ಭಾರತದ ಪ್ರಗತಿಗೆ, ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನ ಪೂರಕ: ನರೇಂದ್ರ ಮೋದಿ
ಬೆಂಗಳೂರು, ನವೆಂಬರ್ 16: ಭಾರತದಲ್ಲಿ 81 ಸಾವಿರ ನವೋದ್ಯಮಗಳಿವೆ. ಯೂನಿಕಾರ್ನ್‌ಗಳಲ್ಲಿ ಪ್ರಪಂಚದ 3ನೇ ಅತಿದೊಡ್ಡ ಹಬ್ ಆದ ಭಾರತವು ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಕಳೆದ ಎಂಟು ವರ್ಷದ 40 ಸ್ಥಾನಗಳಷ್ಟು ಮೇಲಕ್ಕೆ ಏರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಆರಂಭವಾದ 25ನೇ ವರ್ಷದ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2022' (BTS 22) ಅನ್ನು ಆನ್‌ಲೈನ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಹೆಲ್ತ್ ಟೆಕ್, ಫಿನ್ ಟೆಕ್, ಎಡುಟೆಕ್ ಸೇರಿದಂತೆ ಎಲ್ಲ ರಂಗಗಳನ್ನೂ ಭಾರತೀಯರು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ತಂತ್ರಜ್ಞಾನಕ್ಕೆ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಸ್ಪರ್ಶವನ್ನು ನೀಡುತ್ತಲೇ ಇರುವುದು ಭಾರತದ ಅನನ್ಯ ಸಾಧನೆಯಾಗಿದೆ. ತಂತ್ರಜ್ಞಾನವು ನಮಗೆ ಬಡತನದ ವಿರುದ್ಧದ ಹೋರಾಟಕ್ಕೆ ಶಕ್ತಿಶಾಲಿ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಬ್ರಾಡ್‌ಬ್ಯಾಂಡ್ ಕ್ರಾಂತಿ
ಭಾರತದಲ್ಲಿ ಬಂಡವಾಳ ಹೂಡಿಕೆದಾರರ ಕೊರತೆ ಇದೆ ಎಂಬ ಕೊರಗು ಈಗಾಗಲೇ ಕೊನೆಗೊಂಡಿದೆ. ಮೂಲಸೌಲಭ್ಯ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ 100 ಟ್ರಿಲಿಯನ್ ಡಾಲರ್‌ನಷ್ಟು ಹಣ ಹೂಡಿಕೆ ಆಗಲಿದೆ. ಅದರಲ್ಲೂ ತಂತ್ರಜ್ಞಾನ, ನಾವೀನ್ಯತೆ ತವರಾದ ಬೆಂಗಳೂರಲ್ಲಿ ಹೂಡಿಕೆಗೆ ಹೆಚ್ಚು ಒಲವು ಇದೆ ಎಂದರು.
ಹೂಡಿಕೆದಾರರ ನಂಬಿಕೆ ಮತ್ತು ದೇಶದ ತಂತ್ರಜ್ಞಾನದ ಶಕ್ತಿ ಇವೆರಡರಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯವಾಗಲಿದೆ. ಈಗ ಗ್ರಾಮೀಣ ಭಾಗಗಳಲ್ಲಿ ಬ್ರಾಡ್‌ಬ್ಯಾಂಡ್ ಕ್ರಾಂತಿ ನಡೆಯುತ್ತಿದೆ. ಮೊಬೈಲ್‌ನ ವ್ಯಾಪಕ ಬಳಕೆಯಿಂದಾಗಿ ಪ್ರಪಂಚವೇ ಬೆರಗಿನಿಂದ ನೋಡುತ್ತಿರುವಂಥ ಡಿಜಿಟಲ್ ಆರ್ಥಿಕತೆ ನಮ್ಮಲ್ಲಿ ರೂಪುಗೊಂಡಿದೆ.

ಭಾರತದಲ್ಲಿ ಅಗ್ಗದ ದರದಲ್ಲಿ ಡೇಟಾ
ತಂತ್ರಜ್ಞಾನದ ಅಳವಡಿಕೆಯಿಂದಾಗಿ ನಾವು 200 ಕೋಟಿಗೂ ಹೆಚ್ಚು ಕೊರೋನಾ ಲಸಿಕೆ ನೀಡಿದ್ದೇವೆ. ಹಾಗೆಯೇ 200 ದಶಲಕ್ಷ ಕುಟುಂಬಗಳ 600 ದಶಲಕ್ಷ ಜನರಿಗೆ ಆಯುಷ್ಮಾನ್ ಭಾರತ ಯೋಜನೆಯ ಮೂಲಕ ವೈದ್ಯಕೀಯ ಚಿಕಿತ್ಸೆ ಒದಗಿಸಿದ್ದೇವೆ. ನಮ್ಮಲ್ಲಿ ಸಿಗುತ್ತಿರುವಷ್ಟು ಅಗ್ಗದ ದರದಲ್ಲಿ ಡೇಟಾ ಎಲ್ಲೂ ಸಿಗುತ್ತಿಲ್ಲ. ಒಟ್ಟಿನಲ್ಲಿ ತಂತ್ರಜ್ಞಾನದ ಮೂಲಕ ಭಾರತವು ಬೇರಾವ ದೇಶಕ್ಕೂ ಸಾಧ್ಯವಾಗದಂತಹ ಸಾಧನೆಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.

ದೇಶ ಮಾಹಿತಿ ತಂತ್ರಜ್ಞಾನದ ಹೆದ್ದಾರಿ
ಮುಖ್ಯವಾಗಿ ತಂತ್ರಜ್ಞಾನದಿಂದ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣಗಳನ್ನು ಸಾಧಿಸಲಾಗುತ್ತಿದೆ. ದೇಶವು ಮಾಹಿತಿ ತಂತ್ರಜ್ಞಾನದ ಹೆದ್ದಾರಿ ಆಗಿದೆ. ಕೊರೋನಾ ಪಿಡುಗಿನ ವಿರುದ್ಧ ಹೋರಾಟ, ಶಿಕ್ಷಣ, ನೇರ ನಗದು ವರ್ಗಾವಣೆ, ಜನ್‌ಧನ್, ಆಧಾರ್, ಇ-ಮಾರ್ಕೆಟ್ ಎಲ್ಲವು ಯಶಸ್ವಿಯಾಗಲು ಭಾರತದಲ್ಲಿ ತಂತ್ರಜ್ಞಾನವೇ ಕಾರಣವಾಗಿದೆ ಎಂದು ತಂತ್ರಜ್ಞಾನದಿಂದ ಆಗುತ್ತಿರುವ ಬದಲಾವಣೆ, ಬೆಳೆವಣಿಗೆಗಳನ್ನು ಪ್ರಧಾನಿ ವಿವರಿಸಿದರು.

ಬೆಂಗಳೂರು ನಾವೀನ್ಯತೆಯ ಸಂಸ್ಕೃತಿಯ ಪ್ರತೀಕ
ಬಿಟಿಎಸ್ 2022 ಉದ್ಘಾಟಿಸಿ 'ಎಲ್ಲರಿಗೂ ಕರ್ನಾಟಕಕ್ಕೆ ಸ್ವಾಗತ' ಎಂದು ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಮಾತು ಆರಂಭಿಸಿದರು. ಬೆಂಗಳೂರು ಎಲ್ಲರನ್ನೂ ಒಳಗೊಳ್ಳುವ ಮತ್ತು ನಾವೀನ್ಯತೆಯ ಸಂಸ್ಕೃತಿಯ ಪ್ರತೀಕವಾಗಿದೆ. ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ಅನೇಕ ವರ್ಷಗಳಿಂದ ಅಗ್ರ ಸ್ಥಾನದಲ್ಲಿದೆ. ಸಂಶೋಧನೆಯ ತಾಣವಾಗಿರುವ ಕರ್ನಾಟಕ ರಾಜ್ಯ ರಾಜಧಾನಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸಂಭವಿಸುತ್ತಿದೆ ಎಂದು ಶ್ಲಾಘಿಸಿದರು.
ಸಮಾವೇಶದಲ್ಲಿ ವಿಷನ್ ಗ್ರೂಪ್‌ಗಳ ಮುಖ್ಯಸ್ಥರಾದ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಕೆಡಿಇಎಂನ ಬಿ.ವಿ ನಾಯ್ಡು ಕೂಡ ಮಾತನಾಡಿದರು. ಬೆಂಗಳೂರಿನಲ್ಲಿರುವ ಔದ್ಯಮಿಕ ಸಂಸ್ಕೃತಿ ಮತ್ತು ಬೆಳವಣಿಗೆ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಆಸ್ಟ್ರೆಲಿಯಾದ ಸಹಾಯಕ ವಿದೇಶಾಂಗ ಸಚಿವ ಟಿಮ್ ಪ್ಯಾಟ್ಸ್, ಫಿನ್ಲೆಂಡ್‌ನ ಶಿಕ್ಷಣ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೊನ್ಕೊನೆನ್, ಅರಬ್ ಸಂಯುಕ್ತ ಸಂಸ್ಥಾನದ ಸಚಿವ ಒಮರ್ ಬಿನ್ ಸುಲ್ತಾನ್, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು, ಕಂಪನಿಗಳು,
ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications