Water Crisis: 6 ಮಳೆನೀರು ಕೋಯ್ಲು ಕಾಮಗಾರಿಗೆ ಜಲಮಂಡಳಿ ಸೂಚನೆ
ಬೆಂಗಳೂರು, ಮಾರ್ಚ್ 20: ಬೆಂಗಳೂರಿನಲ್ಲಿ ನೀರಿನ ಬವಣೆ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಮಧ್ಯೆ ಹಲವು ಕ್ರಮಗಳನ್ನು ಕೈಗೊಂಡಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಮಳೆನೀರು ಕೊಯ್ಲಗೆ (Rain Harvesting) ಆದ್ಯತೆ ನೀಡುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಸೂಚಿಸಿರುವ ಜಲಮಂಡಳಿಯು ಜನರಲ್ಲಿ ಅರಿವು ಮೂಡಿಸುವಂತೆ ತಿಳಿಸಿದೆ.
ಬುಧವಾರ ಜಯನಗರದ ಸರ್ ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ಜಲಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಚಾಲನೆ ನೀಡಿ ಮಾತನಾಡಿದರು.

ಮಳೆನೀರು ಕೋಯ್ಲು ಹಾಗೂ ಮರುಪೂರಣಕ್ಕೆ ಪ್ಲಂಬರ್‌ಗಳು ಆದ್ಯತೆ ನೀಡಬೇಕು. ನಿಯಮಗಳ ಅನುಸಾರ ಕಟ್ಟಡಗಳಲ್ಲಿ ಮಳೆನೀರು ಕೋಯ್ಲು ಹಾಗೂ ಅದನ್ನ ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಸಿಕೊಳ್ಳುವಂತೆ ಜನರ ಮನವೊಲಿಸುವುದು ಆದ್ಯತೆ ಆಗಿರಬೇಕು ಎಂದು ಹೇಳಿದರು.
6 ಮಳೆನೀರು ಕೋಯ್ಲು ಕಾಮಗಾರಿಗೆ ಸೂಚನೆ
ಜಲಮಂಡಳಿಯ 11 ಸಾವಿರ ಕೊಳವೆ ಬಾವಿಗಳನ್ನು ಸುಸ್ಥಿಯಲ್ಲಿಡುವತ್ತ ಗಮನ ಹರಿಸಿದೆ. ಈ ಸಂಬಂಧ ಕೊಳವೆ ಬಾವಿಗಳ ರಿಪೇರಿಗಳನ್ನು ಯುದ್ಧೋಪಾದಿಯಲ್ಲಿ ಮಾಡಬೇಕು. ಹಾಗೆಯೇ, ಕಡಿಮೆ ನೀರು ದೊರೆಯುತ್ತಿರುವ ಕೊಳವೆ ಬಾವಿಗಳನ್ನ ಇಂಗುಗುಂಡಿಗಳನ್ನಾಗಿ ಪರಿವರ್ತಿಸಬೇಕು. ಈ ಮೂಲಕ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಅಂತರ್ಜಲ ಮರುಪೂರಣಕ್ಕೆ ಬಳಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಅಂತರ್ಜಲ ಕುಸಿತದಿಂದ ನಗರದಲ್ಲಿ ಆಗಿರುವ ನೀರಿನ ಅಭಾವ, ನೀರಿನ ಸಂರಕ್ಷಣೆ ಹಾಗೂ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಜೊತೆ ನೊಂದಾಯಿತ ಪ್ಲಂಬರ್ ಕೈಜೋಡಿಸಿಬೇಕು ಎಂದು ಕರೆ ನೀಡಿದರು.
1000 ಲೀ. ನೀರು ಪೂರೈಕೆಗೆ 95 ರೂ.ವೆಚ್ಚ
ಸದ್ಯಕ್ಕೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲ. ಆದರೆ, ಜನರ ಅಜಾಗರೂಕತೆ ಹಾಗೂ ನಿರ್ಲಕ್ಷದಿಂದ ಬಹಳಷ್ಟು ಶುದ್ಧ ನೀರು ಚರಂಡಿಯ ಪಾಲಾಗುತ್ತಿದೆ. 1000 ಲೀಟರ್ ನೀರನ್ನು ಬೆಂಗಳೂರಿನ ಮನೆಗಳಿಗೆ ಸರಬರಾಜು ಮಾಡಲು ಮಂಡಳಿಗೆ ಸುಮಾರು 95 ರೂಪಾಯಿಗಳ ವೆಚ್ಚವಾಗುತ್ತದೆ.

ಆದರೆ ಜನರಿಗೆ ನಾವು ರಿಯಾಯಿತಿ ದರವಾದ 45 ರೂಪಾಯಿಗಳಲ್ಲಿ ನೀರನ್ನು ಒದಗಿಸುತ್ತಿದ್ದೇವೆ. ನೀರು ಅತ್ಯಮೂಲ್ಯ ವಸ್ತು ಇದರ ಸಂರಕ್ಷಣೆ ನಮ್ಮ ಪ್ರಥಮ ಆದ್ಯತೆ ನೀಡಬೇಕು ಎಂದು ಜಲಮಂಡಳಿ ಗ್ರಾಹಕರಿಗೆ ಸಲಹೆ ನೀಡಿದರು.
ಜಲಮಂಡಳಿ ಮಿತ್ರರಾಗಿ ಕಾರ್ಯನಿರ್ವಹಿಸಿ
ಪ್ಲಂಬರ್ ಗಳು ಜಲಮಂಡಳಿಯ ಮಿತ್ರರಾಗಿ ಕಾರ್ಯ ನಿರ್ವಹಿಸಬೇಕು. ತಾವು ಕಾರ್ಯ ನಿರ್ವಹಿಸುತ್ತಿರುವಂತಹ ವ್ಯಾಪ್ತಿಯಲ್ಲಿ ಇರುವಂತಹ ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್ ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಬೇಕು. ನಲ್ಲಿಗಳಿಗೆ ಏರಿಯೇಟರ್ ಹಾಗೂ ಫ್ಲೋ ಕಂಟ್ರೋಲರ್ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಏರಿಯೇಟರ್ ಕಡ್ಡಾಯ ಅಳವಡಿಕೆ
ಈಗಾಗಲೇ ಜಲಮಂಡಳಿಯು ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದೇವೆ. ಜನರು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳುವಂತೆ ಮನವೊಲಿಸಬೇಕು. ಇದರಲ್ಲಿ ಪ್ಲಂಬರ್‌ಗಳ ಪಾತ್ರ ದೊಡ್ಡದು. ಅದಕ್ಕಾಗಿ ನೀವು ಜಲಮಂಡಳಿ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಂಡಳಿಯ ಅಧಿಕಾರಿಗಳು ಆಯಾ ಪ್ಲಂಬರ್ ಗಳ ಜೋನ್ ನಲ್ಲಿ ಕಡಿಮೆ ನೀರು ದೊರೆಯುತ್ತಿರುವ ಹಾಗೂ ಬತ್ತಿ ಹೋಗಿರುವ ಕೊಳವೆ ಬಾವಿಗಳನ್ನು ಗುರುತಿಸಿ ಪ್ಲಂಬರ್‌ಗಳಿಗೆ ಅದರ ಕೆಲಸವನ್ನು ವಹಿಸುವಂತೆ ಸೂಚನೆ ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ಜಲಮಂಡಳಿ ಅಧಿಕಾರಿಗಳು, ಪ್ಲಂಬರ್ ಸಂಘದ ಸದಸ್ಯರು ಉಪಸ್ಥಿತರಿದ್ದರು.












Click it and Unblock the Notifications