ಆರ್‌ಸಿಬಿ ಕೇಸ್‌ನಲ್ಲಿ ಸಸ್ಪೆಂಡ್ ಆದ ಅಧಿಕಾರಿಗಳಿಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು: ವಿಜಯೇಂದ್ರ
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮೀಷನರ್ ಸೇರಿ ಹಲವು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸಸ್ಪೆಂಡ್ ಮಾಡಿತ್ತು. ಇದೀಗ ಪೊಲೀಸ್ ಅಧಿಕಾರಿಗಳ ಅಮಾನತು ರದ್ದು ಮಾಡುವುದಾಗಿ ಸರ್ಕಾರ ಹೇಳಿದೆ. ಆದರೆ ತಪ್ಪೇ ಮಾಡದೆ ಸಸ್ಪೆಂಡ್ ಆದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಹದಗೆಟ್ಟ ಕಾನೂನು ಸುವ್ಯವಸ್ಥೆಯ ನಿರಂತರ ವೈಫಲ್ಯ, ಇವೆಲ್ಲವನ್ನೂ ಮುಚ್ಚಿಕೊಳ್ಳಲು ಆಯೋಗಗಳನ್ನು ರಚಿಸುವುದು, ಪ್ರಾಮಾಣಿಕ ಅಧಿಕಾರಿಗಳ ಬಲಿ ತೆಗೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರದ ಜನರ ದಿಕ್ಕು ತಪ್ಪಿಸುವ ಕುತಂತ್ರ ನಡವಳಿಕೆ ಎಂದು ವಿಜಯೇಂದ್ರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಆರ್‌ಸಿಬಿ ವಿಜಯೋತ್ಸವದ ಸಂಭ್ರಮಾಚರಣೆಯನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟು, ದೂರದೃಷ್ಟಿ ಹಾಗೂ ಜನಕಾಳಜಿ ಇಲ್ಲದ ಅವಿವೇಕಿ ನಿರ್ಧಾರ ತೆಗೆದುಕೊಂಡ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ತಲೆದಂಡ ತಪ್ಪಿಸಿಕೊಳ್ಳಲು ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿತ್ತು. ಈಗ ಸರ್ಕಾರ ಇದೀಗ ಅವರ ಅಮಾನತ್ತನ್ನು ರದ್ದುಗೊಳಿಸಿ ಮುಖ ಮುಚ್ಚಿಕೊಳ್ಳಲು ಹೊರಟಿದೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಸರ್ಕಾರದ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ 'ತುಘಲಕ್' ನಿರ್ಧಾರದಿಂದ ಇಂತಹ ಘೋರ ದುರಂತ ಸಂಭವಿಸಿತು ಎಂಬ ವಾಸ್ತವ ಸತ್ಯದ ಹಿನ್ನಲೆಯಲ್ಲಿ ಜನಾಕ್ರೋಶ ಎದುರಿಸಲಾಗದೆ, 'ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು' ಭಂಡತನದಿಂದ ಅಧಿಕಾರದಲ್ಲಿ ಉಳಿಯಲು ತಪ್ಪೆಸಗದ ಪೊಲೀಸ್ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಿ, ಹೊಣೆಗೇಡಿತನದಿಂದ ಪಾರಾಗಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಪ್ರಯತ್ನಿಸಿದ್ದರು. ಇದೀಗ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅಧಿಕಾರಿಗಳ ಅಮಾನತು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಅಮಾನತು ರದ್ದುಗೊಂಡ ಅಧಿಕಾರಿಗಳಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಸ್ಪೆಂಡ್ ಆಗಿದ್ದು ಯಾರೆಲ್ಲ?
ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟ ದುರಂತದ ಆರೋಪ ಹೊರಿಸಿ, ಕರ್ತವ್ಯಲೋಪ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್, ಕೇಂದ್ರ ವಿಭಾಗದ ಡಿಸಿಪಿ ಎಚ್‌ಟಿ ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಕೆ ಗಿರೀಶ್ ಅವರನ್ನು ಅಮಾನತು ಮಾಡಲಾಗಿತ್ತು. ಕರ್ತವ್ಯಲೋಪ ಆರೋಪದ ಮೇರೆಗೆ ಪೊಲೀಸ್ ಅಧಿಕಾರಿಗಳನ್ನು ಹೊಣೆ ಮಾಡಿ ಸಸ್ಪೆಂಡ್ ಮಾಡಲಾಗಿತ್ತು. ಇದಕ್ಕೆ ಎಲ್ಲೆಡೆ ಆಕ್ರೋಶವೂ ವ್ಯಕ್ತವಾಗಿತ್ತು. ಪೊಲೀಸರ ಮೇಲೆ ಸುಖಾಸುಮ್ಮನೆ ಗೂಬೆ ಕೂರಿಸಲಾಗಿದೆ ಎಂದೂ ಹೇಳಲಾಗಿತ್ತು. ಇದೀಗ ಈ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ.












Click it and Unblock the Notifications