By Election: ಮೂರು ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಎಸ್ ಸೋಲಿಗೆ 4 ಕಾರಣ: ಆರ್. ಅಶೋಕ್ ಸ್ಫೋಟಕ ಹೇಳಿಕೆ!
ಕರ್ನಾಟಕದ ಮೂರು ವಿಧಾನಸಭೆ ಉಪ ಚುನಾವಣೆ ಮುಕ್ತಾಯವಾಗಿದ್ದು. ಇದೀಗ ಈ ಚುನಾವಣೆಯಲ್ಲಿನ ಸೋಲು ಗೆಲುವಿಗೆ ಕಾರಣವೇನು ಎಂದು, ಕಾಂಗ್ರೆಸ್,ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಚರ್ಚಿಸುತ್ತಿವೆ. ಕರ್ನಾಟಕದ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭೆ ಚುನಾವಣೆಲ್ಲಿ ಬಿಜೆಪಿ - ಜೆಡಿಎಸ್ ಪಕ್ಷಗಳು ಮಕಾಡೆ ಮಲಗಿವೆ. ಮೈತ್ರಿ ಪಕ್ಷದ ನಾಯಕರು ಈ ಸೋಲಿನಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಇದರ ನಡುವೆ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖಂಡ ಆರ್. ಅಶೋಕ್ ಅವರು ಮೈತ್ರಿ ಪಕ್ಷದ ಅಭ್ಯರ್ಥಿಗಳ ಸೋಲಿನ ಕಾರಣದ ಬಗ್ಗೆ ಮಾತನಾಡಿದ್ದಾರೆ.
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಹೀನಾಯ ಸೋಲು ಅನುಭವಿಸಿವೆ. ಈ ಸೋಲಿನಿಂದ ಪಕ್ಷದ ನಾಯಕರಿಗೆ ತೀವ್ರ ಮುಜುಗರವಾಗಿದೆ. ಇದು ಆಯಾ ಪಕ್ಷದ ನಾಯಕರ ಮಾತಿನಿಂದಲೇ ತಿಳಿಯುತ್ತಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. ತೀರ ಜಿದ್ದಾಜಿದ್ದಿನ ಪೈಪೋಟಿ ಮತ ಎಣಿಕೆಯ ಪ್ರಾರಂಭದ ಹಂತದಲ್ಲಿ ಇತ್ತು. ಆದರೆ, ಮತ ಎಣಿಕೆಯ ಸುತ್ತುಗಳು ಹೆಚ್ಚಾಗುತ್ತಿದ್ದಂತೆಯೇ ಮೈತ್ರಿಪಕ್ಷದ ಅಭ್ಯರ್ಥಿಗಳ ವಿಶ್ವಾಸ ಕುಗ್ಗಲು ಆರಂಭಿಸಿತ್ತು. ಇದೀಗ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಯಾಕೆ ಸೋಲಾಯಿತು ಎಂದು ಆರ್.ಅಶೋಕ್ ವಿವರಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆ ವಿಳಂಬ
ಈ ಮೂರು ವಿಧಾನಸಭೆಗಳ ಪೈಕಿ ಶಿಗ್ಗಾವಿ ಹಾಗೂ ಚನ್ನಪಟ್ಟಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಲ್ಲಿ ತಡವಾಗಿದೆ. ಆದರೆ, ಸಂಡೂರಿನಲ್ಲಿ ಮೈತ್ರಿ ಅಭ್ಯರ್ಥಿ ಪ್ರಬಲ ಸ್ಪರ್ಧೆ ನೀಡಿದ್ದಾರೆ. ಆದರೆ, ಎರಡು ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿಗೆ ಚೆನ್ನಪಟ್ಟಣದಲ್ಲಿ ಗೆಲುವಾಗಬೇಕಿತ್ತು. ಈ ಅವಕಾಶ ಅವರಿಗೆ ವರವಾಗಬೇಕಿತ್ತು. ಆ ನಿರೀಕ್ಷೆ ಸುಳ್ಳಾಗಿದೆ. ಇದು ಸಾಮಾನ್ಯ ಫಲಿತಾಂಶ ಅಷ್ಟೇ ಜನ ಕಾಂಗ್ರೆಸ್‌ನ ಸಿದ್ದರಾಮಯ್ಯ ಅಥವಾ ಡಿ.ಕೆ ಶಿವಕುಮಾರ್ ಅವರನ್ನು ನೋಡಿ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಹಣ ಹಾಗೂ ಅಧಿಕಾರದಿಂದ ಗೆಲ್ಲಲಾಗಿದೆ ಎಂದು ದೂರಿದ್ದಾರೆ.
ಅಧಿಕಾರಿಗಳ ದುರ್ಬಳಕೆ: ಈ ಉಪ ಚುನಾವಣೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಬಳಸಿಕೊಳ್ಳಲಾಗಿದೆ. ಕೆಲವು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರ್ಕಾರದ ಪರವಾಗಿ ಕೆಲಸ ಮಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವು ಹಣದ ಹೊಳೆಯನ್ನೇ ಹರಿಸಿದೆ ಎಂದು ಆರೋಪಿಸಿದ್ದಾರೆ.

ಆಡಳಿತ ಪಕ್ಷದ ಶಾಸಕರಿದ್ದರೆ ಅಭಿವೃದ್ಧಿ: ಇನ್ನು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ಪಕ್ಷದವರು ಶಾಸಕರಾಗಿದ್ದರೆ, ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇಲ್ಲದಿದ್ದರೆ ಅಭಿವೃದ್ಧಿ ಆಗಲ್ಲ ಎನ್ನುವ ಉದ್ದೇಶದಿಂದಲೂ ಜನ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತದಾನ ಮಾಡಿರುವ ಸಾಧ್ಯತೆ ಇದೆ. ಆದರೆ, ಇದು ಸಿದ್ದರಾಮಯ್ಯ ಇಲ್ಲ, ಡಿ.ಕೆ ಶಿವಕುಮಾರ್ ಅವರ ಗೆಲುವಲ್ಲ ಎಂದು ಅವರು ಹೇಳಿದ್ದಾರೆ.
ಪಕ್ಷದ ವೇದಿಕೆಯಲ್ಲಿ ಚರ್ಚೆ
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತಿರುವುದಕ್ಕೆ ಸಂಬಂಧಿಸಿದಂತೆ ಪಕ್ಷದ ವೇದಿಕೆಯಲ್ಲಿ ಈ ವಿಷಯವನ್ನು ಚರ್ಚೆ ಮಾಡಲಾಗುವುದು. ಸೋಲಿಗೆ ಕಾರಣ ಏನು ಎಂದು ತಿಳಿದುಕೊಳ್ಳಲಾಗುವುದು. ಆದರೆ, ಇನ್ಮುಂದೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾಂಗ್ರೆಸ್‌ನ ಹಗರಣಗಳನ್ನು ಬಯಲಿಗೆಳೆದು, ಜನರ ಮುಂದೆ ತೆಗೆದುಕೊಂಡು ಹೋಗಲಾಗುವುದು ಎಂದು ಆರ್. ಅಶೋಕ್ ಹೇಳಿದ್ದಾರೆ.
ಸೋಲು ಆಘಾತ ತಂದಿದೆ: ಈ ಸೋಲು ನಮಗೆ ಆಘಾತ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಉಪ ಚುನಾವಣೆಯ ಫಲಿತಾಂಶವು ಭಾರೀ ನಿರಾಸೆ ಮೂಡಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಸಭೆ ಸೇರಿ ಈ ಬಗ್ಗೆ ಚರ್ಚೆ ಮಾಡ್ತೀವಿ. ಆಗಿರುವ ತಪ್ಪುಗಳನ್ನು ತಿದ್ದುಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications