ಇವಿ ಶೋರೂಂನಲ್ಲಿ ಯುವತಿ ಸಜೀವ ದಹನ! ಸರ್ಕಾರಕ್ಕೆ ಯತ್ನಾಳ್ ತರಾಟೆ
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಶೋರೂಂ ಧಗಧಗಿಸಿ ಯುವತಿಯೊಬ್ಬರು ಸಜೀವದಹನವಾಗಿರುವ ಘಟನೆಗೆ ರಾಜಧಾನಿ ಬೆಚ್ಚಿಬಿದ್ದಿದೆ. ಈ ಅವಘಡದ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆ ಸಂಬಂಧ ಯಾವುದೇ ಅಗ್ನಿ ಸುರಕ್ಷತೆ ಇಲ್ಲದೆ ಶೋರೂಂ ನಡೆಸುತ್ತಿದ್ದ ಮಾಲೀಕನನ್ನು ಪೊಲೀಸರು ಆದಷ್ಟು ಬೇಗ ಬಂಧಿಸಲಿ. ಮೃತ ಸಿಬ್ಬಂದಿಗೆ ಮಾಲೀಕರಿಂದಲೇ ದೇಣಿಗೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಗ್ನಿ ಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯದ ಹಾಗೂ ಅಗ್ನಿ ನಂದಿಸುವ ಉಪಕರಣಗಳನ್ನು ಹೊಂದದ, ಫೈರ್ ಡ್ರಿಲ್ ಮಾಡಿಸದ ಯಾವುದೇ ಶೋರೂಂಗಳು, ಶಾಲಾ ಕಾಲೇಜುಗಳು, ಗೋಡೌನ್‌ಗಳು ಹಾಗೂ ಅಗ್ನಿ ಸೂಕ್ಷ್ಮ ಪ್ರದೇಶಗಳ ಪರವನಾಗಿಯನ್ನು (ಲೈಸೆನ್ಸ್) ಸರ್ಕಾರ ರದ್ದು ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಫೈರ್ ಡ್ರಿಲ್ ಒಂದು ಮನೋರಂಜನಾ ಕಾರ್ಯವಾಗದೆ, ಕೆಲಸ ಮಾಡುವ ಸಿಬ್ಬಂದಿ ಅಗ್ನಿ ಆಕಸ್ಮಿಕ ಸಂಭವಿಸಿದಾಗ ಏನು ಮಾಡಬೇಕು ಎಂಬುದನ್ನು ಸರಿಯಾಗಿ ಕಲಿಯಬೇಕು. ಫೈರ್ ಡ್ರಿಲ್ ಅನ್ನು ಆಸ್ಪತ್ರೆಗಳಲ್ಲಿ, ಅಗ್ನಿ ಸೂಕ್ಷ್ಮ ವಲಯಗಳಲ್ಲಿ, ಫ್ಯಾಕ್ಟರಿ, ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಾಡಬೇಕು. ಅಗ್ನಿ ನಂದಿಸುವ ಉಪಕರಣಗಳು ಇಲ್ಲದಿದ್ದರೆ ಕೂಡಲೇ ಅಂತಹ ಕಚೇರಿ ಅಥವಾ ವ್ಯಾಪಾರ ವಹಿವಾಟು ಕೇಂದ್ರದ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಯತ್ನಾಳ್ ಸಲಹೆ ನೀಡಿದ್ದಾರೆ.

ಏನಿದು ಘಟನೆ?: ಬೆಂಗಳೂರಿನ ರಾಜಾಜಿನಗರದಲ್ಲಿರುವ ಎಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿತ್ತು. ಶೋರೂಂನಲ್ಲಿದ್ದ ಯುವತಿ ಈ ಅವಘಡದಲ್ಲಿ ಮೃತಪಟ್ಟಿದ್ದರು. ಈ ವೇಳೆ ಶೋರೂಂನಲ್ಲಿ ಯಾವುದೇ ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ತಿಳಿದುಬಂದಿದೆ.
ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ನವರಂಗ್ ಬಾರ್ ಬಳಿಯ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಈ ಘಟನೆ ಸಂಭವಿಸಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿದಿದೆ. ಈ ವೇಳೆ ಶೋರೂಂನಲ್ಲಿ ಸೇಲ್ಸ್ ಎಕ್ಸೆಕ್ಯುಟಿವ್ ಕೆಲಸ ಮಾಡುತ್ತಿದ್ದ 20 ವರ್ಷದ ಪ್ರಿಯಾ ಅಲ್ಲಿಂದ ಹೊರಬರಲಾರದೆ, ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನ ಓಕಳಿಪುರ ನಿವಾಸಿ ಪ್ರಿಯಾ ಎಂಬುವವರು ಈ ಘಟನೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಪ್ರಿಯಾ ಅವರು ಸುಮಾರು 3 ವರ್ಷಗಳಿಂದ ಈ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದರು. ಪದವೀಧರೆಯಾಗಿರುವ ಪ್ರಿಯಾ ಅವರು ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುವವರಿದ್ದರು. ಆದರೆ, ಜನ್ಮದಿನಕ್ಕೂ ಮುನ್ನವೇ ಅವರು ದುರಂತ ಅಂತ್ಯ ಕಂಡಿದ್ದಾರೆ.
ಶೋರೂಂನಲ್ಲಿ ಅಗ್ನಿ ವಿಚಾರವಾಗಿ ಯಾವುದೇ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಇಡೀ ಶೋರೂಂ ಸುಟ್ಟು ಭಸ್ಮವಾಗಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿಗಾಹುತಿಯಾಗಿವೆ. ಜಾಗಕ್ಕೂ ಮೀರಿ ಸ್ಕೂಟರ್‌ಗಳನ್ನು ಒಳಗೆ ನಿಲ್ಲಿಸಲಾಗಿತ್ತು ಎನ್ನುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ರಾಜಾಜಿನಗರ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ. ಈ ಘಟನೆಯಿಂದ ಬೆಂಗಳೂರು ಬೆಚ್ಚಿಬಿದ್ದಿದೆ.












Click it and Unblock the Notifications