ಒಂದು ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಯಿಂದ 3 ಲಕ್ಷ ವೆಚ್ಚ: ಬಿಜೆಪಿ ಆರೋಪ
ಬೆಂಗಳೂರು, ಅಕ್ಟೋಬರ್ 6: ಬೆಂಗಳೂರಿನಲ್ಲಿ ಒಂದು ರಸ್ತೆಗುಂಡಿಯನ್ನು ಮುಚ್ಚಲು ಬಿಬಿಎಂಪಿ 3 ಲಕ್ಷ ರೂ ವೆಚ್ಚ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚಲು ಮುಂದಾಗಿರುವುದೇನೋ ಸರಿ ಆದರೆ ಒಂದು ಗುಂಡಿ ಮುಚ್ಚಲು 3 ಲಕ್ಷ ರೂ ಖರ್ಚು ಮಾಡುತ್ತಿದ್ದಾರೆ, ನಿಜವಾಗಿಯೂ ಒಂದು ಗುಂಡಿಗೆ ಅಷ್ಟು ವೆಚ್ಚವಾಗಲಿದೆಯೇ ಎಂದು ಪ್ರಶ್ನಿಸಿದರು.
ರಸ್ತೆಗುಂಡಿಗಳನ್ನು ಚಿನ್ನ, ಅಥವಾ ಬೆಳ್ಳಿಯಿಂದ ಭರ್ತಿ ಮಾಡಲಾಗುತ್ತಿದೆಯೇ ಈ ಕುರಿತು ಸರ್ಕಾರ ಗಮನಹರಿಸುವುದು ಅಗತ್ಯವಿದೆ, ಒಂದು ಜನರ ಹಣ ಪೋಲಾಗುವುದನ್ನು ತಡೆಯುವ ಅಗತ್ಯವಿದೆ ಎಂದು ಹೇಳಿದರು.

ರಸ್ತೆಗುಂಡಿ ಭರ್ತಿ ವೆಚ್ಚದ ಲೆಕ್ಕ ಕೊಡಲಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಛೀಮಾರಿ ಹಾಕಿದ ನಂತರವೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಈ ಸರ್ಕಾರ ಸೂಕ್ಷ್ಮತೆ ಇಲ್ಲದ ದಪ್ಪ ಚರ್ಮದ ಸರ್ಕಾರ, ರಸ್ತೆಗುಂಡಿಗಳ ಭರ್ತಿಗೆ ತಗುಲುವ ವೆಚ್ಚ ಎಷ್ಟಾಗುತ್ತದೆ ಎಂದು ಒಮ್ಮೆಯೂ ಸರ್ಕಾರ ಆಲೋಚನೆ ಮಾಡಿಲ್ಲ ಎಂದರು.

ರಸ್ತೆ ಗುಂಡಿ ಮುಚ್ಚಲು ಬದ್ಧತೆ ಇಲ್ಲ
ಒಂದು ರಸ್ತೆ ಗುಂಡಿ ಮುಚ್ಚಲು 3 ಲಕ್ಷ ವೆಚ್ಚ ಮಾಡುತ್ತಿದೆ ಇವರೇನು ಚಿನ್ನ-ಬೆಳ್ಳಿಯಿಂದ ರಸ್ತೆ ಗುಂಡಿ ಮುಚ್ಚಲು ಮುಂದಾಗಿದ್ದಾರೆಯೇ, ಒಂದು ರಸ್ತೆ ಗುಂಡಿ ಮುಚ್ಚಲು 3 ಲಕ್ಷ ಬೇಕಾ ಎಂದು ಪ್ರಶ್ನಿಸಿದರು.ಈ ಬಗ್ಗೆ ಸರ್ಕಾರ ಮತ್ತು ಬಿಬಿಎಂಪಿ ಜನರಿಗೆ ಸೂಕ್ತ ಲೆಕ್ಕ ಕೊಡಬೇಕು

ದೆಹಲಿಗೆ ಹೋಗಿರುವುದು ಫ್ಯಾಮಿಲಿ ನಿಯೋಗ: ವ್ಯಂಗ್ಯ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಎಚ್.ಡಿ.ರೇವಣ್ಣ ಮೂವರೂ ದೆಹಲಿಗೆ ಹೋಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಇವರು ಮೂವರೇ ಹೋದರೆ ಅದು ಇದು ಸಮ್ಮಿಶ್ರ ಸರ್ಕಾರದ ನಿಯೋಗವೇ, ಇದೊಂದು ಫ್ಯಾಮಿಲಿ ನಿಯೋಗ ಎಂದು ವ್ಯಂಗ್ಯವಾಡಿದರು.
ನಿಯೋಗದಲ್ಲಿ ಪರಮೇಶ್ವರ, ಸಚಿವ ಡಿ.ಕೆ.ಶಿವಕುಮಾರ್ ಅವರನ್ನೂ ಕರೆದುಕೊಂಡು ಹೋಗಬೇಕಿತ್ತು. ಯಾಕೆ ಯಾರನ್ನೂ ಕರೆದುಕೊಂಡು ಹೋಗದೇ ಅಪ್ಪ ಮಕ್ಕಳು ಮಾತ್ರ ಹೋಗಿದ್ದಾರೆ ಎಂದರು.

ವರ್ಗಾವಣೆ ದಂಧೆ: ಶ್ವೇತಪತ್ರ ಹೊರಡಿಸಲಿ
ಸಚಿವ ರೇವಣ್ಣ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ, ಎಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು.ರಾಜ್ಯದಲ್ಲಿ 12 ಸಾವಿರ ಶಿಕ್ಷಕರಿಗೆ ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ, ಪೌರ ಕಾರ್ಮಿಕರೂ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ ಎಂದರು.












Click it and Unblock the Notifications