Bomb Threat: ಬೆಂಗಳೂರು ಏರ್‌ಪೋರ್ಟ್, ಮಾಲ್‌ಗಳನ್ನ ಉಡೀಸ್ ಮಾಡ್ತೀವಿ: ಬಾಂಬ್ ಬೆದರಿಕೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಓರಿಯನ್ ಮಾಲ್, ಲುಲು ಮಾಲ್, ಫೋರಂ ಸೌತ್ ಮಾಲ್, ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮಾಲ್ ಸೇರಿದಂತೆ ಇತರೆ ಮಾಲ್‌ಗಳಲ್ಲಿ ಸಂಜೆ 7 ಗಂಟೆಗೆ ಬಾಂಬ್ ಸ್ಫೋಟಿಸುತ್ತೇವೆ ಎಂದು ಬೆದರಿಕೆ
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಪ್ರತಿಷ್ಠಿತ ಮಾಲ್‌ಗಳನ್ನು ಉಡೀಸ್ ಮಾಡ್ತೀವಿ ಎಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. "ಇದು ಜೈಶ್-ಎ-ಮೊಹಮ್ಮದ್ ವೈಟ್ ಕಾಲರ್ ಭಯೋತ್ಪಾದಕ ತಂಡದಿಂದ ಬಂದ ಎಚ್ಚರಿಕೆ" ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 30ರಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅಧಿಕೃತ ಇಮೇಲ್‌ಗೆ ಈ ಬಾಂಬ್ ಬೆದರಿಕೆ ಬಂದಿದ್ದು, ಕೆಂಪೇಗೌಡ ಏರ್‌ಪೋರ್ಟ್ ಮತ್ತು ನಗರದ ಹಲವು ಮಾಲ್‌ಗಳ ಮೇಲೆ ದಾಳಿ ನಡೆಸುವ ವಾರ್ನಿಂಗ್ ಕೊಡಲಾಗಿದೆ.
"ನಾವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಓರಿಯನ್ ಮಾಲ್, ಲುಲು ಮಾಲ್, ಫೋರಂ ಸೌತ್ ಮಾಲ್, ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮಾಲ್ ಸೇರಿದಂತೆ ಇತರೆ ಮಾಲ್‌ಗಳಲ್ಲಿ ಸಂಜೆ 7 ಗಂಟೆಗೆ ಬಾಂಬ್ ಸ್ಫೋಟಿಸುತ್ತೇವೆ. ನಮ್ಮ ರಾಷ್ಟ್ರಕ್ಕೆ ಉತ್ತಮವಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ನಮ್ಮ ಅಲ್ಲಾಹನಿಗೆ ಮತ್ತು ನಮ್ಮ ಮಾಸ್ಟರ್ ಮೋಹಿತ್‌ಗೆ ಧನ್ಯವಾದಗಳು" ಎಂದು ಆ ಇಮೇಲ್‌ನಲ್ಲಿ ಬರೆಯಲಾಗಿದೆ.

"ಮೋಹಿತ್ ಕುಮಾರ್" ಎಂಬ ಹೆಸರಲ್ಲಿ ಈ ಇಮೇಲ್ ಬಂದಿದೆ. ಇಮೇಲ್‌ನಲ್ಲಿ ಫೋನ್ ಸಂಖ್ಯೆಯೂ ಸೇರಿದ್ದು, ಆ ಸಂಖ್ಯೆಗೆ ಕರೆ ಮಾಡಿ ಹಣ ಪಾವತಿಸುವ ಮೂಲಕ ಈ ಬಾಂಬ್ ದಾಳಿಯನ್ನು ತಡೆಯಬಹುದು ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಇಮೇಲ್‌ನಿಂದ ಬೆದರಿಕೆ ಬಂದ ಕೂಡಲೇ ಬೆಂಗಳೂರು ಪೊಲೀಸರು ತಕ್ಷಣವೇ ಭದ್ರತಾ ತಂಡಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪರಿಶೀಲನೆ ಕೂಡ ನಡೆಸಿದ್ದು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ಸಹಾಯದಿಂದ ಏರ್‌ಪೋರ್ಟ್ ಹಾಗೂ ನಗರ ಪ್ರಮುಖ ಮಾಲ್‌ಗಳಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ ಯಾವುದೇ ಸ್ಫೋಟಕಗಳು ಕಂಡುಬರದ ಕಾರಣ ಇದು ಸುಳ್ಳು ಬೆದರಿಕೆ ಎಂದು ದೃಢಪಡಿಸಿದ್ದಾರೆ.
ಈ ಸಂಬಂಧ ದೂರು ದಾಖಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66F (ಸೈಬರ್ ಭಯೋತ್ಪಾದನೆ) ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಮೋಹಿತ್ ಕುಮಾರ್ ಎಂಬ ಹೆಸರನ್ನ ಉಲ್ಲೇಖಿಸಿರುವ ಇಮೇಲ್‌ನ ಹಿಂದಿನ ವ್ಯಕ್ತಿಯನ್ನು ಪತ್ತೆಹಚ್ಚಲು ಸೈಬರ್ ಫೋರೆನ್ಸಿಕ್ ಮೊರೆ ಹೋಗಿದ್ದಾರೆ.
ಇಮೇಲ್‌ನಲ್ಲಿ ತಿಳಿಸಿರುವ ವ್ಯಕ್ತಿ ಅಸಲಿಯೋ ಅಥವಾ ನಕಲಿಯೋ? ಅಥವಾ ಬೇರೆ ಯಾರಾದರೂ ಈ ಐಡಿ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗುತ್ತಿದ್ದಾರೋ ಎನ್ನುವುದನ್ನು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ವರದಿಗಳ ಪ್ರಕಾರಣ ಜನರಲ್ಲಿ ಆತಂಕ ಹುಟ್ಟಿಸಲು ಅಥವಾ ಹಣ ಸುಲಿಗೆ ಮಾಡಲು ಈ ರೀತಿ ಭಯೋತ್ಪಾದಕ ಸಂಘಟನೆಯ ಹೆಸರನ್ನು ಬಳಸುತ್ತಾರೆ ಎಂದು ಶಂಕಿಸಲಾಗಿದೆ.












Click it and Unblock the Notifications