Bengaluru: ಬೆಂಗಳೂರು - ಹೈದರಾಬಾದ್ ನಡುವೆ ಪ್ರಮುಖ ಕಾರಿಡಾರ್‌ಗೆ ತೆಲಂಗಾಣ ಲಾಬಿ!
Bengaluru: ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ತೆಲಂಗಾಣದ ರಾಜಧಾನಿ ಹೈದರಾಬಾದ್ ನಡುವೆ ಇತ್ತೀಚಿನ ದಿನಗಳಲ್ಲಿ ಪೈಪೋಟಿ ಹೆಚ್ಚಳವಾಗಿದೆ. ಸಿಲಿಕಾನ್ ಸಿಟಿ ವ್ಯಾಲ್ಯೂ ಹಾಗೂ ಐಟಿ ರಾಜಧಾನಿ ವಿಚಾರದಲ್ಲಿ ಬೆಂಗಳೂರು ಮತ್ತು ತೆಲಂಗಾಣ ನಗರಗಳ ನಡುವೆ ತೀವ್ರ ಪೈಪೋಟಿ ಇದೆ. ಈ ರೀತಿ ಇರುವಾಗಲೇ ತೆಲಂಗಾಣದ ಮುಖ್ಯಮಂತ್ರಿ ಈ ಎರಡೂ ನಗರಗಳ ನಡುವೆ ಮಹತ್ವದ ಯೋಜನೆಯೊಂದನ್ನು ಅನುಷ್ಠಾನ ಮಾಡುವ ಪ್ರಸ್ತಾವನೆ ಇರಿಸಿದ್ದಾರೆ.
ಹೌದು, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿರುವಾಗಲೇ ಈ ಎರಡೂ ನಗರಗಳ ನಡುವೆ ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ಅಭಿವೃದ್ಧಿಪಡಿಸುವಂತೆ / ಯೋಜನೆಯನ್ನು ಘೋಷಣೆ ಮಾಡುವಂತೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವೇ ತಿಂಗಳುಗಳ ಮುಂಚೆಯಷ್ಟೇ ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಎಚ್ಎಎಲ್ ವಿಚಾರವಾಗಿ ಸಂಘರ್ಷ ಏರ್ಪಟ್ಟಿತ್ತು. ಕೇಂದ್ರದಲ್ಲಿ ಅಧಿಕಾರ ದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟದ ಪ್ರಮುಖ ಪಕ್ಷಗಳಲ್ಲಿ ಒಂದಾಗಿರುವ ತೆಲುಗು ದೇಶಂ ಪಾರ್ಟಿಯು ಬೆಂಗಳೂರಿನ ಎಚ್‌ಎಎಲ್ ಆಕರ್ಷಿಸುವುದಕ್ಕೆ ಭಾರೀ ಸರ್ಕಸ್ ನಡೆಸಿತ್ತು. ಆದರೆ ಆ ಪ್ರಯತ್ನದಲ್ಲಿ ಯಶಸ್ಸು ಕಂಡಿರಲಿಲ್ಲ. ಆಂಧ್ರಪ್ರದೇಶದ ನಂತರ ಇದೀಗ ತೆಲಂಗಾಣ - ಬೆಂಗಳೂರಿನ ಮೇಲೆ ಕಣ್ಣಿಟ್ಟಂತಿದೆ.
ಈಚೆಗೆ ಬೆಂಗಳೂರು ಹಾಗೂ ಹೈದರಾಬಾದ್ ನಡುವಿನ ಪ್ರಮುಖ ಯೋಜನೆಯ ಬಗ್ಗೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ತೆಲಂಗಾಣದ ಏರೊಸ್ಪೇಸ್ ಮತ್ತು ಡಿಫೆನ್ಸ್ ವಲಯದಿಂದ ಭರ್ಜರಿ ರಫ್ತು ಆಗುತ್ತಿದೆ. ಅಲ್ಲದೇ ಈ ಪ್ರಮಾಣವು ದ್ವಿಗುಣವಾಗಿದೆ. ಕಳೆದ 9 ತಿಂಗಳಲ್ಲಿ ಸುಮಾರು 30,000 ಕೋಟಿ ಔಷಧ ರಫ್ತು ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಮುಂದುವರಿದು ನಾಗರಿಕ ವಿಮಾನಯಾನ ಸಚಿವಾಲಯದಿಂದ ತೆಲಂಗಾಣವು ಏರೊಸ್ಪೇಸ್ ಪ್ರಶಸ್ತಿ ಬಂದಿದೆ. ಏರೊಸ್ಪೇಸ್ ವಲಯದಲ್ಲಿ ಹೂಡಿಕೆಗೆ ಕೌಶಲ ಅಭಿವೃದ್ಧಿ ಅಗತ್ಯವಾಗಿದೆ. ಈ ಕಾರಣಕ್ಕಾಗಿ ಬೆಂಗಳೂರು-ಹೈದರಾಬಾದ್ ಪ್ರದೇಶವನ್ನು ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ತೆಲಂಗಾಣದ ಏರೊಸ್ಪೇಸ್ ಮತ್ತು ರಕ್ಷಣಾ ವಲಯದ ಬೆಳವಣಿಗೆಯಲ್ಲಿ ಸಫ್ರಾನ್ ಘಟಕವು ಮಹತ್ವ ಮೈಲುಗಲ್ಲು ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಇದೀಗ ಈ ವಿಚಾರವಾಗಿ ಭಾರೀ ಚರ್ಚೆ ಮುಂದುವರಿದಿದೆ.












Click it and Unblock the Notifications