ಬಿಎಂಟಿಸಿ ಪ್ರಯಾಣ ದರ 1 ರೂ.ಹೆಚ್ಚಳ
ಬೆಂಗಳೂರು, ಫೆ.3 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣದರವನ್ನು ಪರಿಷ್ಕರಣೆ ಮಾಡಿದೆ. ಅದರಂತೆ ಎರಡನೇ ಹಂತದ ಪ್ರಯಾಣ ದರವನ್ನು 1 ರೂ. ಹೆಚ್ಚಿಸಿದ್ದು, ಭಾನುವಾರದಿಂದಲೇ ನೂತನ ದರ ಜಾರಿಗೆ ಬಂದಿದೆ.
ದರ ಹೆಚ್ಚಳದ ಕುರಿತು ಪ್ರಕಟಣೆ ಹೊರಡಿಸಿರುವ ಬಿಎಂಟಿಸಿ ಭಾನುವಾರದಿಂದ ಸಾಮಾನ್ಯ ಬಸ್‌ಗಳಲ್ಲಿನ ಎರಡನೇ ಹಂತದ ಪ್ರಯಾಣ ದರವನ್ನು 1 ರೂಪಾಯಿ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ. ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ ಎಂದು ದರ ಹೆಚ್ಚಳಕ್ಕೆ ಸಮರ್ಥನೆ ನೀಡಿದೆ.

ಪ್ರತಿ ತಿಂಗಳು ಡೀಸೆಲ್ ದರದಲ್ಲಿ ಲೀ.ಗೆ 50 ಪೈಸೆಯಂತೆ ದರ ಹೆಚ್ಚಳವಾಗುತ್ತಿದೆ. ಇದರಿಂದ ಸಂಸ್ಥೆಗೆ ಆರ್ಥಿಕ ಹೊರೆಯಾಗುತ್ತಿದೆ, ದರ ಹೆಚ್ಚಳ ಮಾಡುವ ಮೂಲಕ ಹೊರೆಯನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಲು ಪ್ರಯತ್ನಿಸಲಾಗಿದೆ. ಪ್ರಯಾಣಿಕರು ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ. [ಬಿಎಂಟಿಸಿ ವೋಲ್ವೋ ಪ್ರಯಾಣ ದರ ಹೆಚ್ಚಳ]
ಸಾಮಾನ್ಯ ಸೇವೆಗಳ ಎರಡನೇ ಹಂತದ ದರವನ್ನು 9 ರಿಂದ 10 ರೂ.ಗೆ ಕ್ಕೆ ಹೆಚ್ಚಿಸಲಾಗಿದ್ದು, ಉಳಿದಂತೆ ಯಾವುದೇ ಹಂತದ ದರಗಳಲ್ಲಿ ಬದಲಾವಣೆಗಳನ್ನು ಮಾಡಿಲ್ಲ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಎರಡನೇ ಹಂತದಲ್ಲೇ ಪ್ರಯಾಣಿಕರ ಸಂಚಾರ ಹೆಚ್ಚಾಗಿರುವುದರಿಂದ ಈ ಹಂತದಲ್ಲಿ ಹೆಚ್ಚಳ ಮಾಡಲಾಗಿದೆ.
ಮೊದಲ ಹಂತದ ಪ್ರಯಾಣ ದರ 5 ರೂ.ನಿಂದ ಆರಂಭವಾಗುತ್ತದೆ. ಇವುಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಮತ್ತು ವೋಲ್ವೋ ಬಸ್ ಪ್ರಯಾಣ ದರದಲ್ಲೂ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications