ಊಟಕ್ಕೆ ಹೊರಟಿದ್ದ ಕ್ಯಾಬ್ ಚಾಲಕನನ್ನು ಅನಾಯಾಸವಾಗಿ ಕೊಂದ ಪಾಪಿಗಳು
ಬೆಂಗಳೂರು, ಡಿಸೆಂಬರ್ 5: ಊಟಕ್ಕೆ ಹೊರಟಿದ್ದ ಕ್ಯಾಬ್ ಚಾಲಕನನ್ನು ಅನಾಯಾಸವಾಗಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿಗೆ ಉದ್ಯೋಗವನ್ನರಸಿಕೊಂಡು ದಿನನಿತ್ಯ ಸಾವಿರಾರು ಮಂದಿ ಬರುತ್ತಾರೆ, ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತಹ ಕೆಲಸ ಸಿಗಲಿಲ್ಲ ಎಂದರೂ ಯಾವುದೋ ಒಂದು ಕೆಲಸ ಸಿಕ್ಕಿತಲ್ಲ ಎಂದು ಸೇರಿಕೊಳ್ಳುತ್ತಾರೆ.
ಹಾಗೆಯೇ ಬೆಂಗಳೂರಿಗೆ ಬಂದು ಹಣವನ್ನು ಸಂಪಾದಿಸಿ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವ ವಿಶ್ವಾಸದಿಂದ ಚಾಲಕನಾಗಿ ಕೆಲಸಕ್ಕೆ ಸೇರಿದ್ದ ಮೋಹನ್. ಆದರೆ ಇಂದು ಹೆಣವಾಗಿ ಮಲಗಿದ್ದಾನೆ.

ಮೋಹನ್ ಜಾಲಹಳ್ಳಿಯಲ್ಲಿ ರೂಮ್ ಮಾಡಿಕೊಂಡಿದ್ದ, ಆಗಾಗ ಸ್ನೇಹಿತನ ಮನೆಗೆ ತೆರಳಿ ಅಲ್ಲಿಯೇ ಊಟಮಾಡಿ ಉಳಿದುಕೊಳ್ಳುತ್ತಿದ್ದ, ಅಂದು ಕಾರನ್ನು ನಿಲ್ಲಿಸಿ ಊಟಕ್ಕೆಂದು ಸ್ನೇಹಿತನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನನ್ನು ತಡೆದು ನಿಲ್ಲಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಆದರೆ ಕೊಡಲು ನಿರಾಕರಿಸಿದ ಮೋಹನ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications