ಸೆಪ್ಟೆಂಬರ್‌ನಲ್ಲಿ ಬೆಂಗಳೂರು ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಬಸ್
ಬೆಂಗಳೂರು, ಆಗಸ್ಟ್ 11; ಹಲವಾರು ಅಡೆ-ತಡೆಗಳನ್ನು ದಾಟಿ ಎಲೆಕ್ಟ್ರಿಕ್ ಬಸ್ ಬೆಂಗಳೂರು ನಗರದ ರಸ್ತೆಗೆ ಇಳಿಯಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೆಪ್ಟೆಂಬರ್‌ನಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಆರಂಭಿಸಲಿದೆ.
ಎಲೆಕ್ಟ್ರಿಕ್ ಬಸ್ ಸಂಚಾರ ಬಿಎಂಟಿಸಿಯ ಮಹತ್ವದ ಯೋಜನೆಯಾಗಿದೆ. ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ ಸೆಪ್ಟೆಂಬರ್‌ನಲ್ಲಿ ಸಂಚಾರ ಆರಂಭಿಸಲಿದೆ. ಕೋವಿಡ್ ಕಾರಣದಿಂದಾಗಿ ವಿಳಂಬವಾಗಿ ಸಂಚಾರವನ್ನು ಪ್ರಾರಂಭ ಮಾಡುತ್ತಿದೆ.
ಬಿಎಂಟಿಸಿಗೆ ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್ (ಎನ್‌ವಿವಿಎನ್) ಮತ್ತು ಜೆಎಂಬಿ ಜಂಟಿಯಾಗಿ 9 ಮೀಟರ್ ಉದ್ದದ ಬಸ್‌ಗಳನ್ನು ಪೂರೈಕೆ ಮಾಡುವ ಟೆಂಡರ್ ಪಡೆದಿವೆ. ಹವಾನಿಯಂತ್ರಿತ ವ್ಯವಸ್ಥೆ ಇಲ್ಲದಿರುವ ಬಸ್‌ಗಳು ರಸ್ತೆಗೆ ಬರಲಿವೆ. ಬಿಎಂಟಿಸಿ ಅಧಿಕಾರಿಗಳು ದೆಹಲಿಗೆ ಹೋಗಿ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ.

ಟೆಂಡರ್ ಪಡೆದಂತೆ ಬಿಎಂಟಿಸಿಗೆ ಒಟ್ಟು 90 ಬಸ್‌ಗಳನ್ನು ಕಂಪನಿ ಪೂರೈಕೆ ಮಾಡಲಿದೆ. 2021ರ ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಬಸ್‌ಗಳು ನಗರಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಕಂಪನಿ ಸಹ ಈ ಕುರಿತು ಭರವಸೆ ಕೊಟ್ಟಿದೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ 90 ಬಸ್‌ಗಳನ್ನು ಗುತ್ತಿಗೆ ಮೇಲೆ ಪಡೆಯಲಾಗುತ್ತಿದೆ. ಯೋಜನೆಯಡಿ ಪ್ರತಿ ಬಸ್‌ಗೆ 50 ಲಕ್ಷದಂತೆ 45 ಕೋಟಿ ಮತ್ತು ಡಿಪೋಗಳಲ್ಲಿ ಚಾರ್ಜಿಂಗ್ ಘಟಕ ಸ್ಥಾಪನೆ ಮಾಡಲು 5 ಕೋಟಿ ರೂ.ಗಳನ್ನು ನೀಡಲಾಗುತ್ತದೆ.
ಮೊದಲ ಹಂತದಲ್ಲಿ ನಮ್ಮ ಮೆಟ್ರೋಗೆ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಾತ್ರ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಾಗುತ್ತದೆ. ಬಸ್ ಪೂರೈಕೆ ಮಾಡುವ ಕಂಪನಿಗೆ ಬಿಎಂಟಿಸಿ ಪ್ರತಿ ಕಿ. ಮೀ. ಗೆ 51.67 ರೂ. ದರವನ್ನು ಪಾವತಿ ಮಾಡಲಿದೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈ ದರ ಕಡಿಮೆ.
ಬಸ್‌ಗಳನ್ನು ಪೂರೈಕೆ ಮಾಡುವ ಕಂಪನಿಯೇ ಚಾಲಕರನ್ನು ನೇಮಿಸಲಿದೆ, ವೇತನ ನೀಡಲಿದೆ. ಬಸ್ ನಿರ್ವಹಣಾ ವೆಚ್ಚ, ವಿದ್ಯುತ್ ಶುಲ್ಕವನ್ನು ಭರಿಸಲಿದೆ. ಬಸ್‌ನ ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿಯಾಗಿರುತ್ತಾರೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ 2ನೇ ಹಂತದಲ್ಲಿ ಬಿಎಂಟಿಸಿ ಬಸ್‌ಗಳನ್ನು ಖರೀದಿ ಮಾಡಲಿದೆ.
ಲಾಕ್‌ಡೌನ್, ಡೀಸೆಲ್ ದರಗಳ ಏರಿಕೆ ಹಿನ್ನಲೆಯಲ್ಲಿ ನಷ್ಟಕ್ಕೆ ಸಿಲುಕಿರುವ ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್ ಲಾಭ ತಂದುಕೊಡಲಿದೆಯೇ? ಕಾದು ನೋಡಬೇಕಿದೆ. ಮೊದಲ ಹಂತದಲ್ಲಿ ಬಿಎಂಟಿಸಿ ಕೆ. ಆರ್. ಪುರ, ಕೆಂಗೇರಿ ಮತ್ತು ಯಶವಂತಪುರ ಡಿಪೋಗಳಿಂದ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲು ಯೋಜನೆ ರೂಪಿಸಿದೆ.
ಕೇಂದ್ರದಿಂದ ಸಹಾಯ; ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯ 'ಫೇಮ್ ಇಂಡಿಯಾ-2' ಯೋಜನೆಯ ಅನ್ವಯ ಕರ್ನಾಟಕದಲ್ಲಿ 400 ಇ-ಬಸ್ ಓಡಿಸಲು ಒಪ್ಪಿಗೆ ನೀಡಿದೆ. ಇದರಲ್ಲಿ 300 ಬಸ್ ಬೆಂಗಳೂರು ನಗರಕ್ಕೆ ಸಿಕ್ಕಿದೆ. ಗುತ್ತಿಗೆ ಆಧಾರದಲ್ಲಿ ಬಸ್ ಪಡೆದು ಓಡಿಸಲು ಕೇಂದ್ರ ಸಹಾಯಧನವನ್ನು ನೀಡಲಿದೆ.
3 ಬಾರಿ ಟೆಂಡರ್; ಎಲೆಕ್ಟ್ರಿಕ್ ಬಸ್ ಗುತ್ತಿಗೆ ಆಧಾರದ ಮೇಲೆ ಪೂರೈಕೆ ಮಾಡಲು ಬಿಎಂಟಿಸಿ 3 ಬಾರಿ ಟೆಂಡರ್ ಕರೆದಿತ್ತು. ಮೊದಲ ಬಾರಿ ಪ್ರತಿ ಕಿ. ಮೀ.ಗೆ 105 ರೂ. ದರ ನಮೂದು ಮಾಡಲಾಗಿತ್ತು. ಅದಕ್ಕೆ ಟೆಂಡರ್ ಒಪ್ಪಿರಲಿಲ್ಲ.
ಎರಡನೇ ಬಾರಿಗೆ ಟೆಂಡರ್ ಒಪ್ಪಿದ್ದ ಒಲೆಕ್ಟ್ರಾ ಕಂಪನಿ ಪ್ರತಿ ಕಿ. ಮೀ.ಗೆ 89.64 ರೂ. ದರವನ್ನು ನಿಗದಿ ಮಾಡಿತ್ತು. ಆಗಲೂ ಸಹ ದರ ಹೆಚ್ಚು ಎಂಬ ಕಾರಣಕ್ಕೆ ಟೆಂಡರ್ ಅಂತಿಮಗೊಂಡಿರಲಿಲ್ಲ. ಈಗ ಪ್ರತಿ ಕಿ. ಮೀ. ಗೆ 51.67 ರೂ. ದರವನ್ನು ನಿಗದಿ ಮಾಡಲಾಗಿದೆ.












Click it and Unblock the Notifications