ನೌಕರರಿಗೆ ಪಿಎಫ್ ನೀಡಲು ಕೂಡ ಬಿಎಂಟಿಸಿ ಬಳಿ ಹಣ ಇಲ್ವಂತೆ
ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಳಿ ತನ್ನ ನೌಕರರಿಗೆ ಪಿಎಫ್ ನೀಡಲೂ ಕೂಡ ಹಣ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಎಂಟಿಸಿಯು ಕಳೆದೊಂದು ವರ್ಷದಿಂದ 310 ಕೋಟಿ ರೂ ಭವಿಷ್ಯನಿಧಿ ಬಾಕಿ ಉಳಿಸಿಕೊಂಡಿದೆ, ಇದರಿಂದಾಗಿ ಬಿಎಂಟಿಸಿ ನೌಕರರು ಪರಿತಪಿಸುವಂತಾಗಿದೆ.
ಬಿಎಂಟಿಸಿಯು ನೌಕರರ ವೇತನದಲ್ಲಿ ಮಾಸಿಕ ಶೇ.12ರಷ್ಟು ಹಣವನ್ನು ಪಿಎಫ್ ವಂತಿಗೆಗೆ ಕಡಿತ ಮಾಡುತ್ತದೆ. ನಿಗಮದಿಂದ ಪಿಎಫ್ ನಿಧಿಗೆ ಪಾವತಿಸುತ್ತದೆ. ನೌಕರರು ನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಬಳಿಕ ಈ ಹಣವನ್ನು ಪಡೆದುಕೊಳ್ಳುತ್ತಾರೆ.

ಬಿಎಂಟಿಸಿ 2018ರ ಜುಲೈನಿಂದ 2019ರ ಆಗಸ್ಟ್ ವರೆಗೂ 310 ಕೋಟಿ ರೂ ಹಣವನ್ನು ಪಿಎಫ್ ನಿಧಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಸರ್ಕಾರಿ ನೌಕರರ ಅಥವಾ ಖಾಸಗಿ ನೌಕರರು ಯಾರೇ ಆದರೂ ಇವೃತ್ತಿ ನಂತರ ಬದುಕು ಮತ್ತೊಂದು ಮಗ್ಗಲಿಗೆ ತಿರುಗುತ್ತದೆ. ನೌಕರರು ನಿವೃತ್ತಿ ಬಳಿಕ ಪಿಎಫ್ ರೂಪದಲ್ಲಿ ದೊಡ್ಡ ಮೊತ್ತ ಕೈಸೇರುವ ವಿಶ್ವಾಸದಲ್ಲಿ ಕುಟುಂಬ, ಮದುವೆ, ಮನೆ, ಮಕ್ಕಳ ಭವಿಷ್ಯ ಸೇರಿದಂತೆ ಹಲವು ಕಾರಣಗಳಿಗೆ ಕಮಿಟ್‌ಮೆಂಟ್ ಮಾಡಿಕೊಂಡಿರುತ್ತಾರೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಿಎಂಟಿಸಿಯಲ್ಲಿ ಕಳೆದೊಂದು ವರ್ಷದಿಂದ ಪಿಎಫ್ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ನಿವೃತ್ತ ನೌಕರರಿಗೆ ಸಮಸ್ಯೆಯಾಗಿದೆ. ಸತತ ನಷ್ಟದಿಂದ ನಿಗಮದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯ ಸರ್ಕಾರ ನಿಗಮದ ನೆರವಿಗೆ ಧಾವಿಸದಿದ್ದರೆ ಮತ್ತಷ್ಟು ಅಧೋಗತಿಗೆ ತಲುಪುತ್ತದೆ.
ಬಿಎಂಟಿಸಿಯು ಪ್ರತಿ ತಿಂಗಳು ನೌಕರರ ವೇತನ ಆಧರಿಸಿ ಪಿಎಫ್ ಮೊತ್ತ ಕಡಿತಗೊಳಿಸುತ್ತದೆ. ಈ ಹಣವನ್ನು ನಿಗಮದ ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದರಿಂದ ಪಾವತಿಸುವಲ್ಲಿ ವಿಳಂಬ ವಾಗಿದೆ.ಮೋಟಾರು ವಾಹನ ತೆರಿಗೆ, ಟೋಲ್ ಶುಲ್ಕದಲ್ಲೂ ವಿನಾಯಿತಿ ನೀಡಬೇಕು ಎನ್ನುವುದು ನಿವೃತ್ತ ನೌಕರರ ಬೇಡಿಕೆಯಾಗಿದೆ.












Click it and Unblock the Notifications