ಸಿಲಿಕಾನ್ ಸಿಟಿಯಲ್ಲಿ ಮದುವೆ ಆಗಲ್ಲ ಅಂದಿದ್ದಕ್ಕೆ ವಿವಾಹಿತೆ ಮನೆ ಸುಟ್ಟುಹಾಕಿದ ಪಾಪಿ ಪ್ರೇಮಿ
ಬೆಂಗಳೂರು, ಮೇ, 02: ಬೆಂಗಳೂರಿನಲ್ಲಿ ಪ್ರತಿನಿತ್ಯವೂ ನೀಚಕೃತ್ಯಗಳು ನಡೆಯುತ್ತಲೇ ಇವೆ. ಆದ್ದರಿಂದ ಈ ಸಿಲಿಕಾನ್ ಸಿಟಿ ಕ್ರೈಂ ಸಿಟಿ ಅಂತಲೇ ಹೆಸರುವಾಸಿಯಾಗಿದೆ. ಇನ್ನು ಇಂದು (ಮೇ 02) ಬೆಳ್ಳಂಬೆಳ್ಳಗೆಯೆ ಮದುವೆ ಆಗುವುದಿಲ್ಲ ಅಂದಿದ್ದಕ್ಕೆ ಪಾಪಿ ಪ್ರೇಮಿಯೊಬ್ಬ ವಿವಾಹಿತೆ ಮಹಿಳೆಯ ಮೆನೆಗೆ ಬೆಂಕಿಯಿಟ್ಟ ಘಟನೆ ನಡೆದಿದೆ.
ಸಾಮಾನ್ಯವಾಗಿ ಪ್ರೀತಿ, ಪ್ರೇಮ ವಿಚಾರಕ್ಕೆ ಗಲಾಟೆ, ಕೊಲೆಗಳು ಆಗಿರುವುದನ್ನು ನಾವು ಕೇಳಿರುತ್ತೇವೆ. ಮತ್ತೊಂದೆಡೆ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿರುವಂತಹ ಹಲವು ಪ್ರಕರಣಗಳು ಕೂಡ ಬೆಳಕಿಗೆ ಬಂದಿರುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಪಾಪಿ ಪ್ರೇಮಿ ಮದುವೆ ಆಗಲ್ಲ ಅಂದಿದ್ದಕ್ಕೆ ವಿವಾಹಿತ ಮಹಿಳೆ ಮನೆಯನ್ನು ಸುಟ್ಟುಹಾಕಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಆತ ಒಬ್ಬ ಪಾಗಲ್ ಪ್ರೇಮಿ ಆಗಿದ್ದ ವಿವಾಹಿತೆಯನ್ನು ದುವೆಯಾಗು ಎಂದು ಕಾಡುತ್ತಿದ್ದ. ಆದರೆ ವಿವಾಹಿತೆ ಮದುವೆ ಆಗುವುದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪಾಪಿ ಪ್ರೇಮಿ ವಿವಾಹಿತೆ ಮನೆಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಸಾರಾಯಿಪಾಳ್ಯದಲ್ಲಿ ನಡೆದಿದೆ ಎನ್ನುವ ಮಾಹಿತಿಯೊಂದು ತಿಳಿದುಬಂದಿದೆ.
ಮಹಿಳೆಯ ಮನೆಗೆ ಪಾಪಿ ಪ್ರೇಮಿ ಅರ್ಬಾಜ್ ಎಂಬ ವ್ಯಕ್ತಿ ಬೆಂಕಿ ಇಟ್ಟಿದ್ದಾನೆ. ಅರ್ಬಜ್ ಮಹಿಳೆಯ ದೂರದ ಸಂಬಂಧಿ ಆಗಿದ್ದಾನೆ ಎಂದು ಹೇಳಲಾಗುತ್ತಿದೆ. ಈತ ಮದುವೆಯಾಗು ಎಂದು ಮಹಿಳೆಯ ಹಿಂದೆ ಬಿದ್ದಿದ್ದು, ಈ ಬಗ್ಗೆ ಎರಡು ಕುಟುಂಬದ ಹಿರಿಯರು ಆತನಿಗೆ ಬುದ್ಧಿ ಮಾತನ್ನು ಹೇಳಿದ್ದರು. ಹಿರಿಯರ ಬುದ್ಧಿಮಾತಿಗೂ ಅರ್ಬಾಜ್ ಬಗ್ಗದೇ ಈ ಒಂದು ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಇಂದು (ಮೇ 02) 4 ಗಂಟೆ ಸುಮಾರಿಗೆ ಪಾಪಿ ಪ್ರೇಮಿ ಅರ್ಬಾಜ್ ಮಹಿಳೆ ಮನೆಗೆ ಬೆಂಕಿ ಹಚ್ಚಿದ್ದು, ಸದ್ಯ ಈ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ. ಇನ್ನು ಮನೆಯಲ್ಲಿದ್ದ ವಸ್ತುಗಳೆಲ್ಲವೂ ಬೆಂಕಿಗಾಹುತಿಯಾಗಿವೆ. ಬಳಿಕ ಕೇಸ್ ದಾಖಲಿಸಿಕೊಂಡು ಪೊಲೀಸರು ಅರ್ಬಜ್‌ನನ್ನು ಬಂಧಿಸಿದ್ದು, ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.












Click it and Unblock the Notifications