‘ಪಕ್ಷಕ್ಕಾಗಿ ಶ್ರೀಯುತರು...’ ಬಿಎಲ್ ಸಂತೋಷ್ ಬೆನ್ನಿಗೆ ಬೆಲ್ಲದ್!

ಬೆಂಗಳೂರು: ಬಿಜೆಪಿ ಸೋಲಿನ ಮಧ್ಯೆ BJP ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ವಿರುದ್ಧ ಕೇಸರಿ ಪಡೆಯಲ್ಲಿ ಆಕ್ರೋಶ ಮೊಳಗುತ್ತಿದೆ. ಅದರಲ್ಲೂ ಲಿಂಗಾಯತ ಮುಖಂಡರು BL ಸಂತೋಷ್ ವಿರುದ್ಧ ಕೆಂಡವಾಗಿದ್ದಾರೆ ಎಂಬ ಮಾತು ಓಡಾಡುತ್ತಿದೆ. ಇದೇ ಹೊತ್ತಲ್ಲಿ ಸಂತೋಷ್ ಪರವಾಗಿ ಅರವಿಂದ್ ಬೆಲ್ಲದ್ ಬ್ಯಾಟ್ ಬೀಸಿದ್ದಾರೆ. ಹಾಗಾದ್ರೆ ಏನ್ ಹೇಳಿದ್ರು ಬೆಲ್ಲದ್, ತಿಳಿಯೋಣ ಬನ್ನಿ.

ಉತ್ತರ ಭಾರತದಲ್ಲಿ ಜಾರಿಗೆ ತಂದ 'ಗುಜರಾತ್' ಮಾಡೆಲ್ ಕರ್ನಾಟಕದಲ್ಲೂ ವರ್ಕೌಟ್ ಆಗಿ, ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತೆ ಎಂಬುದೇ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿತ್ತು. ಆದ್ರೆ ಲೆಕ್ಕಾಚಾರ ಕೈಕೊಟ್ಟು, BJP ಹೀನಾಯ ಸೋಲು ಕಂಡಿದೆ. ಈ ಮಧ್ಯೆ ಬಿಎಲ್ ಸಂತೋಷ್ ವಿರುದ್ಧ ಬಿಜೆಪಿ ಒಳಗೆ ಅಸಮಾಧಾನದ ಹೊಗೆ ಎದ್ದ ಆರೋಪವೂ ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ ಬಿಎಲ್ ಸಂತೋಷ್ ಕೈಹಿಡಿದಿದ್ದಾರೆ ಅರವಿಂದ್ ಬೆಲ್ಲದ್. ಚುನಾವಣೆಗೆ ಮೊದಲು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಅರವಿಂದ್ ಬೆಲ್ಲದ್ ಮಾತು ವೈರಲ್ ಆಗುತ್ತಿದೆ.

BL Santhosh supporters explaining the BJP loss in their way

ಏನ್ ಹೇಳಿದ್ರು ಅರವಿಂದ್ ಬೆಲ್ಲದ್?

ಫೇಸ್‌ಬುಕ್ ಪೋಸ್ಟ್ ಮೂಲಕ ಅರವಿಂದ್ ಬೆಲ್ಲದ್ ಈಗ ಬಿಎಲ್ ಸಂತೋಷ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಬೆಲ್ಲದ್ ಹೇಳಿಕೆ ಗಮನ ಸೆಳೆದಿದೆ. 'ಕಾರ್ಯಕರ್ತನ ಕೆಲಸ ಪಕ್ಷದ ಸೇವೆ ಮಾತ್ರ ಎಂದು ತಿಳಿದು ಆ ಸೇವೆಯಲ್ಲಿಯೇ ಅನುಕ್ಷಣ ನಿರತರಾಗಿದ್ದ ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು, ಹೆಮ್ಮೆಯ ಕಾರ್ಯಕರ್ತರಾಗಿದ್ದ ಶ್ರೀ ಬಿ.ಎಲ್ ಸಂತೋಷ್ ಜೀ ಅವರಿಗೆ ಧನ್ಯವಾದಗಳು. ನಿಮ್ಮ ಅವಿರತ ಸೇವೆ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ತುಂಬಿಸಿದೆ.' ಎಂದಿದ್ದಾರೆ ಬೆಲ್ಲದ್.

'ಪಕ್ಷಕ್ಕಾಗಿ ಶ್ರೀಯುತರು ಅನನ್ಯ ಸೇವೆ...'

ಅಲ್ಲದೆ ತಮ್ಮ ಪೋಸ್ಟ್‌ನಲ್ಲಿ ಸಂತೋಷ್ ಪರ ಮಾತು ಮುಂದುವರಿಸಿ, 'ಈ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಾನಾ ಕಾರಣಗಳಿವೆ. ಆದರೆ, ಅದೆಲ್ಲವನ್ನೂ ಮರೆತು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ಬಿ.ಎಲ್ ಸಂತೋಷ್ ಜೀ ಅವರ ವಿರುದ್ಧ ಮಿಥ್ಯಾರೋಪ ಮಾಡಲಾಗುತ್ತಿದೆ. ಪಕ್ಷಕ್ಕಾಗಿ ಶ್ರೀಯುತರು ಅನನ್ಯ ಸೇವೆ ಸಲ್ಲಿಸಿದ್ದಾರೆ. ಕಾರ್ಯಕರ್ತರೆಲ್ಲರೂ ಸುಳ್ಳು ಸುದ್ದಿ ಬಿತ್ತರಿಸುವವರ ಬಗ್ಗೆ ಎಚ್ಚರದಿಂದಿರಬೇಕು. ಹಾಗೆಯೇ, ನಮ್ಮ ಪಕ್ಷದ ಸೋಲಿನ ಕಾರಣಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿದ್ದೇವೆ.' ಎಂದು ಬಿಎಲ್ ಸಂತೋಷ್ ಅವರ ಬೆನ್ನಿಗೆ ನಿಂತಿದ್ದಾರೆ ಅರವಿಂದ್ ಬೆಲ್ಲದ್.

ಬಿಎಸ್‌ವೈ ವಿರೋಧಿ ಬಣದಲ್ಲಿ ಬೆಲ್ಲದ್?

ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸೋಕೆ ಪ್ರಯತ್ನ ನಡೆಸುತ್ತಿದ್ದ ಬಿಜೆಪಿಯ ಮತ್ತೊಂದು ಬಣದಲ್ಲಿ ಬೆಲ್ಲದ್ ಇದ್ರು ಎಂಬ ಆರೋಪವಿದೆ. ಹೀಗಾಗಿಯೇ ಬಿಎಸ್‌ವೈ ಸಿಎಂ ಸ್ಥಾನದಿಂದ ಕೆಳಗೆ ಇಳಿದ ನಂತರವೂ ಬೆಲ್ಲದ್‌ಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ ಎಂಬ ಆರೋಪ ಓಡಾಡಿತ್ತು. ಜೊತೆಗೆ ಸಿಎಂ ಕನಸು ಕಂಡ ಬೆಲ್ಲದ್ ಮಾತಿಗೆ ಪಕ್ಷದ ಒಳಗೆ ನಗುವಿನ ಸದ್ದು ಕೇಳಿತ್ತು. ಆದರೆ ಚುನಾವಣೆ ಫಲಿತಾಂಶ ಬಂದಾಗ ಅರವಿಂದ್ ಬೆಲ್ಲದ್ ಕನಸು ನುಚ್ಚುನೂರಾಗಿತ್ತು.

BL Santhosh supporters explaining the BJP loss in their way

66 ಸ್ಥಾನಕ್ಕೆ ತೃಪ್ತಿಪಟ್ಟ ಬಿಜೆಪಿ

ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಬಿಜೆಪಿ ಕೇವಲ 66 ಸ್ಥಾನ ಗಳಿಸಿದೆ. ಹಿಂದೆ ತಮ್ಮ ಪಕ್ಷ 120ಕ್ಕೂ ಹೆಚ್ಚು ಸ್ಥಾನ ಗೆದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ ಎಂದಿದ್ದರು ಬಿಜೆಪಿ ನಾಯಕರು. ಆದರೆ ರಿಸಲ್ಟ್ ಬಂದಾಗ ಬಹುತೇಕ ಶೇ. 50ರಷ್ಟು ಸ್ಥಾನಗಳು ಕುಸಿತವಾಗಿದ್ದವು. ಮತ್ತೊಂದ್ಕಡೆ ಬಿಜೆಪಿ ಬದ್ಧ ಶತ್ರು ಕಾಂಗ್ರೆಸ್ 135 ಸ್ಥಾನ ಗೆದ್ದು ಇತಿಹಾಸ ನಿರ್ಮಿಸಿದೆ. ಇದೇ ಸಂದರ್ಭದಲ್ಲಿ ಬಿಎಲ್ ಸಂತೋಷ್ ಅವರ ಪ್ರಯೋಗಗಳ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಬಿಎಲ್ ಸಂತೋಷ್ ವಿರುದ್ಧ ಸಿಟ್ಟೇಕೆ?

ಅಂದಹಾಗೆ ಬಿಜೆಪಿಯಲ್ಲಿ ಅ'ಸಂತೋಷ' ಮಡುಗಟ್ಟಿದ್ದು, ಯಾವುದೇ ಸಂದರ್ಭದಲ್ಲೂ ಈ ಅಸಮಾಧಾನವು ಸ್ಪೋಟಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಿನ ಘಟನೆ ಕಾಂಗ್ರೆಸ್‌ಗೆ ಮತ್ತಷ್ಟು ಸಹಕಾರಿ ಆಗುವ ಸಾಧ್ಯತೆ ಹೆಚ್ಚಾದ ಹೊತ್ತಲ್ಲೇ ಮತ್ತೊಂದು ಚರ್ಚೆ ಶುರುವಾಗಿದೆ. ಅದೇನೆಂದರೆ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಇಷ್ಟು ಸಿಟ್ಟೇಕೆ? ಎಂದು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದ್ದು, ಅದರ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.

ಬಿಎಲ್ ಸಂತೋಷ್ ಮಾಡಿದ್ದೇನು? ಆಗಿದ್ದೇನು?

ಹೌದು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜವಾಬ್ದಾರಿ ನಿರ್ವಹಿಸುವ ನೆಪದಲ್ಲಿ ಹಲವು ವಿಚಾರದಲ್ಲಿ ಮೂಗು ತೂರಿಸಿದ್ದರು ಎಂಬ ಆರೋಪ ಕೇಳಿಬರುತ್ತಿದೆ. ಪ್ರತಿಯೊಂದರಲ್ಲೂ 'ಶಕ್ತಿ'ಪ್ರದರ್ಶನಕ್ಕೆ ಮುಂದಾದದ್ದು ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಎಸ್ ಯಡಿಯೂರಪ್ಪ ವಿಚಾರ ಕೂಡ ಇಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರ ಹಿಂದೆ ಯಾರ ಕೈವಾಡವಿತ್ತು ಎಂಬುದು ಮಾತುಕತೆಗೆ ವೇದಿಕೆ ಒದಗಿಸಿದೆ.

BL Santhosh supporters explaining the BJP loss in their way

ಇಲ್ಲಿ ಪ್ರಮುಖವಾಗಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬ,ಲಕ್ಷ್ಮಣ ಸವದಿ ಜತೆ ಮತ್ತಿಬ್ಬರಿಗೆ ಡಿಸಿಎಂ ಹುದ್ದೆ ಕಲ್ಪಿಸಿ, ಬಿಎಸ್​ವೈ ಮೇಲೆ ನಿಯಂತ್ರಣದ ಪ್ರಯತ್ನಗಳು ನಡೆದವು ಎಂಬ ವಿಚಾರ. ಬಿಎಸ್​ವೈ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಬಾರಿ ಬಹಿರಂಗ ಹೇಳಿಕೆ ನೀಡಿದ್ದು, ಹಿಂದೆ ಬಿಎಸ್‌ವೈ ಸಿಎಂ ಪಟ್ಟದಿಂದ ಕೆಳಗಿಳಿಸಲು ಆಂತರಿಕವಾಗಿ ಒತ್ತಡ ಹೇರಿದ ಆರೋಪಗಳು ಆಂತರಿಕವಾಗಿ ಕಿಚ್ಚು ಹತ್ತಿಸಿವೆ. ಇದೆಲ್ಲದರ ಹಿಂದೆ ಬಿಎಲ್ ಸಂತೋಷ್ ಇದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಸರ್ಕಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ್ರಾ?

ಬಸವರಾಜ ಬೊಮ್ಮಾಯಿ ಆಡಳಿತ ನಡೆಸುವಾಗ ಮುಕ್ತವಾಗಿ ಕಾರ್ಯಸಲು ಅಡಚಣೆ ಮಾಡಿದ ಆರೋಪ, ಈ ನಡುವೆ ಸಚಿವ ಸಂಪುಟ, ನಿಗಮ- ಮಂಡಳಿಗಳ ನೇಮಕದಲ್ಲಿ ಹಸ್ತಕ್ಷೇಪ ಮಾಡಿದ ಮಾತುಗಳು ಕೂಡ ಇದೀಗ ಕೇಸರಿ ಪಾಳಯದಲ್ಲಿ ಚರ್ಚೆಗೆ ಬಂದಿವೆ. ಪಕ್ಷದೊಳಗೆ ಬಣಗಳ ಸೃಷ್ಟಿ, ಪರಸ್ಪರ ಕಾಲೆಳೆಯುವ ತಂತ್ರಗಾರಿಕೆ, ವರಿಷ್ಠರಿಗೆ ಮತ್ತೊಂದು ಬಣದ ವಿರುದ್ಧ ದೂರು ಸಲ್ಲಿಕೆಗೆ ಕುಮ್ಮಕ್ಕು. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಗುಂಪುಗಾರಿಕೆ, BSY ಮತ್ತಿತರರು ಮುಂದಿಟ್ಟ ಪಟ್ಟಿಗೆ ವಿರುದ್ಧವಾಗಿ ಇನ್ನೊಂದು ಪಟ್ಟಿ. ಹೀಗೆ ನಾನಾ ತಪ್ಪುಗಳೇ ಸೋಲಿಗೆ ಕಾರಣ ಎನ್ನುವ ಮಾತು ಕೇಳಿಬಂದಿದೆ.

ಒಟ್ನಲ್ಲಿ ಬಿಎಲ್ ಸಂತೋಷ್ ವಿರುದ್ಧ ರಾಜ್ಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿರುವ ಹೊತ್ತಲ್ಲೇ ಎಂಟ್ರಿ ಕೊಟ್ಟಿರುವ ಅರವಿಂದ್ ಬೆಲ್ಲದ್ ಸಂತೋಷ್ ಪರ ಬ್ಯಾಟ್ ಬೀಸಿದ್ದಾರೆ. ಹಿಂದಿನಿಂದಲೂ ಬಿಎಲ್ ಸಂತೋಷ್ ಬೆಂಬಲಿಗರ ಬಣದಲ್ಲಿ ಅರವಿಂದ್ ಬೆಲ್ಲದ್ ಗುರುತಿಸಿಕೊಂಡಿದ್ದರು. ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವಾಗ ಒತ್ತಡ ಹೇರಿದ್ದ ಗುಂಪಿನಲ್ಲಿ ಕೂಡ ಬೆಲ್ಲದ್ ಇದ್ದರು ಎಂಬ ಆರೋಪವಿತ್ತು. ಇಷ್ಟೆಲ್ಲದರ ನಡುವೆ ಸಂತೋಷ್ ಪರವಾಗಿ ಬೆಲ್ಲದ್ ಹಾಕಿದ ಪೋಸ್ಟ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+