Brand Bengaluru: ಉನ್ನತ ಮಟ್ಟದ ಸಮಿತಿ ಸಭೆ, ವರದಿ ಸಲ್ಲಿಕೆಗೆ ಸೂಚನೆ
ಬೆಂಗಳೂರು, ಸೆಪ್ಟಂಬರ್ 08: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ 8 ವಿಷಯಗಳ ಕುರಿತು ಸಿದ್ದಪಡಿಸಿರುವ ವರದಿಯನ್ನು ಕೂಡಲೆ ಸಲ್ಲಿಸಲು ಬ್ರ್ಯಾಂಡ್ ಬೆಂಗಳೂರು ಸಮಾವೇಶ ಸಮಿತಿಯ ಅಧ್ಯಕ್ಷರು ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ ರವರು ನೋಡಲ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಶುಕ್ರವಾರ ಬ್ರ್ಯಾಂಡ್ ಬೆಂಗಳೂರಿನ ಸಮಾವೇಶವನ್ನು ನಡೆಸುವ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ದತೆ ನಡೆಸಿದ್ದೇವೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸರ್ವಪಕ್ಷಗಳ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ. ಅಲ್ಲದೆ ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಸರ್ಕಾರೇತ ಸಂಸ್ಥೆಗಳು ಮತ್ತು RWAಗಳ ಜೊತೆ ಸಭೆ ನಡೆಸಲಾಗಿದೆ. ವಿವಿಧ ವಿಷಯಗಳ ಕುರಿತು ಸಲಹೆ, ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದರು.
7 ವಿಷಯಗಳ ಮೇಲೆ 70 ಸಾವಿರಕ್ಕೂ ಅಧಿಕ ಸಲಹೆ
ಸಾಲದೆಂಬಂತೆ ಸಾರ್ವಜನಿಕರಿಂದ ವೆಬ್ ಪೋರ್ಟಲ್ ಮೂಲಕ ಬೆಂಗಳೂರಿನ ಅಭಿವೃದ್ಧಿಗಾಗಿ 7 ವಿಷಯಗಳಾದ 'ಸಂಚಾರಯುಕ್ತ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು, , ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು ಮತ್ತು ಜಲಸುರಕ್ಷಾ ಬೆಂಗಳೂರು' ಕುರಿತು 70 ಸಾವಿರಕ್ಕೂ ಹೆಚ್ಚು ಅಭಿಪ್ರಾಯ/ಅನಿಸಿಕೆ/ಸಲಹೆಗಳು ಸ್ವೀಕರಿಸಲಾಗಿದೆ.

ಇನ್ನೂ ಬ್ಯಾಂಡ್ ಬೆಂಗಳೂರಿಗೆ ಅಗತ್ಯವಾದ 8ನೇ ವಿಷಯ 'ಶೈಕ್ಷಣಿಕ ಬೆಂಗಳೂರು' ಕುರಿತು ಸಭೆ ಈಗಾಗಲೆ ಬಿಬಿಎಂಪಿ ಸೇರಿದಂತೆ ಅಧಿಕಾರಿಗಳು ನಡೆಸಿದ್ದೇವೆ. ಅದರಂತೆ 8 ವಿಷಯಗಳ ಕುರಿತು ಸಿದ್ದಪಡಿಸಿರುವ ವರದಿ ಕೂಡಲೇ ಸಲ್ಲಿಸಲು ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಯಿತು.
8 ಪ್ರತ್ಯೇಕ ಪ್ರ್ಯಾತ್ಯಕ್ಷಿಕೆಗೆ ಸೂಚನೆ
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ 8 ವಿಷಯಗಳ ಸಂಬಂಧ ಸಿದ್ದಪಡಿಸಿರುವ ವರದಿಗಳ ಆಧಾರದ ಮೇಲೆ 8 ಪ್ರತ್ಯೇಕ ಸಂಕ್ಷಿಪ್ತ ಪ್ರ್ಯಾತ್ಯಕ್ಷಿಕೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ಸಾರ್ವಜನಿಕರಿಂದ ಸ್ವೀಕೃತಿಗೊಂಡಿರುವ ಅಭಿಪ್ರಾಯಗಳ ಬಗ್ಗೆ ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸುವ ಬಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾವೇಶ ಸಭೆಯನ್ನು ಏರ್ಪಡಿಸುವ ಸಂಬಂಧ ಅಗತ್ಯವಿರುವ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಆಡಳಿತ ವಿಭಾಗದ ಉಪ ಆಯುಕ್ತರಿಗೆ ಸೂಚಿಸಲಾಯಿತು.
ಸಭೆಯಲ್ಲಿ ಸಮಾವೇಶದ ಸಮಿತಿಯ ಸದಸ್ಯರಾದ ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಆಡಳಿತ ವಿಭಾಗದ ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, 8 ವಿಷಯಗಳ ನೋಡಲ್ ಅಧಿಕಾರಿಗಳು, ಸಮನ್ವಯಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications