Bengaluru 2nd Airport: 2ನೇ ವಿಮಾನ ನಿಲ್ದಾಣದ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ಸಂಸದ ಡಾ. ಸಿ.ಎನ್ ಮಂಜುನಾಥ್
ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ಆಯ್ಕೆ ಕಸರತ್ತು ತೀವ್ರವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಸ್ಥಳ ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆ ಇದೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳನ್ನು ನಡೆದಿದ್ದು ಮೂರು ಸ್ಥಳಗಳನ್ನು ಅಂತಿಮಗೊಳಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಅಂತಿಮ ನಿರ್ಧಾರ ಮಾಡಲಿದ್ದಾರೆ. ಸಿಎಂ ಜೊತೆ ಚರ್ಚಿಸಿ ಸ್ಥಳ ಆಯ್ಕೆ ಅಂತಿಮಗೊಳಿಸುವುದಾಗಿ ಸಚಿವ ಹೆಚ್.ಕೆ ಪಾಟೀಲ್ ಕೂಡ ತಿಳಿಸಿದ್ದಾರೆ.
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿರುವಾಗಲೇ ಬಿಜೆಪಿ ಸಂಸದ ಡಾ. ಸಿ.ಎನ್ ಮಂಜುನಾಥ್ ದೊಡ್ಡ ಅಪ್‌ಡೇಟ್ ಕೊಟ್ಟಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ದೆಹಲಿಯಲ್ಲಿ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕುರಿತಂತೆ ಚರ್ಚೆ ನಡೆಸಲಾಯಿತು ಎಂದಿದ್ದಾರೆ.

ಸಂಸದರ ಟ್ವೀಟ್‌ನಲ್ಲಿ ಏನಿದೆ?
ಗುರುವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಮತ್ತು ಇತರ ಸಂಸದರ ಜೊತೆಗೂಡಿ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರ ಜೊತೆ ಚರ್ಚೆಗಳನ್ನು ನಡೆಸಿದೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗತ್ಯವನ್ನು ಒತ್ತಿ ಹೇಳಿದ್ದೇನೆ ಎಂದಿದ್ದಾರೆ.
ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು ಎಂದು ಪರಿಗಣಿಸಲಾಗಿದೆ. ಬೆಂಗಳೂರು ಬೆಳವಣಿಗೆಯಾದಂತೆ ಬೇಡಿಕೆಯಲ್ಲಿರುವ ವಿಮಾನಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಷ್ಟವಾಗುತ್ತದೆ. ನಗರದಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸುವುದರಿಂದ ವಾಯು ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ ಮತ್ತು ಬೆಳವಣಿಗೆಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಮನವರಿಕೆ ಮಾಡಿದ್ದೇನೆ, ನನ್ನ ಮನವಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಎರಡನೇ ವಿಮಾನ ನಿಲ್ದಾಣ ಎಲ್ಲಿ?
ಮೂಲಗಳ ಪ್ರಕಾರ ನೆಲಮಂಗಲ ಮತ್ತು ಹಾರೋಹಳ್ಳಿ ಸಮೀಪ ಗುರುತಿಸಲಾಗಿರುವ ಸ್ಥಳಗಳು ಸದ್ಯ ಮೊದಲ ಆದ್ಯತೆಯ ಸ್ಥಳಗಳಾಗಿದೆ. ಸಚಿವರು, ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಫೆಬ್ರವರಿ ಅಂತ್ಯದ ವೇಳಗೆ ಸ್ಥಳ ಆಯ್ಕೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ.












Click it and Unblock the Notifications