BMTC Accident: ಬೆಂಗಳೂರಿನಲ್ಲಿ ಭೀಕರ ಅಪಘಾತ; 9 ವಾಹನಗಳಿಗೆ ಬಿಎಂಟಿಸಿ ಬಸ್ ಡಿಕ್ಕಿ
ಶನಿವಾರ ವೀಕೆಂಡ್ ಎಂದು ಸೈಲೆಂಟಾಗಿದ್ದ ಸಿಲಿಕಾನ್ ಸಿಟಿಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಬಿಎಂಟಿಸಿ ಬಸ್‌ವೊಂದು ಬರೋಬ್ಬರಿ ಒಂಬತ್ತು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ 9ನೇ ಗೇಟ್ ಬಳಿ ಬಿಎಂಟಿಸಿ ಬಸ್ ಮೂರು ಆಟೋಗಳು, ಮೂರು ಕಾರುಗಳು ಮತ್ತು ಬೈಕ್‌ಗಳು ಸೇರಿ ಒಂಬತ್ತು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.
ಬಿಎಂಟಿಸಿ ರಭಸವಾಗಿ ಡಿಕ್ಕಿ ಹೊಡೆದಿರುವ ಪರಿಣಾಮ ಆಟೋ ಹಾಗೂ ಇತರ ವಾಹನಗಳು ಜಖಂ ಆಗಿವೆ. ಈ ಪೈಕಿ ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆರಂಭಿಕ ವರದಿಗಳ ಪ್ರಕಾರ ಬಿಎಂಟಿಸಿ ಚಾಲಕ ಚಾಲನೆ ಮಾಡುವಾಗ ಹಠಾತ್ ಆರೋಗ್ಯ ಸಮಸ್ಯೆ ಉಂಟಾದ ನಂತರ ಈ ಅಪಘಾತ ಸಂಭವಿಸಿದೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆಗಾಗಿ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಚಾಲಕನಿಗೆ ಪಿಡ್ಸ್ ಬಂದು ಎಡವಟ್ಟು
ಸ್ಥಳೀಯರ ಪ್ರಕಾರ ಬಿಎಂಟಿಸಿ ಬಸ್ ಚಾಲಕನಿಗೆ ಪಿಡ್ಸ್ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ. ಇದರಿಂದ ಚಾಲನೆ ವೇಳೆ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದಿದೆ. ಕೆಲ ವಾಹನಗಳಿಗೆ ಡಿಕ್ಕಿ ಹೊಡೆದ ಕಾರಣ ಭಾರೀ ಹಾನಿಯಾಗಿದೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಬಸ್ ಚಾಲಕ ಕಬ್ಬನ್ಪಾರ್ಕ್ ಸಂಚಾರ ಪೊಲೀಸರ ವಶದಲ್ಲಿದ್ದಾರೆ.
ಇಂದು ಮಧ್ಯಾಹ್ನದ ಸುಮಾರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಸಿಗ್ನಲ್‌ನಲ್ಲಿ ವಾಹನಗಳು ನಿಂತಿದ್ದಾಗ ಈ ಅವಘಡ ಸಂಭವಿಸಿದೆ. ಬಸ್ ಏಕಾಏಕಿ ಬಸ್ ನುಗ್ಗಿದ ಪರಿಣಾಮ ಮುಂಭಾಗದಲ್ಲಿದ್ದ ಕಾರುಗಳು, ನಾಲ್ಕು ಆಟೋಗಳು ಹಾಗೂ ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ ವಾಹನಗಳು ಸರಣಿಯಾಗಿ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಸಂಪೂರ್ಣ ಜಖಂ ಆಗಿದ್ದು, ಅದೃಷ್ಟವಶಾತ್ ಆ ವಾಹನಗಳಲ್ಲಿ ಇದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆಟೋ ಚಾಲಕರೊಬ್ಬರ ಸ್ಥಿತಿ ಮಾತ್ರ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬಿಎಂಟಿಸಿ ಹರಿದು ಬಾಲಕಿ ಸಾವು
ರಾಜಾಜಿನಗರದಲ್ಲಿ ಕೂಡ ಮತ್ತೊಂದು ಅವಘಡ ನಡೆದಿದೆ. ಬಿಎಂಟಿಸಿ ಬಸ್ ಹರಿದು 9 ವರ್ಷದ ಬಾಲಕಿ ದುರಂತವಾಗಿ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿ, ಯುವತಿಯ ಜೀವ ಉಳಿಸಲು ಪ್ರಯತ್ನ ನಡೆಸಿದ್ದು, ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಗೆ ಚಾಲಕನ ನಿರ್ಲಕ್ಷ್ಯ, ಅತಿ ವೇಗ ಕಾರಣ ಎನ್ನಲಾಗಿದೆ.












Click it and Unblock the Notifications