ಬೆಂಗಳೂರಿಗೆ ಸಿಹಿ ಸುದ್ದಿ: ಹಬ್ಬದಂದೇ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ: ಡಿಕೆ ಶಿವಕುಮಾರ್
ಬೆಂಗಳೂರು, ಸೆಪ್ಟಂಬರ್ 23: ರಾಜ್ಯ ರಾಜಧಾನಿ ಬೆಂಗಳೂರಿನ ಮೂಲೆ ಮೂಲೆಗೂ ಕುಡಿಯುವ ಕಾವೇರಿ ನೀರು ಪೂರೈಕೆಗೆ BWSSB ಕಾವೇರಿ ಐದನೇ ಘಟ್ಟದ ಯೋಜನೆ ಆರಂಭಿಸಿತ್ತು. ಈ ಯೋಜನೆ ಕಾಮಗಾರಿ ಅಂತಿಮಗೊಂಡಿದೆ. ಈ ವರ್ಷ ದಸರಾ ಹಬ್ಬದಂದು ಕಾವೇರಿ ನೀರು ಪೂರೈಕೆಯ ಈ ಹೊಸ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಸೋಮವಾರ ಡಿಕೆ ಶಿವಕುಮಾರ್ ಕಾವೇರಿ 5 ನೇ ಹಂತದ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಕೃಷ್ಣಪ್ರಿಯ ಕಲ್ಯಾಣ ಮಂಟಪ, ಕೆಂಗೇರಿಯಲ್ಲಿ ಚಾಲನೆಯಲ್ಲಿರುವ ಬೃಹತ್ ಕೊಳವೆ ಮಾರ್ಗದ ಕಾಮಗಾರಿ, ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 5 ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆಯ ಪಂಪ್ ಸ್ಟೇಷನ್, ಟಿ.ಕೆ ಹಳ್ಳಿಯಲ್ಲಿರುವ ಬೃಹತ್ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿದರು. ಬಳಿಕ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.

50 ಲಕ್ಷ ಜನರಿಗೆ ನೀರು ಒದಗಿಸುವ ಯೋಜನೆ
ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ ಭಾರತ ದೇಶದ ಅತಿದೊಡ್ಡ ನೀರು ಸರಬರಾಜು ಯೋಜನೆಗಳಲ್ಲಿ ಒಂದಾಗಿದೆ. ಒಂದೇ ಹಂತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸುವ ಬೃಹತ್ ಯೋಜನೆ ಇದಾಗಿದ್ದು, ದೇಶದ ಮೆಟ್ರೋ ಸಿಟಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಗರಗಳಲ್ಲೂ ಇಷ್ಟು ದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿಲ್ಲ ಎಂದು ತಿಳಿಸಿದರು.
ಭಾರತದಲ್ಲೆ ಅತಿದೊಡ್ಡ 775 ಎಂ.ಎಲ್.ಡಿ ಸಾಮರ್ಥ್ಯದ ಅತ್ಯಾಧುನಿಕ ನೀರು ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣ ಈ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅತ್ಯಾಧುನಿಕ ಪ್ರವಾಹ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ನಿರಂತರವಾಗಿ ಕಾರ್ಯಾಚರಣೆ ಸಾಧ್ಯವಾಗಲಿದೆ.

ಅತ್ಯಾಧುನಿಕ 3 ಬೂಸ್ಟರ್ ಪಂಪಿಂಗ್ ಕೇಂದ್ರ
ಕಾವೇರಿ ಐದನೇ ಹಂತದ ಯೋಜನೆಯಲ್ಲಿ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈ ಪಂಪಿಂಗ್ ಕೇಂದ್ರಗಳ ಸಹಾಯದಿಂದ ಸುಮಾರು 110 ಕಿಲೋಮೀಟರ್ ದೂರದಿಂದ 500 ಹಾಗೂ 2200 ಎಂಎಂನಷ್ಟು ವ್ಯಾಸದ ಬೃಹತ್ ಉಕ್ಕಿನ ಪೈಪ್‌ಗಳ ಮೂಲಕ ಕಾವೇರಿ ನೀರನ್ನು 450 ಮೀಟರ್ ಎತ್ತರಕ್ಕೆ ಹರಿಸಿ (ಸುಮಾರು 50 ಅಂತಸ್ತಿನ ಕಟ್ಟಡದಷ್ಟು ಎತ್ತರ) ಬೆಂಗಳೂರು ನಗರಕ್ಕೆ ನೀರನ್ನು ಪೂರೈಸಲಾಗುತ್ತದೆ.
ಇನ್ನೂ ಕಾವೇರಿ 5ನೇ ಹಂತದ ಯೋಜನೆಗೆ 1,45,000 ಮೆಗಾ ಟನ್ ಸ್ಟೀಲ್ ಪ್ಲೇಟ್‌ಗಳ ಬಳಕೆ ಮಾಡಲಾಗಿದೆ. 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆಯ ಯೋಜನೆ ಪೂರೈಸಲು 2.4 ಕೋಟಿ ಮಾನವ ಗಂಟೆಗಳ ಶ್ರಮ ಬಳಕೆಯಾಗಿದೆ. ಹೀಗಾಗಿ ನಾನು ಈ ಬೃಹತ್ ಯೋಜನೆಯನ್ನು ' Modern Engineering Marvel' ಎಂದು ಕರೆಯಬಹುದೆಂದು ಅವರು ಹರ್ಷ ವ್ಯಕ್ತಪಡಿಸಿದರು.
ಪ್ರತಿ ಮನೆಗೆ ಕಾವೇರಿ ನೀರು ಪೂರೈಕೆ ಗುರಿ
ರಾಜಧಾನಿ ಬೆಂಗಳೂರಿನ ಹೊರವಲಯಕ್ಕೆ ಬರುವ ಕಾವೇರಿ ನೀರು, ವಾಜರಹಳ್ಳಿ ಬಳಿ ಪೈಪ್‌ಲೈನ್ ವಿಭಜನೆಯಾಗಿ ಸ್ಟೀಲ್ ಟ್ರಂಕ್ ಮೇನ್ ಮೂಲಕ ನಗರದ ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಲಿಂಗಧೀರನಹಳ್ಳಿ, ಸಿಂಗಾಪುರ, ಎಸ್‌ಎಂವಿ 6ನೇ ಬ್ಲಾಕ್, ಕಾಡುಗೋಡಿ ಮತ್ತು ಚೊಕ್ಕನಹಳ್ಳಿ ಜಲಾಶಯಗಳಿಗೆ ನೀರು ತುಂಬಿಸುತ್ತದೆ.
ಬೆಂಗಳೂರಿನ ವಿವಿಧ ಬಡಾವಣೆಯ "ನೀರಿನ ದಾಹ" ತಣಿಸುವ ಯೋಜನೆ ಇದಾಗಿದೆ. ಕಾವೇರಿ 5ನೇ ಹಂತದ ಯೋಜನೆಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಕಾವೇರಿ ನೀರು ಸರಬರಾಜು ಆಗಲಿದೆ ಎಂದು ಅವರು ಯೋಜನೆಯಿಂದ ಆಗುವ ಲಾಭ, ಸಮರ್ಪಕ ನೀರಿನ ಪೂರೈಕೆ ಕುರಿತು ಅವರು ತಿಳಿಸಿದರು.












Click it and Unblock the Notifications