3 ಟ್ರಾವೆಲ್ಸ್ ಬಸ್ಸಿಗೆ ಬೆಂಕಿ: ಚಾಲಕ ಸಜೀವ ದಹನ

ಭಾನುವಾರ ರಾತ್ರಿ ಮಡಿವಾಳ ಬಳಿಯ ಬೊಮ್ಮನಹಳ್ಳಿ-ಹೊಂಗಸಂದ್ರ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಒಟ್ಟು ಮೂರು ಮಿನಿ ಬಸ್ಸುಗಳು ಬೆಂಕಿಗಾಹುತಿಯಾಗಿವೆ. ಬಸವೇಶ್ವರ ಟ್ರಾವೆಲ್ಸ್ ಕಂಪನಿಗೆ ಸೇರಿ ಬಸ್ಸುಗಳು ಇವಾಗಿವೆ. ಕಡಿಗೇಡಿಗಳ ಕೃತ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮೃತ ಚಾಲಕ ಹುಚ್ಚೇಗೌಡರ ದೇಹವನ್ನು ಶವಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ನಾಲ್ಕು ತಿಂಗಳ ಹಿಂದಷ್ಟೆ ಕೆಲಸಕ್ಕೆ ಸೇರಿದ್ದ
ಹುಚ್ಚೇಗೌಡ ನಾಲ್ಕು ತಿಂಗಳ ಹಿಂದಷ್ಟೆ ಬಸವೇಶ್ವರ ಟೂರ್ ಟ್ರಾವೆಲ್ಸ್ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದು, ಬೇಗೂರು ಸಮೀಪ ಬಾಡಿಗೆ ಮನೆಗೆ ಸೋಮವಾರ ವಾಸ್ತವ್ಯ ಹೂಡಲು ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸೋಮವಾರ ತನ್ನ ಮನೆಯಲ್ಲಿ ನಡೆಯಲಿದ್ದ ಪೂಜಾ ಕಾರ್ಯಕ್ಕೆ ಸಾಮಗ್ರಿಗಳನ್ನು ಖರೀದಿಸಿದ ಬಳಿಕ ಹುಚ್ಚೇಗೌಡ, ನಿದ್ರೆಗೆ ಜಾರಿದ್ದರು. ಮುಂಜಾನೆ ನಿಲುಗಡೆ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ. ಆಗ ಗಾಢ ನಿದ್ರೆಯಲ್ಲಿದ್ದ ಹುಚ್ಚೇಗೌಡ ಎಚ್ಚರಗೊಳ್ಳುವ ವೇಳೆಗೆ ಬೆಂಕಿ ತೀವ್ರತೆ ಅಧಿಕವಾಗಿತ್ತು. ಕೂಡಲೇ ಟ್ರಾವೆಲ್ಸ್ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯಕ್ಕಿಳಿದರು. ಅಷ್ಟರಲ್ಲಿ ಈ ದುರಂತದ ಬಗ್ಗೆ ಅಗ್ನಿಶಾಮಕ ಮತ್ತು ಪೊಲೀಸ್ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ವಿಷಯ ತಿಳಿಸಿದರು. ಅಗ್ನಿಶಾಮಕ ದಳ ಆಗಮಿಸುವ ವೇಳೆಗೆ ಹುಚ್ಚೇಗೌಡ ಬೆಂಕಿಗೆ ಆಹುತಿಯಾಗಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications