ಬೆಂಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ: ಡೆತ್‌ನೋಟ್‌ನಲ್ಲಿ ಬಿಜೆಪಿ ಶಾಸಕರ ಹೆಸರು, ಪ್ರಕರಣ ದಾಖಲು
ಬೆಂಗಳೂರು, ಡಿಸೆಂಬರ್ 02: ಉದ್ಯಮಿಯೊಬ್ಬರು ಭಾನುವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಕಗ್ಗಲಿಪುರ ಪೊಲೀಸರು ಸೋಮವಾರ ಲಿಂಬಾವಳಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಪ್ರದೀಪ್ ಎಂದು ಪೊಲೀಸರು ಗುರುತಿಸಿದ್ದಾರೆ. ನೆಟ್ಟಿಗೆರೆ ಗ್ರಾಮದ ಸಮೀಪ ಕಾರಿನಲ್ಲಿ ತಲೆಗೆ ಗುಂಡು ಹೊಡೆದುಕೊಂಡು ಪ್ರದೀಪ್ ಮೃತಪಟ್ಟಿದ್ದಾರೆ.

ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಕೂಡ ಪತ್ತೆಯಾಗಿದ್ದು, ಇದರಲ್ಲಿ ಶಾಸಕ ಲಿಂಬಾವಳಿ ಮತ್ತು ಇತರ ಐವರ ಹೆಸರು ಹಾಗೂ ಫೋನ್ ಸಂಖ್ಯೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿವಿ9 ವರದಿ ಪ್ರಕಾರ, 47 ವರ್ಷದ ಪ್ರದೀಪ್ ಅವರು ಡೆತ್ ನೋಟ್‌ನಲ್ಲಿ ಮಹದೇವಪುರ ಶಾಸಕ ಲಿಂಬಾವಳಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಇತರ ಐವರು - ಗೋಪಿ ಕೆ, ಸೋಮಯ್ಯ, ಜಿ ರಮೇಶ್ ರೆಡ್ಡಿ, ಜಯರಾಮ ರೆಡ್ಡಿ ಮತ್ತು ರಾಘವ್ ಭಟ್ - ಅವರ ವಿರುದ್ದವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2018ರಲ್ಲಿ ಎಚ್‌ಎಸ್‌ಆರ್ ಲೇಔಟ್‌ನ ಹರಳೂರಿನಲ್ಲಿ ಕ್ಲಬ್ ತೆರೆಯಲು ಗೋಪಿ ಮತ್ತು ಸೋಮಯ್ಯ ಅವರನ್ನು ಪ್ರದೀಪ್ ಸಂಪರ್ಕಿಸಿದ್ದರು ಎಂದು ತಿಳಿದುಬಂದಿದೆ.
'ಲಾಭದಲ್ಲಿ 3 ಲಕ್ಷ ರೂಪಾಯಿ ಮತ್ತು ಕ್ಲಬ್‌ನಲ್ಲಿ ಕೆಲಸ ಮಾಡಿದ್ದಕ್ಕಾಗಿ ತಿಂಗಳಿಗೆ 1.5 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ನೀಡುವುದಾಗಿ ಇಬ್ಬರು ನನಗೆ ಭರವಸೆ ನೀಡಿದರು. ನಾನು ಅದನ್ನು ಒಪ್ಪಿಕೊಂಡು ಮೇ 2018 ರಿಂದ ಡಿಸೆಂಬರ್ 2018 ರ ವರೆಗೆ ಬ್ಯಾಂಕ್‌ನಲ್ಲಿ 1 ಕೋಟಿ ರೂಪಾಯಿಗಳಷ್ಟು ಹಣವನ್ನು ಜಮಾ ಮಾಡಿದೆ' ಎಂದು ಪ್ರದೀಪ್ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಮೈಸೂರಿನಲ್ಲಿರುವ ತನ್ನ ಮನೆಯನ್ನು ಮಾರಾಟ ಮಾಡಿ ಇಬ್ಬರಿಗೆ 40 ಲಕ್ಷ ರೂಪಾಯಿ ಕೊಟ್ಟಿದ್ದೇನೆ.
'ಉದ್ಯಮದಲ್ಲಿ ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಒಂದು ಪೈಸೆಯನ್ನೂ ನೀಡಿಲ್ಲ. ನಾನು ಶಾಸಕರ ಬಳಿ ಹೋದಾಗ ರಾಜಿ ನೆಪದಲ್ಲಿ ಒಂಬತ್ತು ತಿಂಗಳಲ್ಲಿ 90 ಲಕ್ಷ ರೂ.ಗಳನ್ನು ಇಸಿದುಕೊಂಡರು. ಆ ನಂತರ ಹಿಂತಿರುಗಿಸುವುದಾಗಿ ತಿಳಿಸಿದ್ದರು' ಎಂದು ಆರೋಪಿಸಿದ್ದಾರೆ.
ನನಗೆ ಶಾಸಕರು ಸಹಾಯ ಮಾಡಿಲ್ಲ, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದೇನೆ ಎಂದು ಪ್ರದೀಪ್ ಬರೆದಿದ್ದಾರೆ.
'ರಮೇಶ್ ರೆಡ್ಡಿ ಎಂಬುವವರಿಂದ 10 ಲಕ್ಷ ಸಾಲ ತೆಗೆದುಕೊಂಡಿದ್ದೆ, ನನ್ನ ಕೃಷಿ ಆಸ್ತಿ ಮಾರಾಟ ಮಾಡಿ 35 ಲಕ್ಷ ರೂ. ಹಣವನ್ನು ಅವರಿಗೆ ನೀಡಿದ್ದೆ' ಎಂದು ಹೇಳಿದ್ದಾರೆ.

'ಆದರೆ, ಅವರು ಹೆಚ್ಚಿನ ಹಣ ವಸೂಲಿ ಮಾಡುವುದಾಗಿ ಬೆದರಿಸುತ್ತಿದ್ದಾರೆ. ರಾಘವ ಭಟ್ ನನ್ನಿಂದ 20 ಲಕ್ಷ ರೂ. ತೆಗೆದುಕೊಂಡಿದ್ದಾರೆ. ಅವರು ಇಂದಿಗೂ ಅದನ್ನು ವಾಪಸ್ ನೀಡಿಲ್ಲ' ಎಂದು ಪ್ರದೀಪ್ ಆರೋಪಿಸಿದ್ದಾರೆ.
ಮೃತದೇಹ ಪತ್ತೆಯಾದ ನಂತರ, ಫೋರೆನ್ಸಿಕ್ ತಂಡವು ಸಾವಿಗೆ ನಿಜವಾದ ಕಾರಣವನ್ನು ಕಂಡುಹಿಡಿಯಲು ಸ್ಥಳಕ್ಕೆ ತಲುಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications