ನೈಸ್ ಯೋಜನೆ ಪರಿಶೀಲನೆಗೆ ಸಮಿತಿ ರಚನೆ: ಬೆಂಗಳೂರಿನ ಯಾವ ರಸ್ತೆ ಯೋಜನೆಗೆ ಸಹಕಾರಿ
ಬೆಂಗಳೂರು, ಏಪ್ರಿಲ್ 16: ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೈಸ್ ಯೋಜನೆಯ ಕುರಿತು ಪರಿಶೀಲನೆ ನಡೆಸಲು ಸಂಪುಟ ಉಪ ಸಮಿತಿ ರಚನೆ ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರವನ್ನು ನೀಡಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಭೆಯ ಬಳಿಕ ಕಾನೂನು ಸಚಿವ ಎಚ್. ಕೆ. ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಉಪ ಸಮಿತಿ ನೀಡುವ ಶಿಫಾರಸು ಬೆಂಗಳೂರು ನಗರದ ಹಲವು ರಸ್ತೆ ಯೋಜನೆಗಳಿಗೆ ಸಹಕಾರಿಯಾಗಿದೆ.
ರೈತರ ಜಮೀನನ್ನು ಸ್ವಾಧೀನ ಮಾಡಿಕೊಂಡು ನೈಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಯೋಜನೆ ಸಂಪೂರ್ಣವಾಗಿ ಕಾರ್ಯಗತಗೊಂಡಿಲ್ಲ. ಆದ್ದರಿಂದ ಬೆಂಗಳೂರು-ಮೈಸೂರು ಮೂಲ ಸೌಲಭ್ಯ ಕಾರಿಡಾರ್ ಯೋಜನೆಯನ್ನು ಜಾರಿ ಮಾಡುವ ನೈಸ್ ಸಂಸ್ಥೆಯ ಕಾರ್ಯ ನಿರ್ವಹಣೆ ಮತ್ತು ಇತರ ವಿಚಾರಗಳ ಕುರಿತು ಚರ್ಚಿಸಿ ಸಚಿವ ಸಂಪುಟಕ್ಕೆ ಉಪ ಸಮಿತಿ ಶಿಫಾರಸು ಮಾಡಲಿದೆ.

ನೈಸ್ ಸಂಸ್ಥೆ ಭೂ ಸ್ವಾಧೀನ ಮಾಡಿಕೊಂಡ ವಿಚಾರವೇ ಚರ್ಚೆಗೆ ಕಾರಣವಾಗಿದೆ. 1998-99ರಲ್ಲಿ 23,625 ಎಕರೆ ಖಾಸಗಿ ಜಮೀನು ಹಾಗೂ 5,688 ಎಕರೆ ಸರ್ಕಾರಿ ಜಮೀನು ಸೇರಿ ಒಟ್ಟು 29,313 ಎಕರೆ ಜಮೀನನ್ನು ಸಚಿವ ಸಂಪುಟದ ಅನುಮೋದನೆ ಪಡೆಯದೇ ಕೆಐಎಡಿಬಿ ಒಪ್ಪಂದನ್ನು ಮಾಡಿಕೊಂಡಿದೆ. ಆದರೆ ಮೂಲ ಯೋಜನೆಯೇ ಇನ್ನೂ ಸಂಪೂರ್ಣ ಜಾರಿಗೊಂಡಿಲ್ಲ.
ಬಿಎಂಐಸಿಎ ಯೋಜನೆಗೆ ಸಂಬಂಧಿಸಿದಂತೆ ಕೆಐಎಡಿಬಿ ಕಾಯ್ದೆಯಂತೆ 25,616 ಎಕರೆ ಅನುಸೂಚಿತ ಪ್ರದೇಶವನ್ನು ಕೈಗಾರಿಕಾ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಖಾಸಗಿ ಜಮೀನುಗಳ ವಿಚಾರದಲ್ಲಿ 18,058 ಎಕರೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆಯಾಗಿದ್ದು, 4,809 ಎಕರೆ ಜಮೀನುಗಳಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈಗ ಬಿಎಂಐಸಿ ಯೋಜನೆಯ ಭವಿಷ್ಯವನ್ನು ಪರಿಶೀಲಿಸಲು ಸಂಪುಟ ಉಪ ಸಮಿತಿಯನ್ನು ರಚನೆ ಮಾಡಲಾಗುತ್ತದೆ.
ಈ ಸಮಿತಿ 110 ಕಿ. ಮೀ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತು ಬಿಡದಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ 13 ಕಿ. ಮೀ. ಲಿಂಕ್ ರೋಡ್ ಕುರಿತು ಸಹ ತೀರ್ಮಾನ ಮಾಡಲಿದೆ. ಈ ಲಿಂಕ್ ರಸ್ತೆ ನೈಸ್ ಸಂಸ್ಥೆ ಜೊತೆ ಮಾಡಿಕೊಂಡ ಮೂಲ ಒಪ್ಪಂದವಾಗಿತ್ತು. ಆದರೆ ಈ ಯೋಜನೆ ಇನ್ನೂ ಸಹ ಆರಂಭವೇ ಆಗಿಲ್ಲ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕಳೆದ ವಾರ ಸಭೆ ನಡೆದಿತ್ತು. ಲಿಂಕ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಹಸ್ತಾಂತರ ಮಾಡುವುದು ಸೇರಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಮಾಹಿತಿಯಂತೆ ಈ ಸಭೆಯಲ್ಲಿ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಸಹ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಕೆಐಎಡಿಬಿ 1916 ಎಕರೆ ಭೂಮಿಯನ್ನು ಏಕೆ ನೈಸ್ ಸಂಸ್ಥೆಗೆ ಹಸ್ತಾಂತರ ಮಾಡಿಲ್ಲ ಎಂದು ಮುಖ್ಯ ಕಾರ್ಯದರ್ಶಿಗಳು ಪ್ರಶ್ನಿಸಿದ್ದರು. ಅಂತಿನ ಅಧಿಸೂಚನೆ ಪ್ರಕಟವಾದರೂ ಸಹ ಭೂಮಿ ಹಸ್ತಾಂತರ ಮಾಡಲು ಆಗಿರುವ ಸಮಸ್ಯೆಗಳ ಕುರಿತು ಚರ್ಚಿಸಿದ್ದರು.
ಬಿಡಿದಿ ಟೌನ್ ಶಿಪ್ ಯೋಜನೆ, ಲಿಂಕ್ ರಸ್ತೆ ಯೋಜನೆ ಎಲ್ಲವೂ ಸೇರಿ ಅನಗತ್ಯ ಗೊಂದಲ ಉಂಟಾಗಿದೆ. ಆದ್ದರಿಂದ ನಗರಾಭಿವೃದ್ಧಿ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರವನ್ನು ನೀಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿತ್ತು, ಈ ಕುರಿತು ಸಿಎಸ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.
ಈ ಸಭೆಯಲ್ಲಿಯೇ ಕೆಐಎಡಿಬಿ, ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಗೆ ಅಗತ್ಯ ಭೂಮಿಯನ್ನು ಹಸ್ತಾಂತರ ಮಾಡಲು ಸೂಚನೆ ನೀಡಲಾಗಿತ್ತು. ಮೈಸೂರು ರಸ್ತೆ-ಹೊಸಕೆರೆ ಹಳ್ಳಿ ಜಂಕ್ಷನ್ ರಸ್ತೆಯ ನಿರ್ಮಾಣ ಪೂರ್ಣಗೊಳಿಸುವುದು, ಸುಂಕದಕಟ್ಟೆ-ಕಡಬಗೆರೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿ ಮುಗಿಸುವುದು, ಬಿಡದಿ ಲಿಂಕ್ ರಸ್ತೆ ನಿರ್ಮಾಣದ ಕುರಿತು ಚರ್ಚೆಗಳು ನಡೆದಿವೆ.
ವಿವಿಧ ಯೋಜನೆಗಾಗಿ ನೈಸ್ ಸಂಸ್ಥೆಗೆ ಇದುವರೆಗೂ 2191 ಎಕರೆ ಖಾಸಗಿ, 5 ಸಾವಿರ ಎಕರೆ ಸರ್ಕಾರಿ ಜಮೀನು ಹಸ್ತಾಂತರ ಮಾಡಲಾಗಿದೆ. ಆದರೆ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. 2 ಸಾವಿರ ಎಕರೆ ಸರ್ಕಾರಿ ಜಮೀನು, 1699 ಎಕರೆ ಜಮೀನನ್ನು ಕೆಐಎಡಿಬಿಯಿಂದ ನೈಸ್ ಸಂಸ್ಥೆಗೆ ಶುದ್ಧ ಕ್ರಯಪತ್ರ ಮಾಡಿಕೊಡಲಾಗಿದೆ.
ಈ ಎಲ್ಲಾ ವಿಚಾರಗಳ ಕುರಿತು ಸಂಪುಟ ಉಪ ಸಮಿತಿ ಚರ್ಚೆ ಮಾಡಿ ಸಚಿವ ಸಂಪುಟಕ್ಕೆ ಶಿಫಾರಸು ಸಲ್ಲಿಕೆ ಮಾಡಲಿದೆ. ಬಳಿಕ ನೈಸ್ ಸಂಸ್ಥೆಗೆ ವಹಿಸಿರುವ ಯೋಜನೆಗಳ ಬಾಕಿ ಕಾಮಗಾರಿ ಪೂರ್ಣಗೊಳಿಸುವ ಕುರಿತು ಸರ್ಕಾರ ತೀರ್ಮಾನವನ್ನು ಕೈಗೊಳ್ಳಲಿದೆ.












Click it and Unblock the Notifications