗ್ಗುತ್ತಿದೆ. ಈ ಯೋಜನೆಯು ಪ್ರವಾಹ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.












Click it and Unblock the Notifications