ಸೋತ ಬಳಿಕ ಮಸೀದಿಗಳಿಗೆ ಕೊಟ್ಟಿದ್ದ ಚೆಕ್ ವಾಪಸ್ ಕೊಡಿ ಎಂದ ಕೆಜಿಎಫ್ ಬಾಬು: ಕೊಡಬೇಡಿ ಎಂದ ಬಿಜೆಪಿ ಶಾಸಕ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅತ್ಯಂತ ಶ್ರೀಮಂತ ಅಭ್ಯರ್ಥಿ ಕೆಜಿಎಫ್ ಬಾಬು, ಚುನಾವಣಾ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ 64 ಮಸೀದಿಗಳಿಗೆ 17.30 ಕೋಟಿ ರುಪಾಯಿ ಮೌಲ್ಯದ ಚೆಕ್‌ಗಳನ್ನು ಹಂಚಿಕೆ ಮಾಡಿದ್ದರು, ಸೋತ ಬೆನ್ನಲ್ಲೇ ತಾವು ಕೊಟ್ಟಿದ್ದ ಚೆಕ್‌ಗಳನ್ನು ವಾಪಸ್ ಕೊಡಿ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ.
ಉರ್ದು ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿರುವ ಅವರು, ನಾನು ನೀಡಿರುವ ಹಣವನ್ನು ಮಸೀದಿಗಳು ಬಳಸಬಾರದು, ಅದು ಸ್ವೀಕಾರರ್ಹವಲ್ಲದ ಹಣ, ಆದಷ್ಟು ಬೇಗ ನನ್ನ ಚೆಕ್‌ಗಳನ್ನು ವಾಪಸ್ ಮಾಡಿ ಎಂದು ಮಸೀದಿಯ ಸಮಿತಿಗಳಿಗೆ ಮನವಿ ಮಾಡಿದ್ದಾರೆ.

ಇಸ್ಲಾಮಿಕ್ ಸಂಸ್ಥೆಯಾದ ದಾರೂಲ್ ಉಲೂಮ್ ಹೊರಡಿಸಿರುವ ಫತ್ವಾ ಉಲ್ಲೇಖಿಸಿರುವ ಕೆಜಿಎಫ್ ಬಾಬು, ಚುನಾವಣಾ ಸಮಯದಲ್ಲಿ ರಾಜಕೀಯ ವ್ಯಕ್ತಿಗಳಿಂದ ಪಡೆಯುವ ಹಣ ಪಡೆಯುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ. ಕೆಜಿಎಫ್ ಬಾಬು ಜಾಹೀರಾತು ನೋಡಿದ ಮಸೀದಿ ಆಡಳಿತ ಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಹೀರಾತಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಮಾವಳ್ಳಿ ಮಸೀದಿ ಕಾರ್ಯದರ್ಶಿ ಖಾದಿರ್ ಅಹ್ಮದ್ ಷರೀಫ್, ಸ್ಥಳೀಯ ಮೌಲ್ಯಿಂದ ಫತ್ವಾ ಹೊರಡಿಸಿ, ಚಿಕ್ಕಪೇಟೆಯ ಮಸೀದಿಗಳನ್ನು ಅವರು ಗುರಿಯಾಗಿಸಿಕೊಂಡಿದ್ದಾರೆ. ಯಾವ ಮಸೀದಿ ಕೂಡ ಅವರ ಬಳಿ ಹಣ ಕೇಳಿರಲಿಲ್ಲ. ಅವರೇ ಎಲ್ಲಾ ಮಸೀದಿಗಳ ಗುರುಗಳನ್ನು ಆಹ್ವಾನಿಸಿ ಎಸ್‌ಆರ್ ನಗರದ ಹಕ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಚೆಕ್ ವಿತರಣೆ ಮಾಡಿದ್ದರು. ಚುನಾವಣೆಯಲ್ಲಿ ಸೋತ ಬಳಿಕ ವಾಪಸ್ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೆಜಿಎಫ್ ಬಾಬು ಮಸೀದಿಗಳಿಗೆ 25 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣದ ಚೆಕ್ ನೀಡಿದ್ದಾರೆ. ಸೋತ ಬಳಿಕ ಚೆಕ್ ವಾಪಸ್ ನೀಡಲು ಕೇಳಿದ್ದಾರೆ. ಶನಿವಾರ ಎಲ್ಲಾ ಸಮಿತಿಗಳ ಸಭೆ ಮಾಡಲಿದ್ದು, ನಂತರ ಅಂತಿಮ ತೀರ್ಮಾನ ಮಾಡುವುದಾಗಿ" ಮಸೀದಿ ಸಮಿತಿಗಳ ಅಧ್ಯಕ್ಷ ಖುದ್ದೂಸ್ ತಿಳಿಸಿದ್ದಾರೆ.
ಚೆಕ್ ವಾಪಸ್ ಕೊಡಬೇಡಿ : ಮಸೀದಿಗಳ ಬೆನ್ನಿಗೆ ನಿಂತ ಗರುಡಾಚಾರ್
ಕೆಜಿಎಫ್ ಬಾಬು ಚೆಕ್ ವಾಪಸ್ ಕೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ ಗರುಡಾಚಾರ್, ಯಾವುದೇ ಕಾರಣಕ್ಕೂ ಚೆಕ್‌ಗಳನ್ನು ವಾಪಸ್ ನೀಡಬೇಡಿ ಎಂದು ಮಸೀದಿಗಳಿಗೆ ಸೂಚನೆ ನೀಡಿದ್ದಾರೆ. ಸಮಿತಿಗಳು ಬ್ಯಾಂಕ್‌ಗಳಲ್ಲಿ ಕೆಜಿಎಫ್ ಬಾಬು ನೀಡಿರುವ ಚೆಕ್‌ಗಳನ್ನು ಬ್ಯಾಂಕ್‌ಗಳಲ್ಲಿ ಹಾಜರುಪಡಿಸಬೇಕು. ಚೆಕ್ ಬೌನ್ಸ್ ಆದರೆ ಬಾಬು ವಿರುದ್ಧ ವಂಸನೆ ಪ್ರಕರಣ ದಾಖಲಿಸಬೇಕು. ಈ ಪ್ರಕರಣದಲ್ಲಿ ನಾನು ಮಸೀದಿಗಳ ಪರವಾಗಿ ನಿಲ್ಲುತ್ತೇನೆ ಎಂದು ಗರುಡಾಚಾರ್ ಹೇಳಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಉದಯ್ ಗರುಡಾಚಾರ್ 57,299 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ನ ಆರ್‌ವಿ ದೇವರಾಜ್ 45,186 ಮತ ಪಡೆದಿದ್ದರು, ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು 20,931 ಮತಗಳನ್ನು ಪಡೆದು ಕಾಂಗ್ರೆಸ್ ಸೋಲಿಗೂ ಕಾರಣವಾಗಿದ್ದರು.












Click it and Unblock the Notifications