ಸಿಎಂಗೆ ದೂರು ಹೋಗುವ ಮಟ್ಟಿಗೆ ಎಡವಟ್ಟು ಮಾಡಿಕೊಂಡ ಸಾಮ್ರಾಟ್ ಅಶೋಕ್
ಬೆಂಗಳೂರು, ಅ 9: ಯಡಿಯೂರಪ್ಪನವರ ಮತ್ತು ಈಗಿನ ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲೂ ಪಕ್ಷದ ಸಂಕಷ್ಟದ ಸಮಯದಲ್ಲಿ ಟ್ರಬಲ್ ಶೂಟರ್ ಆಗಿ ಕೆಲಸ ಮಾಡುವ ಸಚಿವ ಆರ್. ಅಶೋಕ್ ಅವರ ಕಾರ್ಯವೈಖರಿಯ ಬಗ್ಗೆ ಬೆಂಗಳೂರಿನ ಶಾಸಕರಿಗೆ ಅಸಮಾಧಾನ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಂಗಳೂರು ಉಸ್ತುವಾರಿಯ ಮೇಲೆ ಡಾ. ಅಶ್ವಥ್ ನಾರಾಯಣ್, ಆರ್.ಅಶೋಕ್ ಮತ್ತು ಬೈರತಿ ಬಸವರಾಜ್ ಅವರಿಗೆ ಕಣ್ಣಿತ್ತು. ಒಬ್ಬರಿಗೆ ಈ ಆಯಕಟ್ಟಿನ ಹುದ್ದೆಯನ್ನು ಕೊಟ್ಟರೆ, ಮಿಕ್ಕವರು ಅಸಮಾಧಾನಗೊಳ್ಳಬಹುದು ಎನ್ನುವ ಕಾರಣಕ್ಕಾಗಿ ಬಿಎಸ್‌ವೈ ಆಗಲಿ ಬೊಮ್ಮಾಯಿ ಆಗಲಿ ಆ ರಿಸ್ಕ್ ತೆಗೆದುಕೊಳ್ಳಲು ಹೋಗಿರಲಿಲ್ಲ.
ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಆರೋಗ್ಯ ಸಚಿವರು ಡೈನಾಮಿಕ್ ಆಗಿ ಕೆಲಸ ಮಾಡಿಲ್ಲ ಎನ್ನುವ ಕಾರಣಕ್ಕಾಗಿ, ಈ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ಹಲವರಿಗೆ ಹಂಚಿದ್ದರು. ಅದರಲ್ಲಿ ಅಶೋಕ್ ಕೂಡಾ ಒಬ್ಬರು. ಈ ಕೆಲಸವನ್ನು ಕೂಡಾ ಅಶೋಕ್ ಸಮರ್ಥವಾಗಿ ನಿಭಾಯಿಸಿದ್ದರು.
ಕೊರೊನಾದಿಂದ ಮೃತಪಟ್ಟ ಅನಾಥ ಶವಗಳಿಗೆ ಪಿಂಡ ಪ್ರಧಾನ ಮಾಡಿ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದ ಅಶೋಕ್ ಅವರು ಈಗ ಬೆಂಗಳೂರಿನ ಶಾಸಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇವರ ವಿರುದ್ದ ಮುಖ್ಯಮಂತ್ರಿಗಳಿಗೆ ಸದ್ಯದಲ್ಲೇ ದೂರು ಹೋಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಪಿತೃ ಪಕ್ಷದ ನಿಮಿತ್ತ ಕೊರೊನಾದಿಂದ ಮೃತಪಟ್ಟವರ ಪಿಂಡ ಪ್ರಧಾನವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿರೋ ಗೋಸಾಯಿಘಾಟ್‌ನಲ್ಲಿ ಅಶೋಕ್ ಮಾಡಿದ್ದರು. ಆ ಮೂಲಕ ಆತ್ಮಗಳಿಗೆ ಮುಕ್ತಿ ಕಾರ್ಯವನ್ನು ಸರಕಾರದ ವತಿಯಿಂದ ಮಾಡಿದ್ದರು.

ತಾನೇ ಉಸ್ತುವಾರಿ ಎನ್ನುವ ರೀತಿಯಲ್ಲಿ ಅಶೋಕ್ ವರ್ತಿಸುತ್ತಿದ್ದಾರೆ
ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ಹಂಚಿಲ್ಲ, ಆದರೆ, ತಾನೇ ಉಸ್ತುವಾರಿ ಎನ್ನುವ ರೀತಿಯಲ್ಲಿ ಅಶೋಕ್ ವರ್ತಿಸುತ್ತಿದ್ದಾರೆ ಎನ್ನುವ ಗುರುತರ ಆರೋಪ ಇವರ ಮೇಲೆ ಕೇಳಿ ಬರುತ್ತಿದೆ. ಬೆಂಗಳೂರಿನ ಏಳು ಶಾಸಕರು ಸದ್ಯದಲ್ಲೇ ಮುಖ್ಯಮಂತ್ರಿಗಳಿಗೆ ಈ ಸಂಬಂಧ ದೂರು ಸಲ್ಲಿಸಲಿದ್ದಾರೆ. ಪ್ರಮುಖವಾಗಿ ಬಿಡಿಎ (ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ) ವಿಚಾರದಲ್ಲಿ ಅಶೋಕ್ ಅನಾವಶ್ಯಕವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಉಸ್ತುವಾರಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸುಪರ್ದಿಯಲ್ಲಿದೆ
"ಬೆಂಗಳೂರು ಉಸ್ತುವಾರಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸುಪರ್ದಿಯಲ್ಲಿದೆ. ಆದರೆ, ತಾನೇ ಉಸ್ತುವಾರಿ ಎನ್ನುವ ರೀತಿಯಲ್ಲಿ ಅಶೋಕ್ ಅವರು ವರ್ತಿಸುತ್ತಿರುವುದು ಸಹಿಸಲಾಗುತ್ತಿಲ್ಲ. ಸಿಎಂ ಗಮನಕ್ಕೆ ಬಾರದೇ ಸಭೆಗಳನ್ನು ನಡೆಸುತ್ತಿದ್ದಾರೆ, ಬಿಬಿಎಂಪಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು, ಶಾಸಕರಿಗೆ ಬರಬೇಕಾಗಿರುವ ಅನುದಾನಕ್ಕೆ ಕತ್ತರಿ ಹಾಕುತ್ತಿದ್ದಾರೆ"ಎಂದು ನಗರದ ಶಾಸಕರೊಬ್ಬರು ಆರೋಪಿಸಿದ್ದಾರೆ.

ಎಸ್.ಆರ್.ವಿಶ್ವನಾಥ್ ಅವರ ಪವರ್ ಅನ್ನು ಕಟ್ ಮಾಡಿದ್ದೇನೆ
ಬಿಡಿಎಗೆ ಸಂಬಂಧಿಸಿದ ಕೆಲವೊಂದು ವಿಚಾರಗಳಿಗೆ ಮುಖ್ಯಮಂತ್ರಿಗಳು, ಕಂದಾಯ ಸಚಿವ ಅಶೋಕ್ ಅವರ ಸ್ಪಷ್ಟನೆಯನ್ನು ಕೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರ ಪವರ್ ಅನ್ನು ಕಟ್ ಮಾಡಿದ್ದೇನೆ ಎಂದು ಅಶೋಕ್ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎನ್ನುವ ಆರೋಪವೂ ಇವರ ಮೇಲಿದೆ. ಬೆಂಗಳೂರು ಶಾಸಕರ ಆಕ್ರೋಶ ಸದ್ಯದಲ್ಲೇ ಸ್ಪೋಟಗೊಳ್ಳಲಿದೆ.

ಬೆಂಗಳೂರು ನಗರ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳ ಪೈಕಿ ಏಳು ಸಚಿವರು
ಅಶೋಕ್ ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳ ಪೈಕಿ ಏಳು ಸಚಿವರಿದ್ದಾರೆ. ಆದರೆ, ಇವರ ಬಳಿ ಚರ್ಚಿಸದೇ ಅಶೋಕ್ ತನ್ನದೇ ನಿರ್ಧಾರ ತೆಗೆದುಕೊಂಡು ಮಿಕ್ಕ ಸಚಿವರಿಗೆ ತೀವ್ರ ಮುಜುಗರವನ್ನು ತಂದೊಡ್ಡುತ್ತಿದ್ದಾರೆ. ಬಿಡಿಎ ವಿಚಾರದಲ್ಲೂ ಅನಾವಶ್ಯಕವಾಗಿ ಮೂಗು ತೂರಿಸುತ್ತಿದ್ದಾರೆ ಎಂದು ವಿಶ್ವನಾಥ್ ಕೂಡಾ ಇತ್ತೀಚೆಗೆ ಬೇಸರ ವ್ಯಕ್ತ ಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications