ಬಿಜೆಪಿ ಸಂಸದನಿಗೆ ತಿರುಗುಬಾಣವಾದ ರಸ್ತೆಗುಂಡಿ ಟ್ವೀಟ್, ಜನರಿಂದ ಟ್ರೋಲ್
Bengaluru Potholes: ಬೆಂಗಳೂರಲ್ಲಿ ರಸ್ತೆಗುಂಡಿಯ ಬಗ್ಗೆ ಬಿಜೆಪಿ ಸಂಸದ ಮಾಡಿರುವ ಟ್ವೀಟ್ ಅವರಿಗೇ ತಿರುಗು ಬಾಣವಾಗಿದೆ. ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರು ಬೆಂಗಳೂರಿನ ರಸ್ತೆಗುಂಡಿಯ ಬಗ್ಗೆ ವ್ಯಂಗ್ಯವಾಡಿದ್ದಾರೆ. ಆದರೆ, ಈ ಟ್ವೀಟ್ ಇದೀಗ ಅವರಿಗೇ ರಿವರ್ಸ್ ಗೇರ್ ರೀತಿ ಆಗಿದೆ. ರೀಸ್ವಾಮಿ ನೀವು 15 ವರ್ಷದಿಂದ ಇಲ್ಲಿ ಎಂ.ಪಿ ಅಲ್ವಾ ಇಲ್ಲೇನು ಮಾಡಿದ್ದೀರಿ ಎಂದು ಕೆಲವು ಕಾಮೆಂಟ್ ಮಾಡಿದ್ದಾರೆ. ಸಂಸದರ ಟ್ವೀಟ್ ಏನು, ಜನ ಇದಕ್ಕೆ ಹೇಗೆಲ್ಲ ರಿಯಾಕ್ಟ್ ಮಾಡ್ತಿದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿ ಹಾಗೂ ಸರ್ಕಾರ ನೀಡಿದ್ದ ಗಡುವುಗಳು ಇನ್ನೇನು ಮುಗಿಯಲು ಬಂತು. ಆದರೆ, ನಗರದಲ್ಲಿ ಇನ್ನೂ ರಸ್ತೆಗುಂಡಿಗಳು ಬಾಕಿ ಉಳಿದಿವೆ. ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವುದರಲ್ಲಿ ಬಿಬಿಎಂಪಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹಗಲು ರಾತ್ರಿ ಎನ್ನದೆ ಬೆಂಗಳೂರಲ್ಲಿರುವ ರಸ್ತೆಗುಂಡಿಗಳನ್ನು ಪರಿಶೀಲನೆ ಮಾಡಿ, ರಸ್ತೆಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ, ಇನ್ನೂ ಬೆಂಗಳೂರಲ್ಲಿ ರಸ್ತೆಗುಂಡಿಗಳು ಕಣ್ಣಿಗೆ ಬೀಳುತ್ತಿವೆ.
ಜೇಬು ತುಂಬಿಸಿಕೊಂಡ್ರಾ ಎಂದ ಬಿಜೆಪಿ ಸಂಸದ: ಬೆಂಗಳೂರಲ್ಲಿ ಮುಂದಿನ 15 ದಿನಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿಬಿಡುತ್ತೇವೆ. ಎಲ್ಲ ರಸ್ತೆಗಳನ್ನು ಜನಸ್ನೇಹಿ ಆಗಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿತ್ತು. ಕಾಂಗ್ರೆಸ್ ಸರ್ಕಾರ ನೀಡಿದ್ದ ಗಡುವು ಈಗಾಗಲೇ ಮುಕ್ತಾಯವಾಗಿದೆ ಆದರೆ, ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ಇನ್ನೂ ಇವೆ ಎಂದು ಬಿಜೆಪಿ ಸಂಸದ ಪಿ.ಸಿ ಮೋಹನ್ ಹೇಳಿದ್ದಾರೆ.

ಮುಂದುವರಿದು, ರಸ್ತೆಗುಂಡಿಗಳನ್ನು ಮುಚ್ಚುವ ಬದಲು ಅವರ ಜೇಬು ತುಂಬಿಸಿಕೊಂಡರೆ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಯಲ್ಲಿ ರಸ್ತೆಯೋ ರಸ್ತೆಯಲ್ಲಿ ಗುಂಡಿಯೋ ಎನ್ನುವಂತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಇದೇನಾ 15 ದಿನಗಳಲ್ಲಿ ರಸ್ತೆಗುಂಡಿ ಮುಚ್ಚುವ ಪರಿ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಸಂಸದರಿಗೆ ತಿರುಗುಬಾಣವಾದ ಟ್ವೀಟ್
ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರ ಟ್ವೀಟ್‌ಗೆ ಜನ ಕಾಮೆಂಟ್ ಮಾಡಿರುವುದನ್ನು ನೋಡಿದರೆ, ಈ ಟ್ವೀಟ್ ಅವರಿಗೆ ತಿರುಗುಬಾಣವಾದಂತಿದೆ.
They promised to fill Bengaluru’s potholes in 15 days, but ended up filling their pockets instead? pic.twitter.com/ekRaXQ653A
— P C Mohan (@PCMohanMP) September 18, 2024
ಅಮಿತ್ ಎನ್ನುವವರು ಬಿಜೆಪಿ ಅವಧಿಯಲ್ಲಿ ಎನು ಕೆಲಸ ಆಗಿಲ್ಲ. ಮಹದೇವಪುರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನೀವು ಒಮ್ಮೆಯಾದರೂ ಮೀಟಿಂಗ್ ಮಾಡಿದ್ದನ್ನು ನಾನು ನೋಡಿಯೇ ಇಲ್ಲ. ನೀವು ಪ್ರತಿನಿಧಿಸುವ ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ನಾನು ನೋಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ನೀವು 15 ವರ್ಷಗಳಿಂದ ಸಂಸದರು ಎಂದು ಭಾವಿಸುತ್ತೇನೆ. ನಿಮ್ಮ ಕ್ಷೇತ್ರ ಹೆಂಗಿದೆ ಎಂದು ಕೇಳಿದ್ದಾರೆ. ಇನ್ನು ಕೆಲವರು ಬಿಡಿ ಸರ್ ಇದಕ್ಕಿಂತ ಮುಂಚೆ ಏನಾದರು ಬದಲಾಗಿತ್ತಾ ಅಂತಲೂ ಕೇಳಿದ್ದಾರೆ. ಈ ಬೆಂಗಳೂರು ರಸ್ತೆಗುಂಡಿಗಳನ್ನು ಮುಚ್ಚುವುದರಲ್ಲಿ ಬಿಜೆಪಿಯ ಪಾತ್ರವೇನು ಇಲ್ಲವೇ.
ಬಿಜೆಪಿ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಬ್ಲೈಮ್ ಮಾಡ್ತಿದೆ. ನಿಮಗೆ ಜನರ ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿ ಇಲ್ಲವೇ ಎಂದು ಜನ ಪ್ರಶ್ನೆ ಮಾಡಿದ್ದಾರೆ. ನೀವು ಬರೀ ಟ್ವೀಟ್ ಮಾಡಿದರೆ ಸಾಕೇ, ನೀವೇನೂ ಮಾಡಲ್ವಾ ಪ್ರಧಾನಿ ಮೋದಿ ಅವರ ಹಿಂದೆ ಕುಳಿತು ಚಪ್ಪಾಳೆ ತಟ್ಟುತ್ತೀರಾ ಎಂದು ಕೆಲವರು ಹಿಂದಿಯಲ್ಲೂ ಟ್ವೀಟ್ ಮಾಡಿ ಸಂಸದರನ್ನು ಪ್ರಶ್ನೆ ಮಾಡಿದ್ದಾರೆ. ಕೆಲವೇ ಕೆಲವರು ಮಾತ್ರ ಬಿಜೆಪಿ ಸಂಸದರನ್ನು ಸಮರ್ಥನೆ ಮಾಡಿಕೊಂಡು ಟ್ವೀಟ್ ಮಾಡಿದ್ದಾರೆ.












Click it and Unblock the Notifications