Borewell: ಬೆಂಗಳೂರಿನಲ್ಲಿ ಬೋರ್‌ವೆಲ್ ಕೊರೆಸುವುದು ಬ್ಯಾನ್!
ಬೆಂಗಳೂರಿನಲ್ಲಿ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗುವ ಕಾರಣ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಈಗಾಗಲೇ ಕುಡಿಯುವ ನೀರಿನ ಬಳಕೆ ಮೇಲೆ ದಂಡಾಸ್ತ್ರ ಪ್ರಯೋಗಿಸಿದೆ. ಇದೀಗ ಬೆಂಗಳೂರು ಭಾಗದಲ್ಲಿ ಯಾವುದೇ ಬೋರ್‌ವೆಲ್ ಕೊರೆಸುವುದನ್ನು ಕೂಡ ನಿಷೇಧಿಸಿದೆ.
ಬೆಂಗಳೂರು ಭಾಗದಲ್ಲಿ ಸತತ ಮೂರು ವರ್ಷಗಳಿಂದಲೂ ಅಂತರ್ಜಲ ಮಟ್ಟ ಕುಸಿಯುತ್ತಿರುವ ಬಗ್ಗೆ ಐಐಎಸ್‌ಸಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಬೆಂಗಳೂರು ಜಲಮಂಡಳಿಯು ನಗರ ವ್ಯಾಪ್ತಿಯಲ್ಲಿ ಬೋರ್‌ವೆಲ್ ಕೊರೆಯುವುದನ್ನು ನಿಷೇಧಿಸಿದೆ. ಬೇಸಿಗೆ ಮುಗಿಯುವವರೆಗೆ ಬೆಂಗಳೂರು ಭಾಗದಲ್ಲಿ ಬೋರ್‌ವೆಲ್ ಕೊರೆಸುವಂತಿಲ್ಲ. ಯಾರಾದರೂ ನಿಯಮ ಉಲ್ಲಂಘಿಸಿ ಬೋರ್‌ವೆಲ್ ಕೊರೆಸಿದರೆ ಅವರ ವಿರುದ್ಧ ರಾಜ್ಯ ಸರ್ಕಾರದಿಂದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ವಾರ್ನಿಂಗ್ ನೀಡಿದೆ.

ಬೆಂಗಳೂರು ನಗರ ಭಾಗದಲ್ಲಿ ಅಂತರ್ಜಲ ಮಟ್ಟದಲ್ಲಿ ನಿರಂತರ ಕುಸಿತ ಕಾಣುತ್ತಿರುವುದನ್ನು ಪರಿಗಣಿಸಿ ಮುಂಜಾಗ್ರತಾ ಕ್ರಮವಾಗಿ ಬೋರ್‌ವೆಲ್ ಕೊರೆಸುವುದಕ್ಕೆ ಕಡಿವಾಣ ಹಾಕಲಾಗಿದೆ. ಬೇಸಿಗೆ ಮುಗಿದ ನಂತರ ವರ್ಷದ ಉಳಿದ ಅವಧಿಯಲ್ಲಿ ಬೋರ್‌ವೆಲ್ ಅಗೆಯುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದೂ ಜಲಮಂಡಳಿ ಸ್ಪಷ್ಟನೆ ನೀಡಿದೆ.
ನಗರದ 80 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯು (IISc) ವರದಿ ನೀಡಿರುವುದು ಹಾಗೂ ನೀರನ್ನ ಹೆಚ್ಚಾಗಿ ಬಳಸುತ್ತಿದ್ದು, ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸ್ಪಷ್ಟನೆ ನೀಡಿದ್ದಾರೆ.

ಬೋರ್‌ವೆಲ್‌ಗೆ ಅರ್ಜಿ ಸ್ವೀಕಾರವೂ ಬಂದ್
ಜಲಮಂಡಳಿಯು ಈಗಾಗಲೇ ಬೋರ್‌ವೆಲ್‌ಗಳನ್ನು ಕೊರೆಯಲು ನಿರಾಕ್ಷೇಪಣಾ ಪ್ರಮಾಣಪತ್ರವನ್ನು (ಎನ್‌ಒಸಿ) ಕೋರಿ ವರ್ಷವಿಡೀ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆದರೆ ಈ ತಜ್ಞರ ಸಮಿತಿಯು ಕಳೆದ ವಾರದಿಂದ ಹೊಸ ಬೋರ್‌ವೆಲ್ ಕೊರಿಸಲು ಸಲ್ಲಿಸುತ್ತಿರುವ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಿದೆ.
ಬೋರ್‌ವೆಲ್‌ಗಳನ್ನು ಕೊರೆಸಲು ಅನುಮತಿಗಾಗಿ ಜಲಮಂಡಳಿಗೆ ಪ್ರತಿ ತಿಂಗಳು 200ರಿಂದ 300 ಅರ್ಜಿಗಳನ್ನು ಬರುತ್ತಿವೆ. ಬೇಸಿಗೆಯಲ್ಲಿ ಈ ಸಂಖ್ಯೆ 1,000 ದಾಟಿದೆ. ಕಳೆದ ವರ್ಷ 2,835 ಅರ್ಜಿಗಳು ಬಂದಿದ್ದರೆ, ಬೇಸಿಗೆ ಸಮಯದಲ್ಲೇ 1,634 ಅರ್ಜಿಗಳು ಬಂದಿದ್ದವು. ಈ ಪೈಕಿ 1,273 ಅರ್ಜಿಗಳಿಗೆ ಅನುಮೋದನೆ ಸಿಕ್ಕಿತ್ತು. 2025ರಲ್ಲಿ ಈವರೆಗೆ 600 ಅರ್ಜಿಗಳು ಹೊಸ ಬೋರ್‌ವೆಲ್‌ಗಾಗಿ ಬಂದಿದ್ದು, ಬಂದವು, 30ಕ್ಕೆ ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಯುವ ಉದ್ದೇಶದೊಂದಿಗೆ ಜಲಮಂಡಳಿಯು ದಂಡಾಸ್ತ್ರವನ್ನು ಪ್ರಯೋಗಿಸುತ್ತಿದೆ. ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದರೆ ಅಥವಾ ನೀರನ್ನು ಪೋಲು ಮಾಡಿದರೆ 5,000 ರೂಪಾಯಿವರೆಗೆ ದಂಡ ವಿಧಿಸುವ ಆದೇಶ ಹೊರಡಿಸಿದೆ. ಇದಕ್ಕೂ ಬಗ್ಗದ ಜನರ ವಿರುದ್ಧ ಒಂದೇ ವಾರದಲ್ಲಿ 112 ಕೇಸ್ ದಾಖಲಿಸಿ, 5.60 ಲಕ್ಷ ರೂಪಾಯಿ ದಂಡ ಕೂಡ ವಸೂಲಿ ಮಾಡಿದೆ.












Click it and Unblock the Notifications