ಬೆಂಗಳೂರಲ್ಲಿ 400 ವರ್ಷ ಇತಿಹಾಸ ಇರುವ ಮುನೇಶ್ವರ ಸ್ವಾಮಿ ವಿಗ್ರಹಕ್ಕೆ ಹಾನಿ ಆರೋಪ: ಶಾಸಕ ಸತೀಶ್ ರೆಡ್ಡಿ ಪರಿಶೀಲನೆ
ಕರ್ನಾಟಕ ದೇಗುಲಗಳ ಬೀಡು, ಕನ್ನಡ ನಾಡಲ್ಲಿ ಸಾವಿರಾರು ಪುರಾತನ ದೇಗುಲಗಳು ಇವೆ. ಲಕ್ಷ, ಲಕ್ಷ ಪ್ರವಾಸಿಗರು ಕರ್ನಾಟಕದ ಈ ಪುರಾತನ ದೇವಾಲಯಗಳನ್ನು ನೋಡಲು ಅಂತಾನೇ ಪ್ರವಾಸ ಕೂಡ ಕೈಗೊಳ್ಳುತ್ತಾರೆ. ಅದರಲ್ಲೂ ಸಿಲಿಕಾನ್ ಸಿಟಿ ನಮ್ಮ ಬೆಂಗಳೂರಿನಲ್ಲಿ ಕೂಡ ನೂರಾರು ಪುರಾತನ & ಐತಿಹಾಸಿಕ ದೇವಾಲಯ ಇವೆ. ಇದೇ ರೀತಿ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ರೂಪೇನ ಅಗ್ರಹಾರದ ಪುರಾತನ ದೇವಸ್ಥಾನದಲ್ಲಿ, ಕಿಡಿಗೇಡಿಗಳು ಅಟ್ಟಹಾಸ ಮೆರೆದ ಆರೋಪ ಕೇಳಿಬಂದಿದೆ.
ಕರ್ನಾಟಕದಲ್ಲಿ ಪದೇ ಪದೇ ದೇಗುಲಗಳ ವಿಚಾರ ಚರ್ಚೆಗೆ ಬರುತ್ತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ವಿಚಾರದಲ್ಲಿ ಪದೇ ಪದೇ ಬಿಜೆಪಿ ನಾಯಕರು ಭಾರಿ ಗಂಭೀರ ಆರೋಪ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿರುವ ಸಮಯದಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂಡ 400 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಮೂರ್ತಿ ಮೇಲೆ ದಾಳಿ ನಡೆದಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬೊಮ್ಮನಹಳ್ಳಿ ಸಮೀಪದ ರೂಪೇನ ಅಗ್ರಹಾರದ ಪುರಾತನ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳ ವಿರುದ್ಧ ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಮುನೇಶ್ವರ ಸ್ವಾಮಿ ವಿಗ್ರಹಕ್ಕೆ ಹಾನಿ ಆರೋಪ
ಬೊಮ್ಮನಹಳ್ಳಿ ಸಮೀಪದ ರೂಪೇನ ಅಗ್ರಹಾರದಲ್ಲಿ ಸುಮಾರು 400 ವರ್ಷಗಳ ಹಿಂದೆ ಸ್ಥಾಪಿತವಾದ ಮುನೇಶ್ವರ ಸ್ವಾಮಿ ದೇಗುಲ ಇದ್ದು, ಇಲ್ಲಿ ಶತಮಾನಗಳಿಂದ ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಬುಧವಾರ ರಾತ್ರಿ ಕಿಡಿಗೇಡಿಗಳು ಈ ದೇಗುಲದ ವಿಗ್ರಹಕ್ಕೆ ಹಾನಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಸ್ಥಳೀಯ ಶಾಸಕ ಸತೀಶ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಈ ವೇಳೆ ಮಾತನಾಡಿರುವ ಅವರು, ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳಿಂದ ತನಿಖೆ ಶುರು
ಸ್ಥಳೀಯರು ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದು, ನೂರಾರು ವರ್ಷಗಳಿಂದ ಪೂಜೆ ಸಲ್ಲಿಸುತ್ತಿದ್ದ ಭಕ್ತರಿಗೆ ಇಂತಹ ಘಟನೆ ಬೇಸರ ತರಸಿದೆ. ಅಲ್ಲದೆ ಪುರಾತನ ದೇಗುಲದ ಮೇಲೆ ದುಷ್ಕರ್ಮಿಗಳು ಈ ರೀತಿಯಾಗಿ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಕೂಡ ಆಕ್ರೋಶ ವ್ಯಕ್ತವಾಗಿದೆ. ರಾತ್ರಿ ಸಮಯದಲ್ಲಿ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದು, ಆದಷ್ಟು ಬೇಗ ದುಷ್ಕರ್ಮಿಗಳನ್ನು ಕಂಬಿ ಹಿಂದೆ ತಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications