ಎಚ್ಡಿಕೆ ತಮ್ಮ ಕುಟುಂಬದ ಅಕ್ರಮ ಆಸ್ತಿ ಬಗ್ಗೆ ಮಾತಾಡಲಿ: ಬಿಎಸ್ವೈ ಸವಾಲು
Recommended Video

ಬೆಂಗಳೂರು, ಸೆಪ್ಟೆಂಬರ್ 18: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಸ್ಪೀಟು, ಬೆಟ್ಟಿಂಗ್, ಜೂಜುಕೋರರ ಬಗ್ಗೆ ಮಾತನಾಡುವ ಬದಲು ತಮ್ಮ ಕುಟುಂಬದವರ ವಿರುದ್ಧ ಮಾಜಿ ಸಚಿವ ಎ ಮಂಜು ಮಾಡಿರುವ ಗಂಭೀರ ಆರೋಪಕ್ಕೆ ಉತ್ತರ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಶಾಸಕರು ಜೂಜುಕೋರರನ್ನು ಬಳಸಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಆದರೆ ದೇವೇಗೌಡ ಕುಟುಂದಿಂದ 54 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವುದಾಗಿ ಮೈತ್ರಿ ಪಕ್ಷದ ಮುಖಂಡರಾದ ಎ ಮಂಜು ಆರೋಪ ಮಾಡಿದ್ದಾರೆ.
ಕುಮಾರಸ್ವಾಮಿಯವರು ಧೈರ್ಯ ವಿದ್ದರೆ ತಮ್ಮದೇ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ನಾಯಕ ಎ ಮಂಜು ಮಾಡಿರುವ ಆರೋಪಕ್ಕೆ ಉತ್ತರ ನೀಡಲಿ, ಸರ್ಕಾರದ ಜಮೀನನ್ನು ರಾತ್ರೋರಾತ್ರಿ ಕಬಳಿಸಿ ಸಾರ್ವಜನಿಕ ಆಸ್ತಿಯನ್ನು ನುಂಗಿ ಹಾಕಿರುವ ಆರೋಪ ಗಂಭಿರವಾದ್ದು, ಅದನ್ನು ಬಿಟ್ಟು ಜೂಜುಕೋರರು, ಇಸ್ಪೀಟು ಆಟಗಾರರ ಬಗ್ಗೆ ಮಾತನಾಡುವುದು ಮುಖ್ಯಮಂತ್ರಿ ಹುದ್ದೆಗೆ ತಕ್ಕದ್ದಲ್ಲ, ಸರ್ಕಾರ ಅವರ ಕೈಯಲ್ಲೇ ಇದೆ.ಯಾರ ಮೇಲೆ ಬೇಕಾದರೂ ಕ್ರಮ ಕೈಗೊಳ್ಳಲಿ.

ಅದಕ್ಕೂ ಮೊದಲು ದೇವೇಗೌಡರ ಕುಟುಂಬದಿಂದ 54 ಎಕರೆ ಸರ್ಕಾರಿ ಭೂಮಿ ಕಬಳಿಕೆಯಾಗಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಕುಮಾರಸ್ವಾಮಿ ಉತ್ತರ ಕೊಡಬೇಕು.
ಒಬ್ಬ ಮುಖ್ಯಮಂತ್ರಿಯಾಗಿ ಅವರ ಕುಟುಂಬದ ಮೇಲೆ ಬಂದಿರುವ ಆರೋಪದ ಕುರಿತು ಉತ್ತರ ಕೊಡುವುದು ಅವರ ನೈತಿಕ ಜವಾಬ್ದಾರಿ ಈ ಆರೋಪಕ್ಕೆ ಉತ್ತರ ಕೊಡದಿದ್ದರೆ ಅವರು ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ಹಕ್ಕಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.












Click it and Unblock the Notifications