ಬಿಎಂಟಿಸಿ ಬಸ್‌ಗೆ ಬೆಂಕಿ, ಬಸ್‌ನಲ್ಲಿ ಮಲಗಿದ್ದ ಕಂಡಕ್ಟರ್ ಸಾವು
ಬಿಎಂಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದರಲ್ಲಿ ಮಲಗಿದ್ದ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬೆಂಗಳೂರು, ಮಾರ್ಚ್ 10; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ) ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರೂ ಬಸ್‌ನಲ್ಲಿ ಮಲಗಿದ್ದ 43 ವರ್ಷದ ಕಂಡಕ್ಟರ್ ಸಾವನ್ನಪ್ಪಿದ್ದಾರೆ. ಬಿಎಂಟಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ನಿರ್ವಾಹಕನ ಸಾವಿಗೆ ವಿಷಾದ ವ್ಯಕ್ತಪಡಿಸಿದೆ.
ಶುಕ್ರವಾರ ಮುಂಜಾನೆ 4.45ರ ಸುಮಾರಿಗೆ ಕೆಎ 57, ಎಫ್ 2069 ಸಂಖ್ಯೆಯ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಲಿಂಗದೀರನಹಳ್ಳಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮುತ್ತಯ್ಯ ಎಂಬ ಕಂಡಕ್ಟರ್ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಘಟಕ 31 ಅನುಸೂಚಿ ಸಂಖ್ಯೆ 243ಎಲ್/1 ಬಸ್ ಬೆಂಕಿಗೆ ಆಹುತಿಯಾಗಿದೆ. ಚಾಲಕ ಪ್ರಕಾಶ್ ಮತ್ತು ಮುತ್ತಯ್ಯ ಬಸ್ ಸಿಬ್ಬಂದಿಗಳಾಗಿದ್ದರು. ಬ್ಯಾಡರಹಳ್ಳಿ ಸಮೀಪದ ಲಿಂಗದೀರನಹಳ್ಳಿ ಬಸ್ ನಿಲ್ದಾಣದಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಾಲಕ ಪ್ರಕಾಶ್ ಅಲ್ಲಿ ಮಲಗಿದ್ದರು. ಕಂಡಕ್ಟರ್ ಮುತ್ತಯ್ಯ ಬಸ್‌ನಲ್ಲಿಯೇ ಮಲಗುವುದಾಗಿ ಹೇಳಿದ್ದರು.
ಚಾಲಕ ಪ್ರಕಾಶ್ ನಿಲ್ದಾಣದ ವಾಸ್ತವ್ಯ ಸ್ಥಳದಲ್ಲಿ ಮಲಗಿದ್ದರು. ಆದ್ದರಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಅವರ ಗಮನಕ್ಕೆ ಬಂದಿಲ್ಲ. ಗಸ್ತಿನಲ್ಲಿದ್ದ ಪೊಲೀಸರು ಬಸ್‌ಗೆ ಬೆಂಕಿ ಹೊತ್ತಿರುವುದು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಬೆಂಕಿ ಆರಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರೂ ಕಂಡಕ್ಟರ್ ಮುತ್ತಯ್ಯ ಸಾವನ್ನಪ್ಪಿದ್ದಾರೆ.
ಮೃತ ಮುತ್ತಯ್ಯ ವಿವರ; 43 ವರ್ಷದ ಮುತ್ತಯ್ಯ ಮೂಲತಃ ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕು ತಳ್ಳೀಕೇರಿಯವರು. ಪತ್ನಿ ಮಂಜುಳಾ ಮುತ್ತಯ್ಯ ಸಾರಂಗಮಠ. ದಂಪತಿಗಳಿಗೆ 14 ವರ್ಷದ ಹೆಣ್ಣು ಮಗುವಿದೆ. ಬಿಎಂಟಿಸಿಯಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದಾರೆ. 9/3/2023ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಪಾಳಿ ಮುಗಿದ ಬಳಿಕ ಬಸ್‌ನಲ್ಲಿ ಮಲಗಿದ್ದರು.

ಮುತ್ತಯ್ಯ ಬಿಲ್ಲೆ ಸಂಖ್ಯೆ 7073. ಪಶ್ಚಿಮ ವಿಭಾಗದ ಘಟಕ 31ರ ಸಿಬ್ಬಂದಿಯಾಗಿದ್ದರು. 9/9/2008ರಲ್ಲಿ ತರಬೇತಿ ಪಡೆದಿದ್ದರು. 10/8/2011 ಪರಿಕ್ಷಣಾರ್ಥಿಯಾಗಿದ್ದರು. 23/9/2013ರಂದು ಸೇವೆ ಖಾಯಂ ಮಾಡಲಾಗಿತ್ತು.
ಘಟನೆ ಬಗ್ಗೆ ಬಿಎಂಟಿಸಿ ಮಾಹಿತಿ ನೀಡಿದೆ. ಇಂದು ಬೆಳಗ್ಗೆ ಸುಮಾರು 4.45 ರ ಸಮಯದಲ್ಲಿ ಘಟಕ 31 ಅನುಸೂಚಿ ಸಂಖ್ಯೆ 243L/1, ಲಿಂಗದೀರನಹಳ್ಳಿ ರಾತ್ರಿ ತಂಗುವ ಅನುಸೂಚಿಯು KA 57 F, 2069, ಚಾಲಕ ಪ್ರಕಾಶ್, ನಿರ್ವಾಹಕ ಮುತ್ತಯ್ಯರವರು ಚಾಲನಾ ಸಿಬ್ಬಂದಿಗಳು. ಲಿಂಗದೀರನಹಳ್ಳಿ ಬಸ್ ನಿಲ್ದಾಣದಲ್ಲಿ ಚಾಲನಾ ಸಿಬ್ಬಂದಿಗಳು ರಾತ್ರಿ ತಂಗಲು ಅಲ್ಲಿಯೇ ಸ್ಥಳವಿದ್ದು, ಚಾಲಕರು ತಂಗುವ ಸ್ಥಳದಲ್ಲಿ ಮಲಗಿರುತ್ತಾರೆ. ಆದರೆ ನಿರ್ವಾಹಕರು ತಾವು ಬಸ್ ನಲ್ಲಿಯೇ ಮಲಗುವುದಾಗಿ ತಿಳಿಸಿರುವುದಾಗಿ ಚಾಲಕರು ಹೇಳಿಕೆ ನೀಡಿರುತ್ತಾರೆ.
ಬೆಂಕಿ ಹತ್ತಿರುವ ಸಮಯದಲ್ಲಿ ಚಾಲಕ ತಂಗುವ ಸ್ಥಳದಲ್ಲಿ ಮಲಗಿದ್ದ ಕಾರಣ ಇವರ ಗಮನಕ್ಕೆ ಬಂದಿರುವುದಿಲ್ಲವಾಗಿ ಚಾಲಕರು ತಿಳಿಸಿರುತ್ತಾರೆ. ಮುಂದುವರೆದು, ಬೀಟ್ ಪೋಲಿಸ್ ರವರು ಬೆಂಕಿ ಹತ್ತಿರುವುದನ್ನು ನೋಡಿ ತಕ್ಷಣ ಅಗ್ನಿಶಾಮಕದವರಿಗೆ ತಿಳಿಸಿ ಬೆಂಕಿ ನಂದಿಸಲು ಪ್ರಯತ್ನ ಮಾಡಿದ್ದಾಗ್ಯೂ ದುರದೃಷ್ಟವಶಾತ್ ನಿರ್ವಾಹಕರು ಬದುಕುಳಿಯಲಿಲ್ಲ. ಸಂಸ್ಥೆಯು ತೀವ್ರ ಸಂತಾಪವನ್ನು ಸೂಚಿಸುತ್ತದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿದ್ದಾರೆ. ನಿರ್ವಾಹಕರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಬಿಎಂಟಿಸಿ ಹೇಳಿದೆ.












Click it and Unblock the Notifications