BMTC Express Bus: ಪ್ರಯಾಣಿಕರಿಗೆ ಸಿಹಿ ಸುದ್ದಿ: ಈ ಮಾರ್ಗಗಳಲ್ಲಿ 'ವೇಗಧೂತ' ಎಕ್ಸ್‌ಪ್ರೆಸ್ ಬಸ್‌ಗಳಿಗೆ ಚಾಲನೆ
ಬೆಂಗಳೂರು, ಜೂನ್ 23: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪ್ರಯಾಣಿಕರಿಗಾಗಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿ, ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಇದರೊಂದಿಗೆ ಬೆಂಗಳೂರು ನಗರದಲ್ಲೇ ಎಕ್ಸ್‌ಪ್ರೆಸ್ ಬಸ್‌ಗಳನ್ನು ಓಡಿಸಲು ತಿರ್ಮಾನಿಸಿದೆ. ನಗರದಲ್ಲಿರುವ ಹಾಲಿ ಬಸ್‌ಗಳ ಸಂಚಾರದ ಜೊತೆಗೆ ಈ 'ವೇಗಧೂತ ಎಕ್ಸ್‌ಪ್ರೆಸ್' ಬಸ್‌ಗಳು ಸಂಚಾರ ಆರಂಭಿಸಿವೆ. ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ.
ಘಾಟಿ-ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಘೋಷಣೆ ಬೆನ್ನಲ್ಲೆ ನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸಂಚಾರಕ್ಕಾಗಿ ಬಿಎಂಟಿಸಿ 'ವೇಗಧೂತ ಎಕ್ಸ್‌ಪ್ರೆಸ್' ಬಸ್ ಬಿಟ್ಟಿದೆ. ಪ್ರಮುಖ ರಸ್ತೆಗಳಲ್ಲಿ ಈ ಬಸ್‌ಗಳು ಸೇವೆ ನೀಡಲಿವೆ. ಅವುಗಳ ಮಾರ್ಗ, ಎಲ್ಲಿಂದ ಎಲ್ಲಿಗೆ? ಬಸ್ ಸಂಖ್ಯೆಗಳ ವಿವರ ಇಲ್ಲಿದೆ.

ವೇಗಧೂತ ವಾಹನಗಳ ಮಾರ್ಗ, ನಿಲ್ದಾಣಗಳು
* EXP 600F ಸಂಖ್ಯೆಯ ಎಕ್ಸ್‌ಪ್ರೆಸ್ ಬಸ್ ಬನಶಂಕರಿ TTMCಯಿಂದ ಅತ್ತಿಬೆಲೆ ಅವರೆಗೆ ಸಂಚರಿಸಲಿದೆ. ನಿಲುಗಡೆ ನಿಲ್ದಾಣಳೆಂದರೆ ಜಯನಗರ 5 ನೇ ಬ್ಲಾಕ್, ರೂಪೇನ ಅಗ್ರಹಾರ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಗೋಡಿ, ಚಂದಾಪುರ ಮಾರೇನಹಳ್ಳಿ ಮತ್ತು ಸಿಲ್ಕ್ ಬೋರ್ಡ್ ನಡುವೆ ಡಬಲ್ ಡೆಕ್ಕರ್ ಫ್ಲೈಓವರ್ ಮೂಲಕ ಹಾದು ಹೋಗುತ್ತದೆ.
* EXP 298M ಬಸ್ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಿಂದ ದೇವನಹಳ್ಳವರೆಗೆ ಸಾಗಲಿದ್ದು, ಈ ಬಸ್ ಮೇಖ್ರಿ ವೃತ್ತ, ಹೆಬ್ಬಾಳ, ಯಲಹಂಕ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಅದೇ ಮಾರ್ಗದಲ್ಲಿ ಸಾಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* EXP 258C ಬಸ್ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ತುಮಕೂರು ರಸ್ತೆಯ ನೆಲಮಂಗಲವರೆಗೆ ಸೇವೆ ನೀಡಲಿದೆ. ಈ ವೇಗಧೂತ ಬಸ್ ಸೆಂಟ್ರಲ್, ಮಲ್ಲೇಶ್ವರ 11ನೇ/8ನೇ ಕ್ರಾಸ್, ಮಲ್ಲೇಶ್ವರ 18ನೇ ಕ್ರಾಸ್, ಗೋವರ್ಧನ್, ಗೊರಗುಂಟೆಪಾಳ್ಯ, ಅರಿಶಿನಕುಂಟೆ ಮಾರ್ಗವಾಗಿ ಸಾಗಲಿದೆ. ಈ ಮಾರ್ಗದಲ್ಲಿ ಓಡಾಡುವ ನೂರಾರು ಪ್ರಯಾಣಿಕರಿಗೆ ಈ ಸೇವೆ ಸಾಕಷ್ಟು ಅನುಕೂಲ ಒದಗಿಸಿದೆ.
EXP 213V ಸಂಖ್ಯೆಯ ಬಸ್ ಬನಶಂಕರಿಯಿಂದ ಹಾರೋಹಳ್ಳಿಗೆ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಈ ಬಸ್ ಕೋಣನಕುಂಟೆ ಕ್ರಾಸ್, ತಲಘಟ್ಟಪುರ, ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣ, ಕಗ್ಗಲಿಪುರ ಮೂಲಕ ಸಾಗಲಿದೆ. ಈ ಮಾರ್ಗದ ಸಾರ್ವಜನಿಕರಿಗೆ ವೇಗದ ಸಂಚಾರ ಲಭ್ಯವಾಗಿದೆ.
ಕರ್ನಾಟಕ ಸಾರಿಗೆ 4 ನಿಗಮಗಳಿಗೆ ಎಚ್ಚರಿಕೆ
ರಾಜ್ಯದಲ್ಲಿ ಇತ್ತೀಚೆಗೆ ಸಾರಿಗೆ ಬಸ್‌ಗಳಿಂದ ಹೆಚ್ಚಿನ ಅಪಘಾತಗಳು ಆಗುತ್ತಿರುವುದು ವರದಿ ಆಗಿದೆ. ಈ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವವರಿಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಕೆಲ ಪ್ರಕರಣಗಳಲ್ಲಿ ಅಚಾತುರ್ಯ ನಡೆದರೆ, ಇನ್ನೂ ಹಲವು ಪ್ರಕರಣಗಳಲ್ಲಿ ಚಾಲಕರ ಅಜಾಗರೂಕ ಚಾಲನೆಯಿಂದ ಜನರಿಗೆ ತೊಂದರೆ ಆಗಿರುವುದು ಗೊತ್ತಾಗಿದೆ. ಯಾರೆಲ್ಲ ಬೇಕಾಬಿಟ್ಟಿ ವಾಹನ ಚಲಾಯಿಸುತ್ತಾರೋ ಅಂಥವರ ಲಿಸ್ಟ್ ರೆಡಿ ಮಾಡಿಕೊಳ್ಳಿ. ಮತ್ತದೇ ತಪ್ಪು ಪುನರಾವರ್ತನೆ ಆದರೆ ಮುಲಾಜಿಲ್ಲದೇ ಚಾಲಕರನ್ನು ಕೆಲಸದಿಂದ ವಜಾಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, KSRTC BMTC, KKRTC ಮತ್ತುNWKRTC ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಸುಸೂತ್ರ ವಾಹನ ಚಾಲನೆ, ಅಪಘಾತ ಕಡಿಮೆಗೆ ಕ್ರಮ ವಹಿಸಿದ್ದಾರೆ.












Click it and Unblock the Notifications