BMTC, BMRCL: ಎಂಡಿಗಳ ಮಹತ್ವದ ಸಭೆ, ಮೆಟ್ರೋ ಫೀಡರ್ ಸೇವೆ ವಿಸ್ತರಣೆ
ಬೆಂಗಳೂರು, ಫೆಬ್ರವರಿ 14: ಬೆಂಗಳೂರಿನಲ್ಲಿ ಸಂಚಾರಕ್ಕೆ ನಮ್ಮ ಮೆಟ್ರೋ ಪ್ರಯಾಣಿಕರ ಪ್ರಮುಖ ಆಯ್ಕೆಯಾಗಿದೆ. ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೇ, ಕಡಿಮೆ ಸಮಯದಲ್ಲಿ ಸೂಕ್ತವಾದ ಸ್ಥಳಕ್ಕೆ ತಲುಪಲು ಜನ ನಮ್ಮ ಮೆಟ್ರೋ ಬಳಸುತ್ತಿದ್ದಾರೆ. ಪ್ರತಿನಿತ್ಯ ಲಕ್ಷಾಂತರ ಜನರು ಸಂಚಾರಕ್ಕಾಗಿ ನಮ್ಮ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ಅಧಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದೆ.
ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳ ಸೇವೆಯನ್ನು ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಮಹತ್ವದ ಸಭೆಯಾಗಿದ್ದು, ಮೆಟ್ರೋ ಫೀಡರ್ ಸೇವೆ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆ ಇದೆ.

ದಿನಾಂಕ: 13.02.2024 ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿದೇರ್ಶಕರಾದ ರಾಮಚಂದ್ರನ್ ರಾವ್ ಅವರು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿದೇರ್ಶಕರಾದ ಎಂ, ಮಹೇಶ್ವರ್ ರಾವ್ ಅವರನ್ನು ಭೇಟಿ ಮಾಡಿ, ಮೆಟ್ರೊ ಫೀಡರ್ ಸೇವೆಗಳನ್ನು ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಹೀಗಾಗಿ ಶೀಘ್ರದಲ್ಲೇ ಮೆಟ್ರೋ ಫೀಡರ್ ಸೇವೆ ಇನ್ನಷ್ಟು ವಿಸ್ತರಣೆಯಾಗುವ ನಿರೀಕ್ಷೆ ಇದೆ.
ಹೊಸ ಬಿಎಂಟಿಸಿ ಮೆಟ್ರೋ ಫಿಡರ್ ಬಸ್‌ಗಳು ಸಂಚಾರ
ಇನ್ನು ಕಳೆದ ತಿಂಗಳು ಜನವರಿಯಲ್ಲಿ ಎರಡು ಹೊಸ ಬಿಎಂಟಿಸಿ ಮೆಟ್ರೋ ಫಿಡರ್ ಬಸ್‌ಗಳು ಸಂಚಾರ ಆರಂಭವಿಸಿದ್ದವು. ನಗರದ ಭಟ್ಟರಹಳ್ಳಿ, ಸೀಗೇಹಳ್ಳಿ ಸರ್ಕಲ್, ಕುದುರೆಸೊನ್ನೆನಹಳ್ಳಿ ಮತ್ತು ಬೆಲ್ತೂರು ಮೂಲಕ ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಟಿನ್ ಫ್ಯಾಕ್ಟರಿವರೆಗೆ ಒಂದು ಮೆಟ್ರೋ ಫಿಡರ್ ಬಸ್ (MF10) ಪ್ರತಿದಿನ ಮೂರು ಟ್ರಿಪ್‌ಗಳನ್ನು ಏಕಮುಖವಾಗಿ ಜನವರಿ 22ರಿಂದ ಸಂಚಾರ ಆರಂಭಿಸಿದೆ.
ಮತ್ತೊಂದು ಮೆಟ್ರೋ ಫೀಡರ್ ಬಸ್ (MF-46) ನಗರದ ಕೆಂಗೇರಿ ಟಿಟಿಎಂಸಿ ನಿಲ್ದಾಣದಿಂದ ಕೆಂಗೇರಿ ಆರ್‌ಡಬ್ಲ್ಯೂಎಸ್ ಗೇಟ್, ದೊಡ್ಡಬೆಲೆ, ಪ್ರಾವಿಡೆಂಟ್ ಸನ್‌ವರ್ತ್ ಅಪಾರ್ಟ್‌ಮೆಂಟ್, ಸೇಂಟ್ ಬೆನೆಡಿಕ್ಟ್ ಚರ್ಚ್, ಅಂಚೆಪಾಳ್ಯ ಮತ್ತು ಕೆಂಗೇರಿ ಮೂಲಕ ಸಂಚರಿಸುತ್ತಿದೆ.
ಏಪ್ರಿಲ್ ಅಂತ್ಯದೊಳಗೆ 121 ಮೆಟ್ರೋ ಫೀಡರ್ ಬಸ್
ಮೆಟ್ರೊ ಫೀಡರ್ ಮಾರ್ಗಗಳಲ್ಲಿ 9 ಮೀಟರ್ ಉದ್ದದ ಮಿನಿ ಬಸ್‌ಗಳನ್ನು ವಿಶೇಷ ರೀತಿಯಲ್ಲಿ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು. ವಿವಿಧ ಯೋಜನೆಯಡಿ 120 ಎಲೆಕ್ಟ್ರಿಕ್ ಬಸ್‌ಗಳನ್ನು ಮೆಟ್ರೋ ಫೀಡರ್ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿದ್ದು, 2024ರ ಏಪ್ರಿಲ್ ಅಂತ್ಯದೊಳಗೆ 121 ಮೆಟ್ರೋ ಫೀಡರ್ ಬಸ್‌ಗಳ ಸಂಖ್ಯೆಯನ್ನು 300ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು.












Click it and Unblock the Notifications