Namma Metro: ಹೆಬ್ಬಾಳದಲ್ಲಿ 45 ಎಕರೆ ಜಾಗಕ್ಕಾಗಿ ಸರ್ಕಾರಕ್ಕೆ ಬಿಎಂಆರ್‌ಸಿಎಲ್ ಪತ್ರ
ಬೆಂಗಳೂರು, ಜುಲೈ 22: ರಾಜ್ಯ ರಾಜಧಾನಿ ಬೆಂಗಳೂರಿನ ಹೆಬ್ಬಾಳವು ಭವಿಷ್ಯದಲ್ಲಿ ಸಾರಿಗೆ ಕೇಂದ್ರವಾಗಿ ಬದಲಾಗುವ ಎಲ್ಲ ಲಕ್ಷಣಗಳು ಇವೆ. ಇಲ್ಲಿ ಮೂರು ಮೆಟ್ರೋ ಮಾರ್ಗಗಳು ಹಾದು ಹೋಗಲಿವೆ. ಉಪನಗರ ರೈಲು ಯೋಜನೆ, ಸಿಟಿ ಬಸ್ ಕಾರ್ಯಾಚರಣೆಗೆ ಯೋಜನೆಗಳ ಜಾರಿಗೆ ನಿರ್ಧರಿಸಲಾಗಿದೆ. ಈ ಪೈಕಿ ಮೆಟ್ರೋ ಯೋಜನೆಗೆ ಅಗತ್ಯವಾದ ಜಾಗಕ್ಕಾಗಿ ಕೇಂದ್ರ ಸರ್ಕಾರಕ್ಕೆ BMRLC ಪತ್ರ ಬರೆದಿದೆ.
ಹೆಬ್ಬಾಳವು ಬಹುಮಾದರಿ ಸಾರಿಗೆ ಹಬ್ ಆಗುವುದರಲ್ಲಿ ಅನುಮಾನ ಇಲ್ಲ. ಇಲ್ಲಿ ವಿವಿಧ ಯೋಜನೆಗಳು ಜಾರಿಯಾಗಬೇಕಿದೆ. ಈ ಪೈಕಿ ಲೇಕ್ ವ್ಯೂ ಟೂರಿಸಂ ಕಂಪನಿಯು ಯೋಜನೆಯೊಂದನ್ನು ಕಾರ್ಯಗತಗೊಳಿಸಲು ವರ್ಷಗಳ ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (KIADB) 55 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು.

ಈ ಭೂಮಿಯ ಪೈಕಿ 45 ಎಕರೆ ಜಾಗವನ್ನು ಉದ್ದೇಶದಂತೆ ಯೋಜನೆ ಆರಂಭಿಸಲು KIADB ಬಿಟ್ಟುಕೊಡಬೇಕು ಎಂದು ಪತ್ರದಲ್ಲಿ ಬಿಎಂಆರ್‌ಸಿಎಲ್ ಮನವಿ ಮಾಡಿಕೊಂಡಿದೆ.
ಹೆಬ್ಬಾಳದಲ್ಲಿ ಎರಡು ಮೆಟ್ರೊ ಮಾರ್ಗ
ಈ ಹೆಬ್ಬಾಳದಲ್ಲಿ ರೈಲು, ಮೆಟ್ರೋ ರೈಲು, ಬಸ್ ಗಳು ನಿಲುಗಡೆ, ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂಬಂಧ ಹಲವು ಯೋಜನೆಗಳು ಇಲ್ಲಿ ಅನುಷ್ಠಾನಕ್ಕೆ ಬರಲಿವೆ. ಮುಖ್ಯವಾಗಿ ಇಲ್ಲಿ ಹೆಬ್ಬಾಳದಲ್ಲಿ ನೀಲಿ, ಕಿತ್ತಳೆ ಹಾಗೂ ಕೆಂಪು ಜತೆಗೆ ಎರಡು ಮೆಟ್ರೊ ಮಾರ್ಗಗಳನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಪ್ರಸ್ತಾಪಿಸಿದೆ.
ಕೆಂಪಾಪುರದಲ್ಲಿ ನೀಲಿ ಮತ್ತು ಕಿತ್ತಳೆ ಮಾರ್ಗದಲ್ಲಿ ಎರಡು ಮೆಟ್ರೊ ನಿಲ್ದಾಣಗಳು ಬರಲಿವೆ. ನಮ್ಮ ಮೆಟ್ರೊ, ಉಪನಗರ ರೈಲು, ಸಿಟಿ ಬಸ್ ಕಾರ್ಯಾಚರಣೆಯ ಕೇಂದ್ರವಾಗಿ ಹೆಬ್ಬಾಳ ಬದಲಾಗಲಿದೆ. ಇಲ್ಲಿ ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ, ಸಣ್ಣದೊಂದು ಡಿಪೋ ಸ್ಥಾಪನೆ ಆಗಲಿದೆ. ನಮ್ಮ ಮೆಟ್ರೋ ಮಾರ್ಗಗಳಿಗೆ ಬಸ್ ಸಾರಿಗೆ ಸಂಪರ್ಕ ಕೊಂಡಿ ಆಗಲಿದೆ.

550 ಕೋಟಿ ರೂ. ಭರಿಸಲು ಸಿದ್ಧ
KIADB ನಿಗದಿ ಪಡಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರತಿ ಎಕರೆಗೆ ರೂಪಾಯಿ 12 ಕೋಟಿ ಯಂತೆ 6712 ಚದರ ಮೀ.ನಷ್ಟು ಭೂಮಿಯನ್ನು ಸಿಲ್ಕ್‌ಬೋರ್ಡ್‌ನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಸಂಪರ್ಕಿಸುವ 'ನೀಲಿ ಮಾರ್ಗ' ನಿರ್ಮಾಣಕ್ಕಾಗಿ ಪಡೆದುಕೊಂಡಿದೆ. ಸದ್ಯ ಇಲ್ಲಿನ ಜಾಗದಲ್ಲಿ ಫ್ಲ್ಯಾಟ್ ಹೊಂದಿದ ಭೂಮಿಯ ಮಾಲೀಕರಿಗೆ ಪರಿಹಾರ ಇನ್ನೂ ನೀಡಲಾಗಿಲ್ಲ. ಭೂಮಿ ಖಾಲಿ ಬಿದ್ದಿದ್ದು, ಇದಕ್ಕೆ ತಗಲುವ 550 ಕೋಟಿ ರೂ.ಗಳ ವೆಚ್ಚ ಭರಿಸಲು ನಾವು ಸಿದ್ಧವಿದ್ದೇವೆ ಎಂದು BMRCL ಪತ್ರದಲ್ಲಿ ಹೇಳಿದೆ.
ನಮ್ಮ ಮೆಟ್ರೋ ಯೋಜನೆಗಳು
ಸದ್ಯ ಬೆಂಗಳೂರು ನಮ್ಮ ಮೆಟ್ರೋ ಹಳದಿ ಲೈನ್ ಕಾರ್ಯಾಚರಣೆ ಎದುರು ನೋಡುತ್ತಿದೆ. ಸಿಲ್ಕ್‌ಬೋರ್ಡ್- ಏರ್‌ಪೋರ್ಟ್‌ಗೆ ಸಂಪರ್ಕಿಸುವ ನೀಲಿ ಮಾರ್ಗ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಇನ್ನೂ ಪಿಂಕ್ ಲೈನ್ ಭೂಗತ ಕಾರ್ಯವು ಬಹುತೇಕ ಮುಕ್ತಾಯದ ಹಂತದಲ್ಲಿದೆ. ಜೆಪಿನಗರ-ಕೆಂಪಾಪುರವರೆಗೆ ಮಾರ್ಗವು ಸಿದ್ಧವಾಗಬೇಕಿದೆ. ಮಾಗಡಿ ರಸ್ತೆ-ಬೆಂಗಳೂರು ಔಟರ್ ರಿಂಗ್ ರಸ್ತೆವರೆಗಿನ ಯೋಜನೆ ಭವಿಷ್ಯದಲ್ಲಿ ಜಾರಿಗೆ ಬರಲಿವೆ.
ನಮ್ಮ ಮೆಟ್ರೋದ ಯೋಜನೆಗಳು ಒಂದೊಂದೆ ಸಾಕಾರಗೊಂಡರೆ, ನಗರದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ದೂರದ ಎಲೆಕ್ಟ್ರಾನಿಕ್ ಸಿಟಿ, ಮಾರತ್ತಹಳ್ಳಿ, ಆನೇಕಲ್, ಬಿಡದಿಯಂತಹ ದೂರದ ಪ್ರದೇಶಗಳಿಗೂ ಸಂಪರ್ಕ ಸಾಧ್ಯವಾಗಲಿದೆ. ಹೊಸ ಪ್ರಸ್ತಾವನೆಗಳನ್ನು ಬಿಎಂಆರ್‌ಸಿಎಲ್ ಸರ್ಕಾರದ ಮುಂದೆ ಇಟ್ಟಿದೆ.












Click it and Unblock the Notifications