ಡಿಕೆ ಶಿವಕುಮಾರ್ ವಿರುದ್ಧ ಸಚಿವರ ಬಂಡಾಯ?: ಕೃಷ್ಣ ಬೈರೇಗೌಡರಿಗೆ ವಿಪಕ್ಷ ಪ್ರಶ್ನೆ
ಬೆಂಗಳೂರು, ಆಗಸ್ಟ್ 16: ರಾಜ್ಯ ಕಂದಾಯ ಸಚಿವರು ಒಬ್ಬ ಜನಪ್ರತಿನಿಧಿಯಾಗಿ ಸಾರ್ವಜನಿಕರಂತೆ ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿದ್ದಾರೆ. ಇದು ಎಲ್ಲಡೆ ವೈರಲ್ ಆಗುತ್ತಿದ್ದು. ಈ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಚಿವರು ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೆಂಥಾ ಅಸಹಾಯಕ ಸ್ಥಿತಿ, ಇದೆಂಥಾ ಸರ್ಕಾರವೆಂದು ಜರಿದಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಈ ಕುರಿತು ಸಾಮಾಜಿಕ ಜಾಲತಾಣ (ಎಕ್ಸ್) ಖಾತೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿಡಿಯೋ ಪೋಸ್ಟ್ ರೀಟ್ವೀಟ್ ಮಾಡಿದ್ದಾರೆ.

ರಾಜ್ಯದ ಕಂದಾಯ ಸಚಿವರು ಮತ್ತು ಬ್ಯಾಟರಾಯನಪುರ ಶಾಸಕರಾದ ಕೃಷ್ಣ ಭೈರೇಗೌಡರು ಅತ್ಯಂತ ಅಹಾಯಕರಾಗಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುವುತ್ತಿರುವುದನ್ನು ನೋಡಿದರೆ ಈ ರಾಜ್ಯ ಕಾಂಗ್ರೆಸ್ ಸರ್ಕಾರ ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿರಿ ಕಾರಿದರು.
ಡಿಸಿಎಂ ವಿರುದ್ಧ ಸಚಿವರ ಬಂಡಾಯವೋ ಇದು?
ಸಚಿವ ಕೃಷ್ಣ ಬೈರೇಗೌಡ ಅವರೇ, ಆದೇಶ ಮಾಡಿ ಕೆಲಸ ಮಾಡಿಸಬೇಕಾದ ಸ್ಥಾನದಲ್ಲಿರುವ ತಾವು ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟೊಂದು ಅಸಹಾಯಕರಾಗಿ ಅಂಗಲಾಚುತ್ತಿದ್ದೀರಲ್ಲ ಏಕೆ?. ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದೀರೋ?ಅಥವಾ ಇದು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಬಹಿರಂಗ ಬಂಡಾಯದ ಮುನ್ಸೂಚನೆಯೋ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ತಮ್ಮ ಸಂಪುಟದಲ್ಲಿ ಸಚಿವರ ಮಧ್ಯೆ ಪರಸ್ಪರ ಒಂದು ಸ್ವಲ್ಪವೂ ತಾಳಮೇಳವಿಲ್ಲವೇ? ಒಬ್ಬ ಸಚಿವರು ಮತ್ತೊಬ್ಬ ಸಚಿವರ ಕರೆ ಸ್ವೀಕರಿಸುವುದಿಲ್ಲವೇ? ನಿಮ್ಮ ಸರ್ಕಾರದಲ್ಲಿ ಏನಾಗುತ್ತಿದೆ? ಎಂದು ಸಚಿವರನ್ನು ಹಾಗೂ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.

ಅಷ್ಟಕ್ಕೂ ಆಗಿದ್ದೇನು? ಏನಿದು ಸಚಿವರ ಬೇಡಿಕೆ?
ಗುರುವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ''ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳದತ್ತ ಸಂಚರಿಸುವ ಹೊರ ವರ್ತುಲ ರಸ್ತೆಯ ಪಕ್ಕದ ಹಾಳಾದ ಸರ್ವೀಸ್ ರಸ್ತೆಯ ವಿಡಿಯೋ ಹಂಚಿಕೊಂಡಿದ್ದರು. ದಯವಿಟ್ಟು ಯಾರಾದರೂ ಅಂದರೆ ಬಿಬಿಎಂಪಿಯೋ ಇಲ್ಲ ಬಿಎಂಆರ್‌ಸಿಎಲ್ ಅಧಿಕಾರಿಗಳೋ ಈ ರಸ್ತೆಯನ್ನು, ರಸ್ತೆ ಗುಂಡಿಯನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಸಹಾಯ ಮಾಡುವಂತೆ'' ಬೇಡಿಕೊಂಡಿದ್ದರು.
ಸಿಎಂ ಸೇರಿ ಎಲ್ಲ ಜನಪ್ರತಿನಿಧಿಗಳು ಹೀಗೆ ಮಾಡಿದರೆ ಗತಿ ಏನು?
ಇದು ವ್ಯಾಪಕ ಟೀಕೆಗೆ ಗುರಿ ಆಗಿದೆ. ಅಭಿವೃದ್ಧಿಯಂತಹ ಕೆಲಸ ಮಾಡಬೇಕಾದ ಜನನಾಯಕರ ಹೀಗೆ ಸಾರ್ವಜನಿಕರಂತೆ ಬೇಡಿಕೆ ಈಡೇರಿಸಿ, ಕೆಲಸ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸಚಿವರ ಅಸಹಾಯಕರಾದರೇ ಎಂಬ ಪ್ರಶ್ನೆ ಉದ್ಭವವಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಒಂದು ಕರೆ ಮಾಡಿದರೆ ಕೆಲಸ ಆಗುತ್ತದೆ.
ಅದು ಬಿಟ್ಟು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುವುದು ಎಷ್ಟು ಸರಿ?. ಇದೇ ರೀತಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ಎಲ್ಲ ಶಾಸಕರು, ಸಚಿವರು ತಮ್ಮ ಕ್ಷೇತ್ರದ ಸಮಸ್ಯೆಗಳೆಲ್ಲವನ್ನು ಫೋಟೋ, ವಿಡಿಯೋ ಹಾಕಿ ಅಭಿವೃದ್ಧಿ ಮಾಡಿ ಎಂದು ಕೇಳಿಕೊಂಡರೆ ಹೇಗಿರುತ್ತದೆ. ಅಭಿವೃದ್ಧಿ ಮಾಡುವವರಾರು? ಈ ಬೆಳವಣಿಗೆ ಸರಿಯಲ್ಲ ಎಂಬ ಚರ್ಚೆ ಶುರುವಾಗಿದೆ.












Click it and Unblock the Notifications