ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಗಳೇ ಇವು: ಬಿಜೆಪಿ ತಿಳಿಸಿದ್ದೇನು
ಬೆಂಗಳೂರು, ಅಕ್ಟೋಬರ್ 23: ಕರ್ನಾಟಕ ರಾಜ್ಯ ಸರ್ಕಾರ ಅಧಿಕಾರ ಹಿಡಿದು ಈಗಾಗಲೇ ನಾಲ್ಕು ಐದು ತಿಂಗಳು ಪೂರೈಸುತ್ತಾ ಬಂದಿದೆ. ಈ ಮಧ್ಯೆ ಸರ್ಕಾರ ಹೇಗೆ ಅಧಿಕಾರಕ್ಕೆ ಬಂತು ಎಂಬುದರ ಕುರಿತು ಕರ್ನಾಟಕ ಬಿಜೆಪಿ ಮತ್ತೆ ಲೇವಡಿ ಮಾಡಿದೆ. ನಕಲಿ ಮತದಾರರ ಪಟ್ಟಿಯಿಂದಲೇ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದೆ.
ಸೋಮವಾರ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿಯು, ಕರ್ನಾಟಕದಲ್ಲಿ #ATMSarkara ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳು ಇವು ಎಂದು ವಾಗ್ದಾಳಿ ನಡೆಸಿದೆ.

* ನಕಲಿ ಮತದಾರರ ಪಟ್ಟಿ ವಿಚಾರವಾಗಿ ಭೈರತಿ ಸುರೇಶ್ ಆಪ್ತನ ಬಂಧನವಾಗಿದೆ.
* ಸುಳ್ಳು ಗ್ಯಾರಂಟಿಗಳ ಪುಕಾರು ಹಬ್ಬಿಸಿದೆ. ಗ್ಯಾರಂಟಿಗಳ ಹಣ ಜನತೆ ಕೈ ಸೇರಿಲ್ಲ.
* ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಕುಕ್ಕರ್ ಇಸ್ತ್ರಿ ಪೆಟ್ಟಿಗೆ, ಹಣ ಹಂಚಲಾಗಿದೆ
* ವಿದ್ಯುತ್, ಕಾವೇರಿ, ರೈತರ ವಿಚಾರದಲ್ಲಿ ಕಿವಿ ಮೇಲೆ ಕಲರ್ ಕಲರ್ ಹೂ ಇಡಲಾಗಿದೆ.
* ಜಾತಿ, ಭ್ರಷ್ಟಾಚಾರ ವಿಚಾರದಲ್ಲಿ ನಿರಂತರ ಸುಳ್ಳು ಸುದ್ದಿಗಳ ಹರಡಲಾಗುತ್ತಿದೆ.
ನಾವು ಕಾಂಗ್ರೆಸ್‌ಗೆ ಮತ ಹಾಕಿಲ್ಲ, ಆದರೂ ಹೇಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು ಎನ್ನುವ ಜನರ ಪ್ರಶ್ನೆಗೆ ಸಿದ್ದರಾಮ್ಯಯ್ಯ ಅವರ ಆಪ್ತ ಭೈರತಿ ಸುರೇಶ್ ಅವರ ನಕಲಿ ಮತದಾರರ ಪಟ್ಟಿಯೇ ಉತ್ತರ ಎಂದು ಕರ್ನಾಟಕ ಬಿಜೆಪಿ ತಿಳಿಸಿದೆ.

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಬಂದಿದ್ದ ಬಿಜೆಪಿಗೆ ಇದೀಗ ನಕಲಿ ಮತದಾರರ ಪಟ್ಟಿ ವಿಚಾರದಲ್ಲಿ ಕಾಂಗ್ರೆಸ್ ನಾಯಕನ ಬಂಧನವು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಅಸ್ತ್ರವಾಗಲಿದೆ.
ಈ ಹಿಂದೆ ವರುಣಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕುಕ್ಕರ್, ಹಣ ಹಂಚಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಇದು ನಿಮ್ಮ ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿನಿಂದಲೇ ಸಾಬೀತಾಗಿದೆ ಎಂದು ಬಿಜೆಪಿ ಗುಡುಗಿತ್ತು
ನಕಲಿ ವೋಟರ್ ಐಡಿ ತಯಾರಿಕೆ: ಬಂಧನ
ಜಾತಿ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾಂಗ್ರೆಸ್, ಕಾವೇರಿ ನೀರು, ವಿದ್ಯುತ್, ರೈತರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸದ್ಯ ಸಚಿವ ಬೈರತಿ ಸುರೇಶ್ ಆಪ್ತನನ್ನು ನಕಲಿ ಮತದಾರರ ಚೀಟಿ ಕುರಿತು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೈರತಿ ಸುರೇಶ್ ಆಪ್ತನಾದ ಮೌನೇಶ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು ಆತನ ಜತೆ ಶಾಮೀಲಾಗಿದ್ದ ಭಗತ್ ಹಾಗೂ ರಾಘವೇಂದ್ರ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಆರೋಪಿಗಳು ಹಣ ಕೊಟ್ಟರೆ ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಡಿಎಲ್‍ನ್ನು ಮಾಡಿಕೊಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.












Click it and Unblock the Notifications