BMTC AC Buses: ಬೆಂಗಳೂರು ಬಿಸಿಲಿಗೆ ಬೆದರಿ ಎಸಿ ಬಸ್‌ಗಳ ಮೊರೆ ಹೋದ ಜನ!
ಬೆಂಗಳೂರು, ಮೇ. 07 : ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಬಿಸಿಲಿನ ತತ್ತರಕ್ಕೆ ಸಿಲುಕಿದ್ದ ಜನ ಕಳೆದ ವಾರಾಂತ್ಯದಿಂದ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಇಷ್ಟು ದಿನ ಬಿಸಿಲಿನಿಂದ ಬೆಂದಿದ್ದ ಬೆಂಗಳೂರಿಗಳು ಫುಲ್ ಖುಷ್ ಆಗಿದ್ದಾರೆ.
ಮಳೆ ಬಂದರೂ ಕೂಡ ಬಿಸಿಲಿನ ಝಳ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಬಸ್ ಪ್ರಯಾಣಿಕರು ತತ್ತರಿಸಿದ್ದಾರೆ. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಎಸಿ ಬಸ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿಯೇ ಬಿಎಂಟಿಸಿಯ ಎಸಿ (ಹವಾನಿಯಂತ್ರಿತ) ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ ಹತ್ತರಷ್ಟು ಏರಿಕೆ ಕಂಡು ಬಂದಿದೆ.

ಬಿಸಿಲಿನ ಝಳ: ಎಸಿ ಬಸ್‌ಗಳ ಮೊರೆ ಹೋದ ಜನ
ಈ ವರ್ಷದ ಫೆಬ್ರವರಿ ತಿಂಗಳಿನಿಂದ ಬಿಸಿಲು ಹೆಚ್ಚಾಗಿದೆ. ಮಳೆ ಇಲ್ಲದ ಕಾರಣ ಬಿಸಿನ ಝಳ ಕೊಂಚ ಕೂಡ ಕಡಿಮೆಯಾಗಿರಲಿಲ್ಲ. ಇದೇ ಕಾರಣಕ್ಕೆ ಬಿಎಂಟಿಸಿ ಪ್ರಯಾಣಿಕರು ಎಸಿ ಬಸ್‌ಗಳನ್ನು ಬಳಸಲು ಆರಂಭಿಸಿದ್ದರು. ಈ ಬಸ್‌ಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆಯಲ್ಲಿ ಮೂರು ತಿಂಗಳಿನಿಂದ ಹೆಚ್ಚಳ ಕಂಡು ಬಂದಿದೆ.
ಈ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂರು ತಿಂಗಳಿನಿಂದ ಎಸಿ ಬಸ್‌ಗಳಲ್ಲಿ ಪ್ರಯಾಣಿಸುವವರು ಹೆಚ್ಚಾಗುತ್ತಿದ್ದಾರೆ. ಮಾರ್ಚ್‌ನಲ್ಲಿ ದಿನಕ್ಕೆ 10 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರೆ, ಏಪ್ರಿಲ್‌ನಲ್ಲಿ 30 ಸಾವಿರಕ್ಕೆ ಏರಿಕೆಯಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳನ್ನು ಉಲ್ಲೇಖಿಸಿ ಪ್ರಜಾವಾಣಿ ವರದಿ ಮಾಡಿದೆ.

ಎಸಿ ಬಸ್‌ಗಳಿಗೆ ಆದ್ಯತೆ ನೀಡುವ ಪ್ರಯಾಣಿಕರು
ಬೆಂಗಳೂರಿನಲ್ಲಿ ಬಸ್ ಪ್ರಯಾಣಿಕರು ಸದ್ಯ ಎಸಿ ಬಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಒಂದು ದಿನಕ್ಕೆ ಸುಮಾರು 25 ಲಕ್ಷ ಜನರು ಪ್ರಯಾಣಿಸುತ್ತಾರೆ. ಇವರಲ್ಲಿ ಬಿಸಿಲು ಹೆಚ್ಚಾಗುವ ಮುನ್ನ ಅಂದರೆ ಈ ವರ್ಷದ ಆರಂಭದ ಜನವರಿ ವರೆಗೆ ದಿನಕ್ಕೆ ಸರಾಸರಿ 3 ಲಕ್ಷ ಪ್ರಯಾಣಿಕರು ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು.
ಆದರೆ, ಜನವರಿ ನಂತರ ಬಿಸಿಲು ನಿಧಾನವಾಗಿ ಹೆಚ್ಚಾಗಲು ಪ್ರಾರಂಭಿಸಿದೆ. ಈ ವೇಳೆ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಹವಾನಿಯಂತ್ರಿತ ಬಸ್‌ಗಳಾದ ವಾಯು ಮತ್ತು ವಜ್ರ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಬಿಎಂಟಿಸಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದ ನವೆಂಬರ್‌ನಿಂದ ಈ ವರ್ಷದ ಜನವರಿವರೆಗೆ ಬಿಎಂಟಿಸಿ ಕೇಂದ್ರ ವಲಯ ಒಂದರಲ್ಲಿಯೇ ದಿನಕ್ಕೆ ಸರಾಸರಿ 1.15 ಲಕ್ಷ ಪ್ರಯಾಣಿಕರು ಹವಾನಿಯಂತ್ರಿತ ಬಸ್‌ಗಳಲ್ಲಿ ಸಂಚರಿಸಿದ್ದರು. ಆದರೆ, ತಾಪಮಾನ ಹೆಚ್ಚಾದ ಫೆಬ್ರವರಿಯಿಂದ ಏಪ್ರಿಲ್ ತಿಂಗಳವರೆಗೆ ದಿನಕ್ಕೆ 1.27 ಲಕ್ಷ ಜನ ಪ್ರಯಾಣಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications