ಹೆಚ್‌ಡಿಕೆ, ಸಿದ್ದರಾಮಯ್ಯ, ಡಿಕೆಶಿ ಸೋಲಿಗೆ ಬಿಜೆಪಿ ರಣತಂತ್ರ?
ಬೆಂಗಳೂರು: ಕ್ಷಣಕ್ಷಣಕ್ಕೂ ಚುನಾವಣೆ ರಂಗೇರುತ್ತಿದೆ. ಅದರಲ್ಲೂ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ರಣತಂತ್ರ ಹೂಡಿದೆ. ಜೊತೆಗೆ ವಿರೋಧ ಪಕ್ಷಗಳ ಘಟಾನುಘಟಿ ನಾಯಕರಿಗೂ ಸೋಲಿನ ರುಚಿ ತೋರಿಸಲು ಕಮಲ ಪಾಳಯದ ವರಿಷ್ಠರು ತೊಡೆತಟ್ಟಿ ನಿಂತಿದ್ದಾರೆ. ಪ್ರಮುಖವಾಗಿ ಹೆಚ್‌ಡಿಕೆ, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಸೋಲಿನ ಬಲೆ ಎಣೆದಿದೆ ಬಿಜೆಪಿ. ಆ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.
ದೇಶದಲ್ಲಿ ಅಧಿಕಾರ ಹಿಡಿಯಲು ಕರ್ನಾಟಕ ಬಹುಮುಖ್ಯ. ಇಲ್ಲಿ ಸರ್ಕಾರ ರಚನೆ ಮಾಡುವ ಪಕ್ಷಕ್ಕೆ ಲೋಕಸಭೆಯಲ್ಲಿ ಕೂಡ ಸಾಕಷ್ಟು ಅನುಕೂಲ ಆಗುತ್ತದೆ. ಹೀಗಾಗಿಯೇ ಬಿಜೆಪಿ ಮತ್ತು ಕಾಂಗ್ರೆಸ್ ಜಿದ್ದಿಗೆ ಬಿದ್ದು ಕರ್ನಾಟಕದಲ್ಲಿ ಗೆಲುವು ಪಡೆಯಲು ಪರದಾಡುತ್ತಿವೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರನ್ನ ಅವರದ್ದೇ ಕ್ಷೇತ್ರದಲ್ಲಿ ಕಟ್ಟಿಹಾಕಿ, ರಾಜ್ಯಾದ್ಯಂತ ಅವರೆಲ್ಲಾ ಸಂಚಾರ ಮಾಡದಂತೆ ಸೋಲಿನ ಬಲೆ ಎಣೆಯುತ್ತಿದೆಯಾ ಬಿಜೆಪಿ? ಎಂಬ ಅನುಮಾನ ಈಗ ಮೂಡಿದೆ. ಈ ಅನುಮಾನಕ್ಕೆ ಕಾರಣವೇನು? ಅನ್ನೋದನ್ನ ತಿಳಿಯೋಣ ಬನ್ನಿ.

ಹೆಚ್‌ಡಿಕೆ, ಸಿದ್ದರಾಮಯ್ಯ, ಡಿಕೆಶಿಗೆ ಶಾಕ್?
ಈ ಬಾರಿ ವಿರೋಧ ಪಕ್ಷದ ಘಟಾನುಘಟಿ ನಾಯಕರ ಕ್ಷೇತ್ರಗಳನ್ನೇ ಬಿಜೆಪಿ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಮಾಜಿ ಸಚಿವ ಡಿಕೆಶಿ ಕ್ಷೇತ್ರದಲ್ಲಿ ಪಕ್ಕಾ ಫೈಟ್ ಕೊಡುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗಿದೆ. ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ಸೈಲೆಂಟ್ ಆಗಿಲ್ಲ ಬಿಜೆಪಿ, ಜೊತೆಗೆ ಆಯಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದೆ. ದಿಲ್ಲಿಯಿಂದ ಬರುವ ವರಿಷ್ಠರ ಪಡೆ ಇದೇ ಕ್ಷೇತ್ರಗಳಲ್ಲಿ ಹೆಚ್ಚಾಗಿ ಪ್ರಚಾರವನ್ನೂ ನಡೆಸುತ್ತಿದೆ. ಇದರಿಂದ ಸಮಸ್ಯೆ ಏನು? ಅಂದ್ರಾ, ಆ ಬಗ್ಗೆ ಮುಂದೆ ಓದಿ.
ಘಟಾನುಘಟಿ ಲೀಡರ್ಸ್ ಲಾಕ್!
ಹೌದು, ಯಾವುದೇ ಒಬ್ಬ ನಾಯಕ ತನ್ನ ಪಕ್ಷದ ಗೆಲುವಿಗಿಂತ ಮುಖ್ಯವಾಗಿ ಮೊದಲು ತನ್ನ ಗೆಲುವಿನ ಬಗ್ಗೆ ಗಮನ ಕೇಂದ್ರೀಕರಿಸುತ್ತಾನೆ. ಹಿಂದಿನ ಚುನಾವಣೆಗಳೇ ಇದಕ್ಕೆ ಉದಾಹರಣೆ ಎನ್ನಬಹುದು. ತನ್ನ ಪಕ್ಷ ಗೆದ್ದು, ತಾನು ಸೋತು ಹೋದರೆ ಪ್ರಯೋಜನ ಏನು? ಇದೇ ಲಾಜಿಕ್ ಹಿಡಿದು ಬಿಜೆಪಿ ಗೇಮ್ ಶುರು ಮಾಡಿದಂತೆ ಕಾಣುತ್ತಿದೆ. ಅದರಲ್ಲೂ ಈ ಹಿಂದೆ ಮೈಸೂರಿನಲ್ಲಿ ಹೀನಾಯವಾಗಿ ಸೋಲು ಕಂಡ ಮಾಜಿ ಸಿಎಂ ಸಿದ್ದರಾಮಯ್ಯ ಅತ್ತ ಇತ್ತ ಅಲುಗಾಡದಂತೆ ಸದ್ಯ ವರುಣಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಪ್ರಚಾರ ಸಾಗಿದೆ. ಹಾಗೇ ಡಿಕೆಶಿ, ಹೆಚ್‌ಡಿಕೆ ಕ್ಷೇತ್ರದಲ್ಲೂ ಆಟ ಶುರುವಾಗಿದೆ.
ಚನ್ನಪಟ್ಟಣಕ್ಕೆ ಕೇಸರಿ ಪಡೆ ಮುತ್ತಿಗೆ
ಮಾಜಿ ಸಿಎಂ ಕುಮಾರಸ್ವಾಮಿಗೆ ಈ ಚುನಾವಣೆ ಅಗ್ನಿಪರೀಕ್ಷೆ. ಅದ್ರಲ್ಲೂ ಸ್ವತಃ HDK ಸ್ಪರ್ಧೆ ಮಾಡ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಶುರುವಾಗಿದೆ. ಹೇಗಾದರೂ ಹೆಚ್‌ಡಿಕೆಗೆ ಸೋಲಿನ ರುಚಿ ತೋರಿಸಬೇಕು ಅಂತಾ ಬಿಜೆಪಿ ಪಣತೊಟ್ಟಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ ಬಿರುಸಿನ ಪ್ರಚಾರ ಶುರುವಾಗಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಇನ್ನೂ ಹಲವು ಘಟಾನುಘಟಿ ನಾಯಕರು ಯೋಗೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ಜೊತೆಗೆ ಸಿನಿಮಾ ತಾರೆಯರ ಅಬ್ಬರ ಕೂಡ ಜೋರಾಗಿದೆ.

ಜೆಡಿಎಸ್‌ಗೆ ಶಾಕ್ ನೀಡಲು ಸಿದ್ಧತೆ?
ಇಲ್ಲಿ ಪ್ರಮುಖವಾಗಿ ಒಂದು ವಿಚಾರವನ್ನ ನಾವು ಗಮನಿಸಬೇಕು, ಜೆಡಿಎಸ್ ಪಕ್ಷದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬಿಟ್ಟರೆ ಸದ್ಯದ ಸ್ಥಿತಿಯಲ್ಲಿ ಭಾರಿ ವರ್ಚಸ್ಸು ಇರುವ ನಾಯಕ ಮತ್ತೊಬ್ಬರಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಕೂಡ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರೂ ಅಷ್ಟೊಂದು ಪ್ರಬಲವಾಗಿ ಕ್ಯಾಂಪೇನ್ ಸಾಧ್ಯ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ಕ್ಷೇತ್ರದಲ್ಲಿ ಶಾಕ್ ಕೊಟ್ಟರೆ, ಅನಿವಾರ್ಯ ಸ್ಥಿತಿ ಎದುರಾಗಿ ಹೆಚ್‌ಡಿಕೆ ತಮ್ಮ ಕ್ಷೇತ್ರದಲ್ಲೇ ಉಳಿದು ಪ್ರಚಾರ ನಡೆಸಬೇಕಾಗಿ ಬರುತ್ತದೆ.
ಸಿದ್ದರಾಮಯ್ಯ ವಿರುದ್ಧವೂ ಅಸ್ತ್ರ!
ಕಾಂಗ್ರೆಸ್‌ನ ಮಾಸ್ ಲೀಡರ್‌ಗಳ ಪೈಕಿ ಸಿದ್ದರಾಮಯ್ಯ ಮುಂಚೂಣಿಯಲ್ಲಿ ನಿಲ್ಲುತ್ತರೆ. ಆದರೆ 2018ರ ಚುನಾವಣೆಯಲ್ಲಿ ಮೈಸೂರಿನಲ್ಲೇ ಹೀನಾಯವಾಗಿ ಸೋಲು ಎದುರಾಯ್ತು. ಈಗ ಇದೇ ಅಸ್ತ್ರವನ್ನು ಮರು ಪ್ರಯೋಗ ಮಾಡಲು ಬಿಜೆಪಿ ಸಿದ್ಧವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಇದು ತಮ್ಮ ಕೊನೇ ಚುನಾವಣೆ ಅಂತಾ ಬೇರೆ ಹೇಳಿಬಿಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಲಾಕ್ ಆಗುವಂತೆ ಮಾಡಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಪರ ಓಡಾಡುವ ನಾಯಕರ ಬಲ ಕಡಿಮೆ ಆಗುತ್ತದೆ ಎಂಬ ಲೆಕ್ಕಾಚಾರ ಕಮಲ ಪಾಳಯದ್ದಾಗಿರಬಹುದು.
ಡಿ.ಕೆ. ಶಿವಕುಮಾರ್ ವಿರುದ್ಧವೂ ರಣತಂತ್ರ
ಇದಿಷ್ಟೂ ಒಂದೆಡೆಯಾದರೆ, ಮತ್ತೊಂದು ಕಡೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೆಲುವಿಗೂ ಬ್ರೇಕ್ ಹಾಕಲು ಸದ್ಯ ಬಿಜೆಪಿ ಭರದ ಸಿದ್ಧತೆ ರೂಪಿಸಿದೆ. ಕಾಂಗ್ರೆಸ್ ಭದ್ರಕೋಟೆ ಕನಕಪುರ ಕ್ಷೇತ್ರಕ್ಕೆ ಲಗ್ಗೆ ಇಡಲು ಆರ್. ಅಶೋಕ್ ನೇತೃತ್ವ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬಿಜೆಪಿ ನಾಯಕರು, ವರಿಷ್ಠರ ದಂಡೇ ಕನಕಪುರ ಕ್ಷೇತ್ರಕ್ಕೆ ಬಂದು ಅಶೋಕ್ ಪರ ಪ್ರಚಾರ ಮಾಡಿದೆ. ಮುಂದೆ ಮತ್ತಷ್ಟು ಘಟಾನುಘಟಿ ನಾಯಕರು ಎಂಟ್ರಿಯಾಗುವ ನಿರೀಕ್ಷೆ ಇದೆ. ಈ ಮೂಲಕ ಕನಕಪುರದಲ್ಲೂ ಹೊಸ ತಂತ್ರ ಪ್ರಯೋಗಿಸುತ್ತಿದೆ ಕಮಲ ಪಡೆ.
ಕನಕಪುರ ಗೆದ್ದರೆ ಮತ್ತಷ್ಟು ಬಲ!
ಇದೀಗ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಡಿ.ಕೆ. ಶಿವಕುಮಾರ್ ವಿರುದ್ಧ ಗೆಲುವಿಗೆ ಬಿಜೆಪಿ ರಣತಂತ್ರವನ್ನ ರೂಪಿಸಿಲ್ಲ. ಇದರ ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸುವ ತಂತ್ರ ಕೂಡ ಇದರಲ್ಲಿದೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲವಾಗಿದೆ. ಜೆಡಿಎಸ್ ಬಿಟ್ಟರೆ ಕಾಂಗ್ರೆಸ್ ಮಾತ್ರ ಅವರ ವಿರುದ್ಧ ಗುಡುಗುವಷ್ಟು ಶಕ್ತಿಯುತವಾಗಿದೆ. ಆದೇ ಕನಕಪುರ ಕ್ಷೇತ್ರದಲ್ಲಿ ಕಮಲ ಅರಳಿದರೆ, ಹಳೇ ಮೈಸೂರು ಭಾಗದಲ್ಲಿಯೂ ಬಿಜೆಪಿಗೆ ಮತ್ತಷ್ಟು ಬಲ ಬರುವ ಲೆಕ್ಕಾಚಾರ ಕೂಡ ಇರಬಹುದು.
ವರ್ಕೌಟ್ ಆಗುತ್ತಾ ಬಿಜೆಪಿ ರಣತಂತ್ರ?
ಇಷ್ಟೆಲ್ಲಾ ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಬಿಜೆಪಿ ನಾಯಕರ ರಣತಂತ್ರ ವರ್ಕೌಟ್ ಆಗುತ್ತಾ? ಎಂಬ ಅನುಮಾನ ಕಾಡುವುದು ಪಕ್ಕಾ. ಅದು ವರ್ಕೌಟ್ ಆಗುತ್ತೋ, ಬಿಡುತ್ತೋ, ಆದರೆ ಭವಿಷ್ಯದಲ್ಲಿ ಈ ಲೆಕ್ಕಾಚಾರ ಉಪಯೋಗಕ್ಕೆ ಬರಬಹುದು. ಹೀಗಾಗಿಯೇ ದಿಲ್ಲಿಯಿಂದ ಬರುತ್ತಿರುವ ನಾಯಕರು ಬಿಜೆಪಿ ರಣತಂತ್ರ ರೂಪಿಸಿರುವ ಕ್ಷೇತ್ರಗಳ ಸುತ್ತಲೂ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಿರುವುದು ಗಮನಾರ್ಹ. ಈಗ ಪ್ರಧಾನಿ ಮೋದಿ ಅವರ ಪ್ರಚಾರ ಕೂಡ ಇದೇ ಕ್ಷೇತ್ರಗಳ ಸುತ್ತಲೂ ನಡೆಯುತ್ತಿರುವುದು ಮತ್ತೊಂದು ಹೈಲೈಟ್.
ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲಾ ನಿರ್ಧಾರ ಆಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೂಡಿರುವ ರಣತಂತ್ರಗಳು ಎಷ್ಟರಮಟ್ಟಿಗೆ ವರ್ಕೌಟ್ ಆಗಿದೆ ಎಂಬುದರ ರಿಸಲ್ಟ್ ಕೂಡ ಸಿಗಲಿದೆ.












Click it and Unblock the Notifications