Nandini Ghee: ನಂದಿನಿ ತುಪ್ಪ ಬಳಸುವವರಿಗೆ ಬಿಗ್‌ಶಾಕ್, ಬೆಂಗಳೂರಲ್ಲೇ ನಡೀತಿದೆ ಈ ದಂಧೆ!
ಕರ್ನಾಟಕದ ಹೆಮ್ಮೆಯ ಹಾಗೂ ಜನಪ್ರಿಯ ಬ್ರ್ಯಾಂಡ್ ಆಗಿರುವ ನಂದಿನಿ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇತ್ತೀಚಿನ ನಂದಿನಿ ತುಪ್ಪ ಬಳಸುವವರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ರಾಜಧಾನಿ ಬೆಂಗಳೂರಿನಲ್ಲೇ ನಂದಿನಿ ತುಪ್ಪದ ವಿಚಾರದಲ್ಲಿ ದಂಧೆಯೊಂದು ಬೆಳಕಿಗೆ ಬಂದಿದೆ. ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ತಯಾರಿಸುವ ಜಾಲವನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ.
ಹೌದು, ನಂದಿನಿ ಬ್ರ್ಯಾಂಡ್‌ಗೆ ವಿಶ್ವಮನ್ನಣೆ ಸಿಕ್ಕಿದೆ. ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಲ್ಲಿಯೂ ಈ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ಪ್ರಸಾದವಾದ ಲಡ್ಡು ತಯಾರಿಗೂ ನಂದಿನಿ ತುಪ್ಪವನ್ನೇ ಬಳಕೆ ಮಾಡುತ್ತಿರುವುದು ಗೊತ್ತೇ ಇದೆ. ಹೀಗಿರುವಾಗ ಕರ್ನಾಟಕದ ವಿಶ್ವಾಸಾರ್ಹ ನಂದಿನಿ ಬ್ರ್ಯಾಂಡ್ ಅನ್ನು ಗುರಿಯಾಗಿಸಿಕೊಂಡು ಭಾರೀ ಪ್ರಮಾಣದ ತುಪ್ಪ ಕಲಬೆರಕೆ ಜಾಲವನ್ನು ಬೆಂಗಳೂರು ಪೊಲೀಸರು ಬಯಲು ಮಾಡಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ವಿಜಿಲೆನ್ಸ್ ವಿಂಗ್ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ 1,26,95,200 ರೂಪಾಯಿ ಮೌಲ್ಯದ 8,136 ಲೀಟರ್ ನಕಲಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈ ದಂಧೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳು ಕೂಡ ಸಿಕ್ಕಿಬಿದ್ದಿದ್ದಾರೆ.
ದಂಧೆ ಹೇಗೆ ನಡೆಯುತ್ತಿತ್ತು?
ಪಕ್ಕದ ತಮಿಳುನಾಡಿನಲ್ಲಿ ಕಲಬೆರಕೆ ತುಪ್ಪ ಮತ್ತು ಪಾಮ್ ಎಣ್ಣೆಯನ್ನು ಬೆರೆಸಿ, ನಕಲಿ ನಂದಿನಿ ಬ್ರಾಂಡ್ ಹೆಸರಲ್ಲಿ ಸ್ಯಾಚೆಟ್‌ಗಳು ಮತ್ತು ಬಾಟಲಿಗಳಲ್ಲಿ ಪ್ಯಾಕ್ ಮಾಡಲಾಗುತ್ತಿತ್ತು. ನಂತರ ವಿತರಕರ ಮೂಲಕ ಬೆಂಗಳೂರು ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತಿತ್ತು. ಇಲ್ಲಿ ಮಾತ್ರವಲ್ಲದೆ ಈ ದಂಧೆಯು ತಮಿಳುನಾಡಿನಿಂದ ಹೊರಗೂ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಈ ನಕಲಿ ತುಪ್ಪ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅಧಿಕಾರಿಗಳ ದಾಳಿಯಲ್ಲಿ 8,136 ಲೀಟರ್ ಕಲಬೆರಕೆ ತುಪ್ಪ, ತೆಂಗಿನಕಾಯಿ ಮತ್ತು ತಾಳೆ ಎಣ್ಣೆ, 1.19 ಲಕ್ಷ ರೂ. ನಗದು, ಸಾಗಣೆಗೆ ಬಳಸಿದ ನಾಲ್ಕು ವಾಹನಗಳು, ಕಲಬೆರಕೆ ತುಪ್ಪ ತಯಾರಿಸಲು ಬಳಸಿದ ಯಂತ್ರೋಪಕರಣ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವು ಒಟ್ಟು ಮೌಲ್ಯ ಸುಮಾರು 1.27 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ ಎಂದು ವಿವರಿಸಿದ್ದಾರೆ.












Click it and Unblock the Notifications