BMTC Bhojana Bandi: ಬಿಎಂಟಿಸಿ "ಭೋಜನಾ ಬಂಡಿ", ಏನಿದು & ಉದ್ದೇಶ ಏನು?-ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರವರಿ, 22: ಬೆಂಗಳೂರಿನ ಜೀವನಾಡಿ ಸಾರಿಗೆಯಾಗಿರುವ ಬಿಎಂಟಿಸಿಯು ಪ್ರತಿನಿತ್ಯ ಸಾವಿರಾರು ಜನರನ್ನು ಹೊತ್ತೊಯ್ಯುತ್ತವೆ. ಅಲ್ಲದೆ ಬಿಎಂಟಿಸಿ ಹೊಸ ಹೊಸ ಯೋಜನೆಗಳನ್ನು ತರುತ್ತಿದೆ. ಇದೀಗ ಹಳೇ ಬಸ್‌ಗಳನ್ನು ಉತ್ತಮ ಯೋಜನೆಗೆ ಬಳಸಿಕೊಳ್ಳಳು ಮುಂದಾಗಿದೆ. ಹಾಗಾದರೆ ಆ ಯೋಜನೆ ಯಾವುದು ಹಾಗೂ ಇದರ ಉದ್ದೇಶವೇನು ಎಂದು ಇಲ್ಲಿ ತಿಳಿಯಿರಿ.
ಹಳೇ ಬಿಎಂಟಿಸಿ ಬಸ್‌ಗಳನ್ನು "ಭೋಜನ ಬಂಡಿ" ಹೆಸರಿನಲ್ಲಿ ಕ್ಯಾಂಟೀನ್‌ಗಳನ್ನಾಗಿ ಮಾರ್ಪಾಡು ಮಾಡಿ ಕ್ಯಾಂಟೀನ್‌ಗಳಿಲ್ಲದ ಡಿಪೊಗಳಲ್ಲಿ ಅಳವಡಿಸಲು ಬಿಎಂಟಿಸಿ ಮುಂದಾಗಿದೆ. ಈಗಾಗಲೇ ಒಂದು "ಭೊಜನ ಬಂಡಿ" ತಯಾರಾಗಿದ್ದು, ಯಶವಂತಪುರ ಅಥವಾ ಪೀಣ್ಯ ಡಿಪೋದಲ್ಲಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಬಿಎಂಟಿಸಿ ಉತ್ತರ ವಲಯದ 10 ಲಕ್ಷ ಕಿಲೋ ಮೀಟರ್ ಸಂಚರಿಸಿ, ಕಾರ್ಯ ಸ್ಥಗಿತಗೊಳಿಸಿರುವ ಬಸ್ ಅನ್ನು ಕಾರ್ಯಾಗಾರ-4ರ ಸಹಾಯಕ ತಾಂತ್ರಿಕ ಎಂಜಿನಿಯರ್ ಆರ್.ಆನಂದಕುಮಾರ್ ಮತ್ತು ತಾಂತ್ರಿಕ ಸಹಾಯಕರು ಕ್ಯಾಂಟೀನ್ ಆಗಿ ಪರಿವರ್ತನೆ ಮಾಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರು, ಕೇಂದ್ರ ಕಚೇರಿಯ ಮುಖ್ಯ ತಾಂತ್ರಿಕ ಎಂಜಿನಿಯರ್, ಕೇಂದ್ರೀಯ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ ಬಸ್ ಕ್ಯಾಂಟೀನ್ ಮಾಡಲು ಸಾಧ್ಯವಾಯಿತು ಎಂದು ಆನಂದಕುಮಾರ್ ಹೇಳಿದ್ದಾರೆ ಅಂತಾ ಪ್ರಜಾವಾಣಿಯಲ್ಲಿ ವರದಿಯಾಗಿದೆ.
ಕ್ಯಾಂಟೀನ್ ಬಸ್‌ಗೆ ಭೋಜನ ಬಂಡಿ ಎಂದು ಹೆಸರಿಡಲಾಗಿದ್ದು, ಬಸ್‌ನ ಎರಡೂ ಕಡೆಯಲ್ಲೂ ಭೋಜನ ಬಂಡಿ.. ಬನ್ನಿ ಕುಳಿತು ಊಟ ಮಾಡೋಣ ಎಂಬ ಘೋಷವಾಕ್ಯಗಳನ್ನು ಬರೆಯಲಾಗಿದೆ. ಇನ್ನು ಬಸ್ ಒಳಗಿನ ಸೀಟ್‌ಗಳನ್ನು ತೆಗೆದು ಟೇಬಲ್ ಮತ್ತು ಆಸನಗಳನ್ನಾಗಿ ತಯಾರು ಮಾಡಲಾಗಿದೆ.
ಭೋಜನ ಬಂಡಿಯಲ್ಲಿ ಏನೆಲ್ಲ ಸೌಲಭ್ಯಗಳಿವೆ?
* ಈ ಬಸ್ ಕ್ಯಾಂಟಿನ್‌ನಲ್ಲಿ ಕೈತೊಳೆಯುವ ಬೇಸಿನ್
* ಕುಡಿಯುವ ನೀರಿನ ವ್ಯವಸ್ಥೆ, ಫ್ಯಾನ್‌ಗಳ ವ್ಯವಸ್ಥೆ
* ಬೆಳಕಿಗಾಗಿ ಚಾವಣಿಯಲ್ಲಿ ಗಾಜಿನ ಕಿಟಕಿಯನ್ನು ಅಳವಡಿಸಲಾಗಿದೆ.
* ಗಾಳಿ, ಬೆಳಕಿಗಾಗಿ ಬಸ್‌ನ ಎರಡೂ ಕಡೆಗಳಲ್ಲಿ ಕಿಟಕಿಗಳನ್ನು ಇಡಲಾಗಿದೆ.
* ಬಸ್ ಚಾವಣಿಯ ಮೇಲೆ ನೀರಿನ ಟ್ಯಾಂಕ್ ಅನ್ನು ಜೋಡಿಸಲಾಗಿದೆ.
* ಹೋಟೆಲ್‌ಗಳಲ್ಲಿ ಇರುವ ಎಲ್ಲ ಸೌಲಭ್ಯಗಳು ಈ ಭೋಜನ ಬಂಡಿಯಲ್ಲಿವೆ.
ನಗರದಲ್ಲಿ 19 ಬಿಎಂಟಿಸಿ ಡಿಪೊಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆಗಳಲ್ಲಿ ಕ್ಯಾಂಟೀನ್‌ಗಳಿವೆ. ಹಲವು ಕಡೆಗಳಲ್ಲಿ ಇಲ್ಲ. ಕಾರ್ಯಾಚರಣೆ ನಿಲ್ಲಿಸಿರುವ ಬಸ್‌ಗಳನ್ನು ಕ್ಯಾಂಟೀನ್‌ಗಳನ್ನಾಗಿ ಪರಿವರ್ತಿಸಿ 17 ಡಿಪೊಗಳಲ್ಲಿ ಅಳವಡಿಸುವ ಯೋಜನೆ ಇದೆ. ಸದ್ಯ ಒಂದು ಕ್ಯಾಂಟೀನ್ ತಯಾರಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್ ತಿಳಿಸಿದ್ದಾರೆ ಅಂತಾ ವರದಿಯಾಗಿದೆ.
ಬಿಎಂಟಿಸಿ ಸಿಬ್ಬಂದಿಗೆ ಅತಿ ಕಡಿಮೆ ದರದಲ್ಲಿ ಊಟ, ತಿಂಡಿ ನೀಡಲು ಕ್ಯಾಂಟೀನ್‌ಗಳು ಬಳಕೆ ಆಗಲಿವೆ. ಕ್ಯಾಂಟೀನ್ ಅನ್ನು ಬಿಎಂಟಿಸಿಯಿಂದಲೇ ನಡೆಸುವ ಅಥವಾ ಹೊರಗೆ ಗುತ್ತಿಗೆ ನೀಡುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಬಿಎಂಟಿಸಿ ತಾಂತ್ರಿಕ ಎಂಜಿನಿಯರ್‌ಗಳು ಸಂಚಾರ ನಿಲ್ಲಿಸಿರುವ ಬಸ್ ಸಹಿತ ನಮ್ಮಲ್ಲಿರುವ ಸಂಪನ್ಮೂಲವನ್ನೇ ಬಳಸಿಕೊಂಡು ಅತ್ಯುತ್ತಮ ಕ್ಯಾಂಟೀನ್ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.











Click it and Unblock the Notifications