ನಾನು ಅವರ ಅಭಿಮಾನಿ, ಶಿಷ್ಯ: ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್
ಬೆಂಗಳೂರು, ಜುಲೈ. 02: ರಾಜ್ಯ ರಾಜಕಾರಣದಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೇ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯುವ ರಾಜಕಾರಣಿ ಎಂದು ಹೇಳಿದ್ದಾರೆ.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೇತೂಹಳ್ಳಿಯಲ್ಲಿ ನಡೆದ ಕುರುಬ ಸಮಾಜದ ಶಾಖಾಮಠದ ಗುದ್ದಲಿ ಪೂಜೆ ಹಾಗೂ ಕುರುಬ ಸಮಾಜದ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ನೆರವೆರಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, "2013-18 ರ ಅವಧಿಯ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಅನುದಾನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾದೆ" ಎಂದು ಹೇಳಿ ಅಚ್ಚರಿ ಮೂಡಿದಿದ್ದಾರೆ.
"ಸಿದ್ದರಾಮಯ್ಯರ ಸರಕಾರದ ಅನುದಾನದಲ್ಲಿ ನಾನು ಮತ್ತೆ ಶಾಸಕನಾದೆ. ಕರ್ನಾಟಕ ರಾಜ್ಯದಲ್ಲಿ ನುಡಿದಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ. ಯಾವತ್ತೂ ದ್ವೇಷ ರಾಜಕಾರಣ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಷ್ಯನಾಗಿ, ಅಭಿಮಾನಿಯಾಗಿ ಶಾಖಾ ಮಠದ ನಿರ್ಮಾಣಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ನೀಡುತ್ತೇನೆ" ಎಂದು ಎಸ್.ಟಿ.ಸೋಮಶೇಖರ್ ಘೋಷಿಸಿದ್ದಾರೆ.
''ಕಳೆದ ಬಾರಿಯ ಸಿದ್ದರಾಮಯ್ಯ ಸರಕಾರ ಕೊಟ್ಟ ಅನುದಾನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದ ನಾನು ಮತ್ತೆ ಶಾಸಕನಾಗಿ ಆಯ್ಕೆಯಾದೆ. ನಾನು ಪಕ್ಷಾಂತರ ಮಾಡಿದ್ದರೂ ಸಿದ್ದರಾಮಯ್ಯ ಅವರನ್ನು ಮರೆತಿರಲಿಲ್ಲ" ಎಂದು ಹೇಳಿದ್ದಾರೆ.
ಭಾನುವಾರ ನಡೆದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ಮುಖ್ಯಮಂತ್ರಿಗ ಸಿದ್ದರಾಮಯ್ಯ ಅವರು ನೆರವೇರಿಸಿದ್ದಾರೆ. ಈ ವೇಳೆ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿ, ಶಾಖಾ ಮಠದ ಈಶ್ವರಾನಂದಪುರಿ ಮಹಾಸ್ವಾಮೀಜಿ, ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ, ಶಿವಾನಂದಪುರಿ ಮಹಾಸ್ವಾಮೀಜಿ, ತ್ರಿದಂಡಿ ವೆಂಕಟರಾಮಾನುಜ ಮಹಾಸ್ವಾಮೀಜಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಮುಖಂಡರಾದ ಎಚ್.ವಿಶ್ವನಾಥ್, ಸಚಿವ ಭೈರತಿ ಸುರೇಶ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆ.ಎಸ್.ಈಶ್ವರಪ್ಪ ಸೇರಿ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications